ಬಾಂಗ್ಲಾದ ಮೊಂಗ್ಲಾ ಬಂದರು ಆಧುನೀಕರಣಕ್ಕೆ ಚೀನಾದಿಂದ 335.78 ಮಿ. ಡಾಲರ್ ಸಾಲ; ಭಾರತಕ್ಕೆ ಹೆಚ್ಚಿದ ಆತಂಕ
Photo Credit : PTI
ಬೀಜಿಂಗ್, ಅ. 14: ಬಾಂಗ್ಲಾದೇಶದ ಮೊಂಗ್ಲಾ ಬಂದರನ್ನು ಆಧುನೀಕರಣಗೊಳಿಸಲು 335.78 ದಶಲಕ್ಷ ಡಾಲರ್ (ಸುಮಾರು 2,800 ಕೋಟಿ ರೂ.) ಸಾಲ ನೀಡಲು ಚೀನಾದ ಆಮದು-ರಫ್ತು ಬ್ಯಾಂಕ್ ಅನುಮೋದನೆ ನೀಡಿದೆ. ಚೀನಾದ ಈ ನಡೆಯು ದಕ್ಷಿಣ ಏಷ್ಯಾದಲ್ಲಿ ಆಯಕಟ್ಟಿನ ವಿಚಾರಕ್ಕೆ ಸಂಬಂಧಿಸಿದಂತೆ ಭಾರತದ ಕಳವಳವನ್ನು ಹೆಚ್ಚಿಸಿದೆ.
ಶೇ. 2ರ ಬಡ್ಡಿದರದಲ್ಲಿ ಏರ್ಪಟ್ಟ ಈ ಸಾಲದ ಒಪ್ಪಂದಕ್ಕೆ ಬಾಂಗ್ಲಾದೇಶದ ಆರ್ಥಿಕ ಸಹಕಾರ ಕುರಿತ ಜಂಟಿ ಕಾರ್ಯದರ್ಶಿ ಅಲಿಯಾ ಮೆಹರ್ ಹಾಗೂ ಚೀನಾ ಎಕ್ಸಿಮ್ ಬ್ಯಾಂಕ್ನ ಸಹಾಯಕ ಜನರಲ್ ಮ್ಯಾನೇಜರ್ ಫೆಂಗ್ಜುನ್ ತಿಯಾನ್ ಸಹಿ ಹಾಕಿದ್ದಾರೆ. ಜೂನ್ನಲ್ಲಿ ಬಾಂಗ್ಲಾ ಪ್ರಧಾನಿ ತಾರೀಕ್ ರಹ್ಮಾನ್ ಚೀನಾಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಭಯ ದೇಶಗಳ ನಡುವೆ ಈ ಬಗ್ಗೆ ತಿಳಿವಳಿಕೆ ಒಪ್ಪಂದ ಏರ್ಪಟ್ಟಿತ್ತು. ದಕ್ಷಿಣ ಏಷ್ಯಾದ ಮೂಲಸೌಕರ್ಯ ಯೋಜನೆಗಳಲ್ಲಿ ಬೀಜಿಂಗ್ ತನ್ನ ಹೆಜ್ಜೆಗುರುತನ್ನು ವಿಸ್ತರಿಸುತ್ತಿರುವುದಕ್ಕೆ ಈ ಯೋಜನೆ ಸಾಕ್ಷಿಯಾಗಿದೆ ಎಂದು ಅಂತಾರಾಷ್ಟ್ರೀಯ ವಿದ್ಯಮಾನಗಳ ವಿಶ್ಲೇಷಕರು ತಿಳಿಸಿದ್ದಾರೆ.
ಈ ಬಂಡವಾಳವನ್ನು ಬಂದರಿನ ಸಾಮರ್ಥ್ಯ ವಿಸ್ತರಣೆ ಹಾಗೂ ಸರಕು ನಿರ್ವಹಣಾ ಸಾಮರ್ಥ್ಯವನ್ನು ಆಧುನೀಕರಿಸಲು ಬಳಸಲಾಗುತ್ತದೆ. ದಕ್ಷಿಣ ಏಷ್ಯಾದ ಸಾಗರ ಪ್ರದೇಶದಲ್ಲಿ ಚೀನಾದ ಪ್ರಭಾವವನ್ನು ತಡೆಯುವ ಉದ್ದೇಶದಿಂದ ಇಂಡಿಯಾ ಪೋರ್ಟ್ಸ್ ಗ್ಲೋಬಲ್ ಲಿಮಿಟೆಡ್ (ಐಪಿಜಿಎಲ್) ಮೂಲಕ ಭಾರತವು ಮೊಂಗ್ಲಾ ಬಂದರು ಟರ್ಮಿನಲ್ನ ನಿರ್ವಹಣೆಯ ಹಕ್ಕುಗಳನ್ನು ಪಡೆದುಕೊಂಡಿತ್ತು.
2024ರ ಆಗಸ್ಟ್ನಲ್ಲಿ ಬಾಂಗ್ಲಾದಲ್ಲಿ ಜನತಾ ಬಂಡಾಯದ ಪರಿಣಾಮ ಶೇಖ್ ಹಸೀನಾ ನೇತೃತ್ವದ ಸರಕಾರ ಪತನಗೊಂಡ ಬಳಿಕ ಬಾಂಗ್ಲಾದೊಂದಿಗಿನ ಭಾರತದ ಸಂಬಂಧ ಹದಗೆಟ್ಟಿದೆ. ಇದೀಗ ಬಾಂಗ್ಲಾ ಚೀನಾದತ್ತ ವಾಲುತ್ತಿರುವುದು ಹಾಗೂ ಮೊಂಗ್ಲಾ ಬಂದರು ಅಭಿವೃದ್ಧಿ ಮತ್ತು ತೀಸ್ತಾ ನದಿ ಪಾತ್ರದ ಯೋಜನೆಯಂತಹ ಮಹತ್ವದ ಉಪಕ್ರಮಗಳಲ್ಲಿ ಚೀನಾದ ಸಹಕಾರ ಹೆಚ್ಚುತ್ತಿರುವುದು ಭಾರತಕ್ಕೆ ಹೊಸ ಸವಾಲುಗಳನ್ನು ಒಡ್ಡಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.