ಕಿಂಬರ್ಲಿ ಗಿಲ್ಪಾಯಿಲ್ , ಡೊನಾಲ್ಡ್ ಟ್ರಂಪ್ | Photo Credit : AP

ವಾಶಿಂಗ್ಟನ್, ಅ. 14: ವೃತ್ತಿಪರ ದುರ್ನಡತೆಯ ಆರೋಪಗಳನ್ನು ಎದುರಿಸುತ್ತಿರುವ ಗ್ರೀಸ್ ನಲ್ಲಿನ ಅಮೆರಿಕದ ರಾಯಭಾರಿ ಕಿಂಬರ್ಲಿ ಗಿಲ್ಫಾಯಿಲ್ ಅವರಿಂದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜೀನಾಮೆ ಪಡೆದುಕೊಂಡಿದ್ದಾರೆ.

ಫಾಕ್ಸ್ ನ್ಯೂಸ್ನ ಮಾಜಿ ನಿರೂಪಕಿ ಹಾಗೂ ಡೊನಾಲ್ಡ್ ಟ್ರಂಪ್ ಜೂನಿಯರ್ (ಅಮೆರಿಕ ಅಧ್ಯಕ್ಷರ ಪುತ್ರ) ಅವರ ಮಾಜಿ ಪ್ರೇಯಸಿಯಾಗಿರುವ ಕಿಂಬರ್ಲಿ ಅವರು ಅಧ್ಯಕ್ಷರ ಬೆಂಬಲಿಗರಿಂದ ಹಣ ವಸೂಲಿ ಮಾಡಿದ ಹಾಗೂ ಶ್ರೀಮಂತ ಗ್ರೀಕ್ ಉದ್ಯಮಿಗಳಿಂದ ಐಷಾರಾಮಿ ಆತಿಥ್ಯ ಸ್ವೀಕರಿಸಿದ ಆರೋಪ ಎದುರಿಸುತ್ತಿದ್ದಾರೆ.

ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾಟಿ ಝಕಾರಿಯಾ ಅವರು ಮಂಗಳವಾರದ ಸುದ್ದಿಗೋಷ್ಠಿಯಲ್ಲಿ ಕಿಂಬರ್ಲಿ ಅವರ ವಜಾವನ್ನು ದೃಢಪಡಿಸಿದ್ದಾರೆ. ಗ್ರೀಸ್ ನಲ್ಲಿ ಅಮೆರಿಕದ ರಾಯಭಾರಿಯಾಗಿರುವ ಕಿಂಬರ್ಲಿ ಅವರ ನಡವಳಿಕೆ ತಮ್ಮ ಆಡಳಿತಕ್ಕೆ ಮೆಚ್ಚುಗೆಯಾಗಿಲ್ಲ ಎಂದು ಟ್ರಂಪ್ ಹೇಳಿಕೆ ನೀಡಿದ ಬೆನ್ನಲ್ಲೇ ಕಿಂಬರ್ಲಿ ವಜಾಗೊಂಡಿದ್ದಾರೆ.

ಆದರೆ, ಕಿಂಬರ್ಲಿ ಅವರು ತಮ್ಮ ವಿರುದ್ಧದ ಎಲ್ಲ ಆರೋಪಗಳನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ ಹಾಗೂ ತಮ್ಮ ಘನತೆ, ಗೌರವವನ್ನು ಕಾಯ್ದುಕೊಳ್ಳಲು ಕಾನೂನು ಹೋರಾಟ ನಡೆಸುವುದಾಗಿ ತಿಳಿಸಿದ್ದಾರೆ. ಅಮೆರಿಕದ ಇಂಧನ ರಫ್ತುಗಳನ್ನು ಹೆಚ್ಚಿಸುವಲ್ಲಿ ಹಾಗೂ ಗ್ರೀಸ್ ಜೊತೆ ಭದ್ರತಾ ಸಂಬಂಧಗಳನ್ನು ಬಲಪಡಿಸುವಲ್ಲಿ ತಮ್ಮ ರಾಜತಾಂತ್ರಿಕ ಸಾಧನೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ. ಅಮೆರಿಕ ಅಧ್ಯಕ್ಷರ ಬಗೆಗಿನ ತಮ್ಮ ನಿಷ್ಠೆ ಮುಂದುವರಿಯಲಿದೆ ಎಂದೂ ಅವರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor