Photo Credit : X 

ರಿಯಾದ್, ಅ. 14: ಇರಾನ್ ಬೆಂಬಲಿತ ಹೂತಿ ಬಂಡುಕೋರರ ವಿರುದ್ಧ ಯಮನ್ನಲ್ಲಿ ಸೌದಿ ಅರೇಬಿಯಾ ನಡೆಸುತ್ತಿರುವ ಸೇನಾ ಕಾರ್ಯಾಚರಣೆಯಲ್ಲಿ ಕೈಜೋಡಿಸುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ಪ್ರಸ್ತಾವವನ್ನು ರಿಯಾದ್ ತಿರಸ್ಕರಿಸಿದೆ. ಅಮೆರಿಕದ ಮಧ್ಯಸ್ಥಿಕೆಯ ಮೂಲಕ ನೆತನ್ಯಾಹು ಅವರು ಸೌದಿ ಅರೇಬಿಯಾವನ್ನು ಈ ವಿಷಯವಾಗಿ ಸಂಪರ್ಕಿಸಿದ್ದರೆನ್ನಲಾಗಿದೆ. ಆದರೆ, ಸೌದಿ ಅರೇಬಿಯಾದ ಜನರಿಂದ ತೀವ್ರ ವಿರೋಧ ವ್ಯಕ್ತವಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸೌದಿಯ ಯುವರಾಜ ಮೊಹಮ್ಮದ್ ಬಿನ್ ಸಲ್ಮಾನ್ ಅವರು ಇಸ್ರೇಲ್ ನ ಈ ಪ್ರಸ್ತಾವವನ್ನು ತಿರಸ್ಕರಿಸಿದ್ದರೆಂದು ವರದಿಗಳು ತಿಳಿಸಿವೆ.

ಹೂತಿಗಳ ವಿರುದ್ಧ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳುವುದರಿಂದ ತನ್ನ ಪ್ರಾದೇಶಿಕ ಬಾಂಧವ್ಯಗಳನ್ನು ಬಲಪಡಿಸಿಕೊಳ್ಳಬಹುದು ಹಾಗೂ ಭವಿಷ್ಯದಲ್ಲಿ ಸೌದಿ ಅರೇಬಿಯಾದೊಂದಿಗಿನ ರಾಜತಾಂತ್ರಿಕ ಸಂಬಂಧ ಸಹಜಗೊಳ್ಳಲು ದಾರಿ ಮಾಡಿಕೊಡಬಹುದು ಎಂಬುದು ಇಸ್ರೇಲ್ ನ ನಿರೀಕ್ಷೆಯಾಗಿತ್ತು. ಹೂತಿಗಳ ಕ್ಷಿಪಣಿ ಮತ್ತು ಡ್ರೋನ್ ದಾಳಿಯಿಂದಾಗಿ ಸೌದಿ ಅರೇಬಿಯಾದ ವಿಮಾನಯಾನ ಉದ್ಯಮ ಅಸ್ತವ್ಯಸ್ತಗೊಂಡಿರುವ ಸಂದರ್ಭದಲ್ಲಿ ಈ ಬೆಳವಣಿಗೆಯಾಗಿದೆ.

ಫೆಲೆಸ್ತೀನ್ ಸಮಸ್ಯೆಗೆ ಪರಿಹಾರ ದೊರೆಯುವವರೆಗೆ ಹಾಗೂ ಪ್ರತ್ಯೇಕ ಫೆಲೆಸ್ತೀನ್ ರಾಷ್ಟ್ರ ಸ್ಥಾಪನೆಯಾಗುವವರೆಗೆ ಇಸ್ರೇಲ್ ಜೊತೆ ಯಾವುದೇ ಒಪ್ಪಂದ ಮಾಡಿಕೊಳ್ಳಲಾಗುವುದಿಲ್ಲವೆಂದು ಸೌದಿ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor