×
Ad

ಪಿಎಂ ಕಿಸಾನ್ ಪ್ರೋತ್ಸಾಹಧನ ಪಡೆಯಲು ಕೇಂದ್ರದ ರೈತರ ಗುರುತಿನ ಸಂಖ್ಯೆ ಕಡ್ಡಾಯ

Update: 2026-02-22 17:11 IST

Photo Credit : pmkisan.gov.in

ಬೆಂಗಳೂರು: ಕೇಂದ್ರ ಸರಕಾರದ ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್ ನಿದಿ ಯೋಜನೆಯಡಿಯಲ್ಲಿ 6 ಸಾವಿರ ರೂ.ಗಳ ಪ್ರೋತ್ಸಾಹಧನವನ್ನು ಪಡೆದುಕೊಳ್ಳಲು, ರಾಜ್ಯ ಸರಕಾರದ ಪ್ರೂಟ್ಸ್ ತಂತ್ರಾಂಶದ ಗುರುತಿನ ಸಂಖ್ಯೆಯಂತೆ ಕೇಂದ್ರ ಸರಕಾರದ ಅಗ್ರಿಸ್ಟ್ಯಾಕ್ ಯೋಜನೆ ಅಡಿ ಗುರುತಿನ ಸಂಖ್ಯೆ ಹೊಂದುವುದನ್ನು ಕಡ್ಡಾಯಗೊಳಿಸಿದೆ.

ಈಗಾಗಲೇ ರಾಜ್ಯ ಸರಕಾರದ ಪ್ರೂಟ್ಸ್ ತಂತ್ರಾಂಶದಿಂದ ದತ್ತಾಂಶವನ್ನು ಹಂಚಿಕೆ ಮಾಡಿ ಕೆಲವು ಫಲಾನುಭವಿಗಳಿಗೆ ಕೇಂದ್ರ ಸರಕಾರದ ರೈತರ ಗುರುತಿನ ಸಂಖ್ಯೆಯನ್ನು ಸೃಜಿಸಲಾಗಿರುತ್ತದೆ. ಆದರೆ ಹೆಚ್ಚಿನ ಪಿಎಂ ಕಿಸಾನ್ ಫಲಾನುಭವಿಗಳಿಗೆ ಕೇಂದ್ರದ ರೈತರ ಗುರುತಿನ ಸಂಖ್ಯೆಯನ್ನು ಸೃಜನೆ ಮಾಡಬೇಕಾಗಿರುತ್ತದೆ. ಇದಕ್ಕಾಗಿ ರೈತರ ಇ-ಕೆವೈಸಿ ಎಲೆಕ್ಟ್ರಾನಿಕ್ ಒಪ್ಪಿಗೆ ಹಾಗೂ ಒಟಿಪಿ ಆಧಾರಿತ ಮೊಬೈಲ್ ಸಂಖ್ಯೆ ಆಧಾರ್ ಇ-ಸೈನ್ ದೃಢೀಕರಣವು ಕಡ್ಡಾಯವಾಗಿರುತ್ತದೆ.

ಈ ಸಂಬಂಧ ರೈತರು ತಮ್ಮ ಹೆಸರಿನಲ್ಲಿರುವ ಎಲ್ಲ ಸರ್ವೆ ನಂಬರಿನ ಜಮೀನಿನ ವಿವರಗಳನ್ನು ಪ್ರೂಟ್ಸ್ ತಂತ್ರಾಂಶದಲ್ಲಿ ಸೇರ್ಪಡೆ ಮಾಡುವುದು ಮತ್ತು ಎಲ್ಲ ಜಮೀನಿನ ವಿವರಗಳನ್ನು ದಾಖಲಿಸಿರುವುದಾಗಿ ಪೋಷಣೆಯನ್ನೂ ಸಹ ಒಟಿಪಿ ಆಧಾರದ ಮೇಲೆ ಮಾಡಬೇಕಾಗಿರುತ್ತದೆ.

ಕೇಂದ್ರದ ಗುರುತಿನ ನೋಂದಣಿ ಆಗದೆ ಇರುವ ಪಟ್ಟಿಯು ರೈತ ಸಂಪರ್ಕ ಕೇಂದ್ರಗಳಲ್ಲಿ ಲಭ್ಯವಿದ್ದು, ಅಂತಹ ರೈತರು ತಮ್ಮ ಆಧಾರ್ ಕಾರ್ಡ್‍ಗೆ ಜೋಡಣೆಯಾಗಿರುವ ಮೊಬೈಲ್ ನಂಬರಿನ ಮೊಬೈಲ್‍ನ್ನು ಮತ್ತು ಪ್ರೂಟ್ಸ್ ತಂತ್ರಾಂಶದಲ್ಲಿ ಜೋಡಣೆಯಾಗಿರುವ ಮೊಬೈಲ್ ನಂಬರಿನ ಮೊಬೈಲ್‍ನ್ನು ತೆಗೆದುಕೊಂಡು ರೈತ ಸಂಪರ್ಕ ಕೇಂದ್ರ ಹಾಗೂ ತೋಟಗಾರಿಕೆ ಇಲಾಖೆ ಕಚೇರಿಗಳಿಗೆ ಭೇಟಿ ನೀಡಿ, ಮೇಲಿನ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿಕೊಂಡು ಕೇಂದ್ರದ ಗುರುತಿನ ಸಂಖ್ಯೆಯನ್ನು ಪಡೆದುಕೊಳ್ಳಬೇಕಾಗಿರುತ್ತದೆ.

ಇದಾದ ನಂತರವೇ ಮುಂದಿನ ಕಂತಿನ ಪಿಎಂ ಕಿಸಾನ್ ಯೋಜನೆಯ ಪ್ರೋತ್ಸಾಹಧನ ಪಾವತಿಸಲು ಕೇಂದ್ರ ಸರಕಾರಕ್ಕೆ ಸಾಧ್ಯವಾಗುತ್ತದೆ. ಈ ಪ್ರಕ್ರಿಯೆ 2019ರ ಫೆ.1ರ ಪೂರ್ವದಲ್ಲಿ ಜಮೀನು ಹೊಂದಿರುವ ರೈತರಿಗೆ ಮಾತ್ರ ಅನ್ವಯವಾಗುತ್ತದೆ. ಈ ದಿನಾಂಕದ ನಂತರ ಪಿ.ಎಂ.ಕಿಸಾನ್ತ್ಸಾಪ್ರೋಹಧನ ಪಡೆಯುತ್ತಿರುವ ರೈತರು ತಮ್ಮ ಹೆಸರಿನಲ್ಲಿರುವ ಜಮೀನನ್ನು ಮಾರಾಟ ಮಾಡಿದ್ದಲ್ಲಿ, ಅವರ ಹೆಸರಿನಲ್ಲಿ ಹಾಲಿ ಯಾವುದೇ ಜಮೀನು ಇಲ್ಲದಂತಹ ರೈತರಿಗೆ ಪಿ.ಎಂ.ಕಿಸಾನ್ ಪ್ರೋತ್ಸಾಹಧನ ಪಾವತಿಯನ್ನು ನಿಲ್ಲಿಸಲಾಗಿದೆ ಎಂದು ಬೆಂಗಳೂರು ನಗರ ಕೃಷಿ ಇಲಾಖೆಯ ಜಂಟಿ ಕೃಷಿ ನಿರ್ದೇಶಕ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News