‘ನಿಜವಾದ ಹೀರೋ’: ಚಾಕು ಇರಿತದ ನಡುವೆಯೂ 180 ಜೀವ ಉಳಿಸಿದ ಭಾರತೀಯ ಪೈಲಟ್ ಸ್ಮಿತ್ ಮಚ್ಚರ್ ಗೆ ನೆತನ್ಯಾಹು ನಮನ
Photo: x.com/NDTVProfit
ಹೊಸದಿಲ್ಲಿ: ದುಬೈಯಿಂದ ಟೆಲ್ ಅವಿವ್ ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಚಾಕು ಇರಿತಕ್ಕೆ ಒಳಗಾದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ‘ನಿಜವಾದ ಹೀರೋ’ ಎಂದು ಕೊಂಡಾಡಿದ್ದಾರೆ.
ವಿಮಾನದಲ್ಲಿ ಸುಮಾರು 180 ಪ್ರಯಾಣಿಕರಿದ್ದರು. ವಿಮಾನದ ವ್ಯವಸ್ಥೆಗಳನ್ನು ಹಾಳುಮಾಡಲು ಪ್ರಯತ್ನಿಸಿದ ಒಮಾನ್ ಮೂಲದ ಸಹಪೈಲಟ್ ಕ್ಯಾಪ್ಟನ್ ಮಚ್ಚರ್ ಮೇಲೆ ಚಾಕುವಿನಿಂದ ದಾಳಿ ನಡೆಸಿದ್ದಾನೆ ಎಂದು ನೆತನ್ಯಾಹು ತಿಳಿಸಿದ್ದಾರೆ.
ಚಾಕು ಇರಿತದಿಂದ ಗಂಭೀರವಾಗಿ ಗಾಯಗೊಂಡಿದ್ದರೂ ಮಚ್ಚರ್ ಧೈರ್ಯ ಕಳೆದುಕೊಳ್ಳದೆ ಸಹಪೈಲಟ್‌ನೊಂದಿಗೆ ಪ್ರತಿಹೋರಾಟ ನಡೆಸಿದರು. ಆತನನ್ನು ತಡೆದ ಬಳಿಕ ಕಾಕ್‌ಪಿಟ್ ಬಾಗಿಲು ತೆರೆದರು. ಇದರಿಂದ ಪ್ರಯಾಣಿಕರು ಮತ್ತು ಇತರ ಸಿಬ್ಬಂದಿ ಕಾಕ್‌ಪಿಟ್ ಗೆ ತೆರಳಿ ಸಹಪೈಲಟ್‌ನನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಸಾಧ್ಯವಾಯಿತು.
ಮಚ್ಚರ್ ಅವರ ಧೈರ್ಯದಿಂದ ವಿಮಾನದಲ್ಲಿ ಸಂಭವಿಸಬಹುದಾಗಿದ್ದ ದೊಡ್ಡ ದುರಂತ ತಪ್ಪಿತು ಎಂದು ನೆತನ್ಯಾಹು ಹೇಳಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ನೆತನ್ಯಾಹು, ‘ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರ ಅಸಾಧಾರಣ ಧೈರ್ಯಕ್ಕೆ ನನ್ನ ನಮನಗಳು’ ಎಂದು ಹೇಳಿದ್ದಾರೆ. ಅವರು ಶೀಘ್ರ ಚೇತರಿಸಿಕೊಳ್ಳಲಿ ಎಂದು ಹಾರೈಸಿರುವ ನೆತನ್ಯಾಹು, ಮಚ್ಚರ್ ಅವರನ್ನು ‘ನಿಜವಾದ ಹೀರೋ’ ಎಂದು ಬಣ್ಣಿಸಿದ್ದಾರೆ.
ರಾಯಭಾರಿಯಿಂದಲೂ ಶ್ಲಾಘನೆ
ಸೈಪ್ರಸ್ ನಲ್ಲಿರುವ ಇಸ್ರೇಲ್ ರಾಯಭಾರಿ ರೂವೆನ್ ಅಝರ್ ಕೂಡ ಕ್ಯಾಪ್ಟನ್ ಮಚ್ಚರ್ ಅವರನ್ನು ಶ್ಲಾಘಿಸಿದ್ದಾರೆ. ಆಕ್ರಮಣಕಾರನನ್ನು ನಿಯಂತ್ರಿಸಲು ನೆರವಾದ ಪ್ರಯಾಣಿಕರು ಮತ್ತು ಸಿಬ್ಬಂದಿಗೂ ಗೌರವ ಸಲ್ಲಿಸಿದ್ದಾರೆ.
‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಅಝರ್, ಮಚ್ಚರ್ ಅವರ ಚೇತರಿಕೆಗಾಗಿ ಪ್ರಾರ್ಥಿಸುತ್ತಿರುವುದಾಗಿ ಹೇಳಿದ್ದಾರೆ. ಅವರನ್ನು ಅನುಭವಿ ಮತ್ತು ಪ್ರತಿಭಾವಂತ ಪೈಲಟ್ ಎಂದು ಬಣ್ಣಿಸಿದ್ದಾರೆ.
‘ಫ್ಲೈದುಬೈ ವಿಮಾನ FZ1073ರ ಅನುಭವಿ ಮತ್ತು ಪ್ರತಿಭಾವಂತ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅವರಿಗಾಗಾ ವಿವಿಧ ರಾಷ್ಟ್ರಗಳೊಂದಿಗೆ ಸೇರಿ ನಾನು ಪ್ರಾರ್ಥಿಸುತ್ತೇನೆ. ಅವರ ಹಾಗೂ ಇತರೆ ಇಸ್ರೇಲಿ ಮತ್ತು ಎಮಿರೇಟಿ ಪ್ರಯಾಣಿಕರು ಹಾಗೂ ಸಿಬ್ಬಂದಿಯ ಧೈರ್ಯವು 180 ಜನರ ಜೀವಗಳನ್ನು ಉಳಿಸಿತು’ ಎಂದು ಅಝರ್ ಹೇಳಿದ್ದಾರೆ.
ಈ ಘಟನೆ ಕುರಿತು ‘ಭಯೋತ್ಪಾದನೆಯ ವಿರುದ್ಧ ಒಗ್ಗಟ್ಟು’ ಎಂದು ಅಝರ್ ಕರೆ ನೀಡಿದ್ದಾರೆ.
9,750ಕ್ಕೂ ಹೆಚ್ಚು ಗಂಟೆಗಳ ಹಾರಾಟ
ಭಾರತೀಯ ಪ್ರಜೆಯಾಗಿರುವ ಗುಜರಾತ್ ಮೂಲದ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಕಳೆದ ನಾಲ್ಕು ವರ್ಷಗಳಿಂದ ಎಮಿರೇಟಿ ಸರಕಾರದ ಒಡೆತನದ ಕಡಿಮೆ ದರದ ವಿಮಾನಯಾನ ಸಂಸ್ಥೆ ಫ್ಲೈದುಬೈನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಅದಕ್ಕೂ ಮೊದಲು 10 ವರ್ಷ ಸ್ಪೈಸ್‌ಜೆಟ್ ನಲ್ಲಿ ಕೆಲಸ ಮಾಡಿದ್ದರು.
ಅವರ ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಬೋಯಿಂಗ್ 737 ವಿಮಾನಗಳ ಶ್ರೇಣಿಯಲ್ಲಿ ಅವರಿಗೆ 13 ವರ್ಷಗಳಿಗೂ ಹೆಚ್ಚು ವಾಣಿಜ್ಯ ವಿಮಾನಯಾನ ಅನುಭವವಿದೆ. ‘ಲೈನ್ ಟ್ರೈನಿಂಗ್ ಕ್ಯಾಪ್ಟನ್’ ಆಗಿಯೂ ಸೇವೆ ಸಲ್ಲಿಸಿರುವ ಅವರು 9,750 ಗಂಟೆಗಳಿಗೂ ಹೆಚ್ಚು ವಿಮಾನ ಹಾರಾಟ ನಡೆಸಿದ್ದಾರೆ.
2011ರಲ್ಲಿ ಸ್ಪೈಸ್‌ಜೆಟ್ ಸೇರಿದ್ದ ಮಚ್ಚರ್, ಅಲ್ಲಿ ‘ಲೈನ್ ಟ್ರೈನಿಂಗ್ ಕ್ಯಾಪ್ಟನ್’ ಹಾಗೂ ಹಿರಿಯ ಕಮಾಂಡರ್ ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಜೂನ್ 2022ರಲ್ಲಿ ಸ್ಪೈಸ್‌ಜೆಟ್ ಗೆ ರಾಜೀನಾಮೆ ನೀಡಿ ‘ಡೈರೆಕ್ಟ್ ಎಂಟ್ರಿ ಕ್ಯಾಪ್ಟನ್’ ಆಗಿ ಫ್ಲೈದುಬೈ ಸೇರಿದ್ದರು.
ಮಚ್ಚರ್ ಅವರ ಸಹೋದರ ಕೂಡ ಇತ್ತೀಚೆಗಷ್ಟೇ ಫ್ಲೈದುಬೈಗೆ ಸೇರ್ಪಡೆಯಾಗಿದ್ದಾರೆ.