Thailand | ಚಲಿಸುತ್ತಿದ್ದ ರೈಲಿನ ಮೇಲೆ ಕ್ರೇನ್ ಬಿದ್ದು ಕನಿಷ್ಠ 22 ಮಂದಿ ಮೃತ್ಯು
Photo credit: X/@BNODesk
ಕ್ವಾಲಾಲಂಪುರ: ಥಾಯ್ಲೆಂಡ್ ರಾಜಧಾನಿ ಬ್ಯಾಂಕಾಕ್‌ನಿಂದ ಥಾಯ್ಲೆಂಡ್‌ನ ಈಶಾನ್ಯ ಪ್ರಾಂತ್ಯಕ್ಕೆ ಪ್ರಯಾಣಿಸುತ್ತಿದ್ದ ರೈಲಿನ ಬೋಗಿಯ ಮೇಲೆ ಕ್ರೇನ್‌ವೊಂದು ಉರುಳಿ ಬಿದ್ದ ಪರಿಣಾಮ ಕನಿಷ್ಠ 22 ಮಂದಿ ಮೃತಪಟ್ಟಿದ್ದು, 30 ಮಂದಿ ಗಾಯಗೊಂಡಿದ್ದಾರೆ ಎಂದು NDTV ವರದಿ ಮಾಡಿದೆ.
ಬುಧವಾರ ಬೆಳಿಗ್ಗೆ ಬ್ಯಾಂಕಾಕ್‌ನಿಂದ ಸುಮಾರು 230 ಕಿಲೋಮೀಟರ್ ದೂರದ ನಖೋನ್ ರಾಚಸಿಮಾ ಪ್ರಾಂತ್ಯದ ಸಿಖಿಯೋ ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ.
"ಈ ಅವಘಡದಲ್ಲಿ ಕನಿಷ್ಠ 22 ಜನರು ಮೃತಪಟ್ಟಿದ್ದಾರೆ ಮತ್ತು 30ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ನಖೋನ್ ರಾಟ್ಚಸಿಮಾ ಪ್ರಾಂತ್ಯದ ಪೊಲೀಸ್ ಮುಖ್ಯಸ್ಥ ಥಚ್ಚಪೋನ್ ಚಿನ್ನಾವೊಂಗ್ ತಿಳಿಸಿರುವ ಬಗ್ಗೆ ಸುದ್ದಿ ಸಂಸ್ಥೆ AFP ವರದಿ ಮಾಡಿದೆ.
ರೈಲು ಥಾಯ್ಲೆಂಡ್ ನ ಉಬೊನ್ ರಾಟ್ಚಥಾನಿ ಪ್ರಾಂತ್ಯಕ್ಕೆ ತೆರಳುತ್ತಿತ್ತು. ಹೈಸ್ಪೀಡ್ ರೈಲು ಯೋಜನೆಯ ಭಾಗವಾಗಿ ಕೆಲಸ ನಡೆಯುತ್ತಿದ್ದ ವೇಳೆ ಕ್ರೇನ್ ದಿಢೀರ್ ಆಗಿ ಪಕ್ಕದಲ್ಲಿ ಹಾದುಹೋಗುತ್ತಿದ್ದ ರೈಲಿನ ಮೇಲೆ ಬಿದ್ದಿದೆ. ಇದರ ಬೆನ್ನಲ್ಲೆ ರೈಲಿನ ಕೆಲವು ಬೋಗಿಗಳು ಹಳಿ ತಪ್ಪಿದ್ದು, ಬೆಂಕಿ ಕಾಣಿಸಿಕೊಂಡಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ.