ಹಾರ್ಮುಝ್ ಜಲಸಂಧಿ ದಾಟಿದ 30 ಹಡಗುಗಳು; ಇನ್ನೂ 26 ಬಾಕಿ
ಸಾಂದರ್ಭಿಕ ಚಿತ್ರ Photo: x.com/AJEnglish
ಹೊಸದಿಲ್ಲಿ: ಭಾರತದತ್ತ ಮುಖಮಾಡಿರುವ 30 ಹಡಗುಗಳು ಹಾರ್ಮುಝ್ ಜಲಸಂಧಿಯನ್ನು ದಾಟಿದ್ದು, ಈ ಆಯಕಟ್ಟಿನ ಜಲಸಂಧಿ ದಾಟಲು ಇನ್ನೂ 26 ಹಡಗುಗಳು ಕಾಯುತ್ತಿವೆ ಎಂದು ಬಂದರುಗಳು, ಹಡಗು ಸಾಗಣೆ ಮತ್ತು ಜಲಮಾರ್ಗಗಳ ಸಚಿವಾಲಯ ಪ್ರಕಟಿಸಿದೆ. ಜಲಸಂಧಿ ದಾಟಿರುವ ಹಡಗುಗಳ ಪೈಕಿ ಅರ್ಧದಷ್ಟು ಹಡಗುಗಳು ಎಲ್‌ಪಿಜಿ ಮತ್ತು ಎಲ್‌ಎನ್‌ಜಿ ಹೊತ್ತು ತರುತ್ತಿದ್ದು, ಎಂಟು ಹಡಗುಗಳು ಸರಕುಗಳನ್ನು ಸಾಗಿಸುತ್ತಿವೆ. ಏಳು ಕಚ್ಚಾತೈಲ ಟ್ಯಾಂಕರ್‌ಗಳು ಸೇರಿವೆ ಎಂದು ಸ್ಪಷ್ಟಪಡಿಸಿದೆ.
ಮಾರ್ಚ್ 1 ರಿಂದ ಜೂನ್ 17ರ ಅವಧಿಯಲ್ಲಿ 19 ಹಡಗುಗಳು ಜಲಸಂಧಿ ದಾಟಿವೆ. ಇರಾನ್-ಅಮೆರಿಕ ಒಪ್ಪಂದಕ್ಕೆ ಸಹಿ ಹಾಕಿದ ಬಳಿಕ 11 ಹಡಗುಗಳು ಸುರಕ್ಷಿತವಾಗಿ ಹಾರ್ಮುಝ್ ದಾಟಿವೆ. ಭಾರತವನ್ನು ತಲುಪಿರುವ ಅಥವಾ ಭಾರತದತ್ತ ಮುಖ ಮಾಡಿದ 30 ಹಡಗುಗಳ ಪೈಕಿ ಗರಿಷ್ಠ ಅಂದರೆ ಐದು ಮಾರ್ಷಲ್ ದ್ವೀಪದ ಹಡಗುಗಳು ಸೇರಿದಂತೆ ಒಟ್ಟು 17 ವಿದೇಶಿ ಹಡಗುಗಳು ಇವೆ ಎಂದು ವಿವರಿಸಲಾಗಿದೆ.
ಜಲಸಂಧಿ ದಾಟಲು ಕಾಯುತ್ತಿರುವ 26 ಹಡಗುಗಳ ಪೈಕಿ ಮೂರು ಹಡಗುಗಳು ಇಂಧನ, 10 ಹಡಗುಗಳು ರಸಗೊಬ್ಬರ ಮತ್ತು ಉಳಿದ 13 ಹಡಗುಗಳು ಸರಕು ಸಾಗಾಟ ಮಾಡುತ್ತಿವೆ ಎಂದು ತಿಳಿದುಬಂದಿದೆ. ಜಾಗತಿಕ ಇಂಧನ ಪೂರೈಕೆಯ ಶೇ.20ರಷ್ಟು ಈ ಜಲಮಾರ್ಗದ ಮೂಲಕ ಆಗುತ್ತಿದೆ. ಭಾರತದ ಪಾಲಿಗೆ ಗಲ್ಫ್ ದೇಶಗಳಿಂದ ಎಲ್‌ಎನ್‌ಜಿ ಹಾಗೂ ಎಲ್‌ಪಿಜಿ ಈ ಜಲಸಂಧಿಯ ಮೂಲಕ ಪೂರೈಕೆಯಾಗುತ್ತಿದೆ.