×
Ad

ತುಪ್ಪ- ಎಣ್ಣೆ ಸೇವಿಸದ ಆಹಾರ ಕ್ರಮ ಆರೋಗ್ಯಕ್ಕೆ ಹಾನಿಕರವೆ?

Update: 2026-01-22 18:39 IST

ಸಾಂದರ್ಭಿಕ ಚಿತ್ರ | Photo Credit : freepik

ಶೂನ್ಯ ಕೊಬ್ಬಿನ ಆಹಾರ ಕ್ರಮದ ಅತಿ ದೊಡ್ಡ ಸಮಸ್ಯೆಯೆಂದರೆ ಕೊಬ್ಬಿನಲ್ಲಿ ಕರಗುವ ವಿಟಮಿನ್ಗಳು ನಷ್ಟವಾಗುವುದು.

ತೂಕ ಇಳಿಸಿಕೊಳ್ಳಲು ಬಯಸುವವರು ಬಹಳಷ್ಟು ಬಾರಿ ತಮ್ಮ ಆಹಾರದಿಂದ ಎಣ್ಣೆ ಮತ್ತು ತುಪ್ಪವನ್ನು ಹೊರಗಿಡುತ್ತಾರೆ. ಕ್ಯಾಲರಿಗಳನ್ನು ಕಡಿಮೆ ಮಾಡಲು ಇದು ಸರಳವಾದ ದಾರಿ ಎಂದು ಕಂಡುಬಂದರೂ ಪೌಷ್ಠಿಕ ತಜ್ಞರ ಪ್ರಕಾರ ಎಲ್ಲಾ ಕೊಬ್ಬುಗಳನ್ನು ತೆಗೆದು ಹಾಕುವುದು ದೇಹದ ಸಹಜ ಸಮತೋಲನವನ್ನು ಕದಡುತ್ತದೆ. ಆಕಾಶ್ ಹೆಲ್ತ್ಕೇರ್ನಲ್ಲಿ ಪೌಷ್ಠಿಕ ತಜ್ಞರಾಗಿರುವ ಡಾ ಗಿನ್ನಿ ಕಾರ್ಲಾ ಅವರು ಆರೋಗ್ಯಕರ ಆಯ್ಕೆಗಳನ್ನು ಮಾಡುವಂತೆ ಸಲಹೆ ನೀಡಿದ್ದಾರೆ.

ಎಣ್ಣೆ-ತುಪ್ಪ ತೊರೆಯುವುದರಿಂದ ಏನಾಗುತ್ತದೆ?

ಗಿನ್ನಿ ಕಾರ್ಲಾ ಹೇಳುವ ಪ್ರಕಾರ, ಶೂನ್ಯ ಕೊಬ್ಬಿನ ಆಹಾರ ಕ್ರಮದ ಅತಿ ದೊಡ್ಡ ಸಮಸ್ಯೆಯೆಂದರೆ ಕೊಬ್ಬಿನಲ್ಲಿ ಕರಗುವ ವಿಟಮಿನ್ಗಳು ನಷ್ಟವಾಗುವುದು. “ಎಣ್ಣೆ ಮತ್ತು ತುಪ್ಪವನ್ನು ಸಂಪೂರ್ಣವಾಗಿ ತೊರೆದರೆ ವಿಟಮಿನ್ ಎ, ಡಿ, ಇ, ಕೆ ಸಿಗುವುದಿಲ್ಲ. ಈ ಪೌಷ್ಠಿಕಾಂಶಗಳನ್ನು ಬಳಸಬೇಕೆಂದರೆ ದೇಹಕ್ಕೆ ಆಹಾರದಲ್ಲಿನ ಕೊಬ್ಬಿನ ಅಗತ್ಯವಿರುತ್ತದೆ. ಈ ವಿಟಮಿನ್ಗಳು ಕಣ್ಣಿನ ಆರೋಗ್ಯ, ನಿರೋಧಕ ಶಕ್ತಿ, ಮೂಳೆ ಬಲ, ಆಂಟಿ ಆಕ್ಸಿಡಂಟ್ ರಕ್ಷಣೆ ಮತ್ತು ರಕ್ತ ಹೆಪ್ಪುಗಟ್ಟಲು ನೆರವಾಗುತ್ತವೆ.”

ಅಷ್ಟೇ ಅಲ್ಲ, ಆರೋಗ್ಯಕರ ಕೊಬ್ಬುಗಳು ಒಮೆಗಾ 3 ಮತ್ತು ಒಮೆಗಾ 6ನಂತಹ ಅಗತ್ಯ ಕೊಬ್ಬಿನ ಆಮ್ಲಗಳನ್ನು ಒದಗಿಸುತ್ತವೆ. ಇವುಗಳನ್ನು ದೇಹ ಸ್ವತಃ ಉತ್ಪತ್ತಿ ಮಾಡುವುದಿಲ್ಲ. ಇವು ಮೆದುಳಿನ ಕೆಲಸ, ಹಾರ್ಮೋನ್ಗಳು, ಜೀವಕೋಶದ ಸಮಗ್ರತೆ ಮತ್ತು ಉರಿಯೂತ ನಿಯಂತ್ರಣಕ್ಕೆ ಮುಖ್ಯವಾಗುತ್ತವೆ. ಕೊಬ್ಬು ಇಲ್ಲದೆ ಇದ್ದರೆ ತರಕಾರಿಗಳು ಮತ್ತು ಆರೋಗ್ಯಕರ ಆಹಾರಗಳ ಲಾಭಗಳು ಸಿಗುವುದಿಲ್ಲ

ಎಣ್ಣೆ-ತುಪ್ಪ ತೊರೆಯುವುದು ಆರೋಗ್ಯಕ್ಕೆ ಹಾನಿಕರವೆ?

ದೀರ್ಘಕಾಲ ಶೂನ್ಯ ಎಣ್ಣೆ-ತುಪ್ಪ ಸೇವನೆ ಹಾರ್ಮೋನ್ ಉತ್ಪಾದನೆ ಮೇಲೆ ಪರಿಣಾಮ ಬೀರುತ್ತದೆ. ಸಂತಾನೋತ್ಪತ್ತಿ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ನರವ್ಯೂಹ ದುರ್ಬಲಗೊಳ್ಳುತ್ತದೆ. ಕೊಬ್ಬುಗಳು ಹೊಟ್ಟೆ ತುಂಬಿದ ಭಾವನೆ ತರುತ್ತವೆ. ಅವುಗಳಿಲ್ಲದೆ ಜನರು ಹೆಚ್ಚು ಕಾರ್ಬೋಹೈಡ್ರೇಟ್ ಸೇವಿಸಬಹುದು. ಕಡಿಮೆ ಕೊಬ್ಬಿನ ಆಹಾರಗಳು ಹೆಚ್ಚಾಗಿ ಸಕ್ಕರೆಯ ಹಂಬಲ, ಅತಿ ತಿನ್ನುವುದು ಮತ್ತು ರಕ್ತದಲ್ಲಿನ ಸಕ್ಕರೆ ಪ್ರಮಾಣದ ಅಸ್ಥಿರತೆಗೆ ಕಾರಣವಾಗಲಿದೆ. ಕಾಲಾನುಸಾರ ಆಯಾಸ ಕಂಡುಬರಬಹುದು ಮತ್ತು ಚಯಾಪಚಯ ಕ್ರಿಯೆ ನಿಧಾನಗೊಳ್ಳಬಹುದು. ಚರ್ಮ ಮತ್ತು ಕೀಲುಗಳ ಆರೋಗ್ಯ ಮೇಲೂ ಪರಿಣಾಮವಾಗಬಹುದು.

ಸಾಕಷ್ಟು ಕೊಬ್ಬು ಸೇವನೆಯ ಚಿಹ್ನೆಗಳು

ಕೊಬ್ಬು ಸೇವನೆಯ ಕೊರತೆಯ ಚಿಹ್ನೆಗಳು ತಕ್ಷಣ ಕಾಣದೆ ಇರಬಹುದು. ಒಣಗಿದ ಅಥವಾ ಪದರ ಏಳುವ ಚರ್ಮ, ಕೂದಲು ಸೀಳು ಬಿದ್ದಿರುವುದು, ಕೂದಲು ಉದುರುವುದು ಮತ್ತು ಬಹಳ ಆಯಾಸ ಉಂಟಾಗುತ್ತದೆ. ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಕೊಬ್ಬಿನ ಆಮ್ಲಗಳು ಅಗತ್ಯವಿವೆ. ಹೀಗಾಗಿ ಮನಸ್ಥಿತಿಯಲ್ಲಿ ಏರುಪೇರು, ಏಕಾಗ್ರತೆಯ ಕೊರತೆ ಮತ್ತು ಮೆದುಳಿಗೆ ಮಂಜುಬಡಿದ ಅನುಭವವಾಗಬಹುದು.

ಜೊತೆಗೆ ನಿರಂತರ ಹಸಿವು, ಸಕ್ಕರೆ ತಿನ್ನುವ ಆಶಯ, ಋತುಚಕ್ರದಲ್ಲಿ ಏರುಪೇರು, ಕಡಿಮೆ ಫಲವತ್ತತೆ, ಆಗಾಗ ಸೋಂಕು ಕಾಣಿಸುವುದು, ಗಾಯಗಳು ನಿಧಾನವಾಗಿ ಗುಣವಾಗುವುದು ಮೊದಲಾದ ಸಮಸ್ಯೆ ಕಂಡುಬರಲಿದೆ.

ಎಣ್ಣೆ-ತುಪ್ಪದ ಬದಲು ಏನು ತಿನ್ನಬಹುದು?

ಹೆಚ್ಚುವರಿ ಎಣ್ಣೆ ತೊರೆಯಬೇಕೇ ವಿನಾ ಎಲ್ಲಾ ಕೊಬ್ಬುಗಳನ್ನು ಅಲ್ಲ. ಕಡಲೆಗಳು ಮತ್ತು ಬೀಜಗಳಾದ ಬಾದಾಮಿ, ವಾಲ್ನಟ್ಗಳು, ಫ್ಲ್ಯಾಕ್ಸ್ಬೀಜಗಳು, ಚಿಯಾ ಬೀಜಗಳು ಮತ್ತು ಸೂರ್ಯಕಾಂತಿ ಬೀಜಗಳನ್ನು ಸೇವಿಸಬಹುದು. ಇವುಗಳು ಆರೋಗ್ಯಕರ ಕೊಬ್ಬುಗಳು, ಪ್ರೊಟೀನ್, ಫೈಬರ್ ಮತ್ತು ಸೂಕ್ಷ್ಮಪೋಷಕಾಂಶಗಳನ್ನು ಒದಗಿಸುತ್ತವೆ. ಬೆಣ್ಣೆಹಣ್ಣು, ಮೊಸರು, ಯೋಗಾರ್ಟ್, ಟೋನ್ಡ್ ಹಾಲಿನಂತಹ ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳನ್ನು ಸೇವಿಸಬಹುದು.

ಮೀನು ಸೇವನೆಯಿಂದ ಒಮೆಗಾ 3 ಅಂಶ ಸಿಗುತ್ತಿದ್ದು, ಚಯಾಪಚಯ ಮತ್ತು ಹೃದಯದ ಆರೋಗ್ಯಕ್ಕೆ ಲಾಭಕರ. ಅಡುಗೆಯನ್ನು ಕಡಿಮೆ ಕೊಬ್ಬಿನಿಂದಲೂ ತಯಾರಿಸಬಹುದು. ಕನಿಷ್ಠ ಹಬೆಯಲ್ಲಿ ಬೇಯಿಸುವುದು, ಹುರಿಯುವುದು ಅಥವಾ ಗ್ರಿಲ್ ಮಾಡುವುದು, ಪೌಷ್ಠಿಕಾಂಶಕ್ಕೆ ಧಕ್ಕೆಯಾಗದಂತೆ ಹುರಿಯಬಹುದು. ಆ ರೀತಿಯಾಗಿ ಕ್ಯಾಲರಿಗಳನ್ನು ನಿರ್ವಹಿಸಬಹುದು.

ಕೃಪೆ: ಇಂಡಿಯನ್ ಎಕ್ಸ್ಪ್ರೆಸ್

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News