ಜರ್ಮನಿಯಲ್ಲಿ ಬೆಂಕಿ ಅವಘಡ | ಮೂವರು ಭಾರತೀಯರು ಮೃತ್ಯು; ರೊಮೇನಿಯನ್ ಪ್ರಜೆ ಬಂಧನ
Photo Credit: indiatoday.in
ಬೋಚಮ್: ಜರ್ಮನಿಯ ಬೋಚಮ್ ನಗರದ ವಸತಿ ಕಟ್ಟಡವೊಂದರಲ್ಲಿ ಮಂಗಳವಾರ ಮುಂಜಾನೆ ಸಂಭವಿಸಿದ ಅಗ್ನಿ ಅವಘಡದಲ್ಲಿ ಮೂವರು ಭಾರತೀಯರು ಮೃತಪಟ್ಟಿದ್ದು, ಐವರು ಗಾಯಗೊಂಡಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ ಕೃತ್ಯವಿರಬಹುದು ಎಂಬ ಶಂಕೆಯ ಮೇರೆಗೆ ಪೊಲೀಸರು ಅದೇ ಕಟ್ಟಡದಲ್ಲಿ ವಾಸಿಸುತ್ತಿದ್ದ 41 ವರ್ಷದ ರೊಮೇನಿಯನ್ ಪ್ರಜೆಯನ್ನು ಬಂಧಿಸಿದ್ದಾರೆ.
ಬೋಚಮ್ನ ಹಾಫ್ಸ್ಟೆಡೆ ಪ್ರದೇಶದಲ್ಲಿರುವ ಬಹುಕುಟುಂಬಗಳ ವಸತಿ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಮೃತಪಟ್ಟವರಲ್ಲಿ 25 ಮತ್ತು 27 ವರ್ಷದ ಇಬ್ಬರು ಮಹಿಳೆಯರು ಹಾಗೂ 26 ವರ್ಷದ ಪುರುಷರೊಬ್ಬರು ಸೇರಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ಬುಧವಾರ ವರದಿ ಮಾಡಿವೆ.
ತಾಂತ್ರಿಕ ದೋಷದಿಂದ ಬೆಂಕಿ ಕಾಣಿಸಿಕೊಂಡಿರುವ ಸಾಧ್ಯತೆಯನ್ನು ತನಿಖಾಧಿಕಾರಿಗಳು ತಳ್ಳಿಹಾಕಿದ್ದಾರೆ. ಇದು ಉದ್ದೇಶಪೂರ್ವಕವಾಗಿ ಬೆಂಕಿ ಹಚ್ಚಿದ ಕೃತ್ಯವಾಗಿರಬಹುದು ಎಂದು ಶಂಕಿಸಲಾಗಿದ್ದು, ಬೆಂಕಿ ಉದ್ದೇಶಪೂರ್ವಕವಾಗಿ ಹಚ್ಚಿದ್ದೇ ಅಥವಾ ಆಕಸ್ಮಿಕವಾಗಿ ಕಾಣಿಸಿಕೊಂಡಿತೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.
ಮೃತರ ಹೆಸರುಗಳು ಹಾಗೂ ಅವರು ಭಾರತದ ಯಾವ ರಾಜ್ಯದವರು ಎಂಬ ವಿವರಗಳನ್ನು ವರದಿಗಳಲ್ಲಿ ಉಲ್ಲೇಖಿಸಲಾಗಿಲ್ಲ. ಗಾಯಗೊಂಡ ಐವರ ರಾಷ್ಟ್ರೀಯತೆ ಮತ್ತು ಇತರ ವಿವರಗಳೂ ತಿಳಿದುಬಂದಿಲ್ಲ.
ಬೋಚಮ್ ಪೊಲೀಸರನ್ನು ಉಲ್ಲೇಖಿಸಿ ಜರ್ಮನಿಯ ಸಾರ್ವಜನಿಕ ಪ್ರಸಾರ ಸಂಸ್ಥೆ WDR ಮೃತರ ವಿವರಗಳನ್ನು ವರದಿ ಮಾಡಿದೆ. ಬಂಧಿತ ವ್ಯಕ್ತಿ ರೊಮೇನಿಯಾ ಪ್ರಜೆ ಎಂದು ಜರ್ಮನಿಯ ಸುದ್ದಿ ವಾಹಿನಿ n-tv, ಜರ್ಮನ್ ಸುದ್ದಿ ಸಂಸ್ಥೆ ಡ್ಯೂಷೆ ಪ್ರೆಸ್-ಏಜೆಂಟರ್ (DPA) ವರದಿಯನ್ನು ಉಲ್ಲೇಖಿಸಿ ತಿಳಿಸಿದೆ.
ಮಂಗಳವಾರ ಸ್ಥಳೀಯ ಕಾಲಮಾನ ಬೆಳಿಗ್ಗೆ 4.15ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿರುವ ಬಗ್ಗೆ ತುರ್ತು ಸೇವೆಗಳಿಗೆ ಮಾಹಿತಿ ನೀಡಲಾಗಿತ್ತು. ಅಗ್ನಿಶಾಮಕ ಸಿಬ್ಬಂದಿ ಎರಡನೇ ಮಹಡಿಯ ಫ್ಲ್ಯಾಟ್ ನಲ್ಲಿ ಮೂವರು ಮೃತಪಟ್ಟಿರುವುದನ್ನು ಪತ್ತೆಹಚ್ಚಿದರು. ಹೊಗೆಯನ್ನು ಸೇವಿಸಿದ್ದರಿಂದ ಅಸ್ವಸ್ಥಗೊಂಡ ಐವರನ್ನು ಬೋಚಮ್ ನ ಆಸ್ಪತ್ರೆಗಳಿಗೆ ದಾಖಲಿಸಲಾಯಿತು.
ಬೆಂಕಿಯ ಜ್ವಾಲೆಗಳು ಮೆಟ್ಟಿಲುಗಳ ಮೂಲಕ ಮೇಲಿನ ಮಹಡಿಗಳಿಗೆ ಹರಡಿದ್ದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ಅಡ್ಡಿಯಾಯಿತು. ಇದರಿಂದ ಮೇಲಿನ ಮಹಡಿಗಳಲ್ಲಿದ್ದ ನಿವಾಸಿಗಳನ್ನು ತಲುಪಲು ಅಗ್ನಿಶಾಮಕ ಸಿಬ್ಬಂದಿಗೆ ಮೆಟ್ಟಿಲುಗಳನ್ನು ಬಳಸಲು ಸಾಧ್ಯವಾಗಲಿಲ್ಲ ಎಂದು WDR ವರದಿ ಮಾಡಿದೆ.
n-tv ಪ್ರಕಟಿಸಿದ DPA ವರದಿಯ ಪ್ರಕಾರ, ಅಗ್ನಿಶಾಮಕ ಸಿಬ್ಬಂದಿ ಟರ್ನ್ ಟೇಬಲ್ ಏಣಿಯ ನೆರವಿನಿಂದ ಇಬ್ಬರನ್ನು, ಪೋರ್ಟಬಲ್ ಏಣಿಗಳ ಮೂಲಕ ಇನ್ನಿಬ್ಬರನ್ನು ಹಾಗೂ ಸುರಕ್ಷತಾ ಕುಶನ್ ಬಳಸಿ ಮತ್ತೊಬ್ಬರನ್ನು ರಕ್ಷಿಸಿದರು.
ಮೂವರು ಭಾರತೀಯರ ಸಾವಿಗೆ ಕಾರಣವಾದ ಈ ಘಟನೆಯು ಉದ್ದೇಶಪೂರ್ವಕ ಬೆಂಕಿ ಹಚ್ಚುವಿಕೆಯೇ ಎಂಬುದನ್ನು ತನಿಖಾಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.