Photo Credit : X

ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (UAE)ನ ದುಬೈ ನಗರವನ್ನು ಅಬುಧಾಬಿ ಮತ್ತು ಫುಜೈರಾ ನಗರಗಳೊಂದಿಗೆ ಸಂಪರ್ಕಿಸುವ ‘ಎತಿಹಾದ್ (Etihad Rail) ಪ್ರಯಾಣಿಕರ ರೈಲು ಸೇವೆ ಬುಧವಾರ (ಸೆ.30) ಆರಂಭಗೊಂಡಿದೆ.

ಈ ಸೇವೆಯಿಂದ ದುಬೈ, ಅಬುಧಾಬಿ ಮತ್ತು ಫುಜೈರಾ ನಡುವಿನ ಪ್ರಯಾಣ ಸುಲಭವಾಗಲಿದ್ದು, ಪ್ರವಾಸೋದ್ಯಮ, ವ್ಯಾಪಾರ ಮತ್ತು ವಾಣಿಜ್ಯ ಚಟುವಟಿಕೆಗಳಿಗೆ ಉತ್ತೇಜನ ಸಿಗುವ ನಿರೀಕ್ಷೆಯಿದೆ. ಎಮಿರೇಟ್‌ ಗಳ ನಡುವಿನ ಆರ್ಥಿಕ ಬೆಳವಣಿಗೆಗೂ ಈ ರೈಲು ಸೇವೆ ನೆರವಾಗಲಿದೆ.

UAEಯ ಮೊದಲ ಪ್ರಯಾಣಿಕರ ರೈಲು ಸೇವೆ ಅಬುಧಾಬಿ ಮತ್ತು ಫುಜೈರಾ ನಡುವೆ ಜೂನ್ 30ರಂದು ಆರಂಭವಾಗಿತ್ತು. ‘ಪ್ರಾಜೆಕ್ಟ್ಸ್ ಆಫ್ ದಿ 50’ (Projects of the 50) ಯೋಜನೆಯ ಭಾಗವಾಗಿ ಪ್ರಯಾಣಿಕರ ರೈಲು ಯೋಜನೆಯನ್ನು ಘೋಷಿಸಿದ ಐದು ವರ್ಷಗಳಿಗಿಂತ ಕಡಿಮೆ ಅವಧಿಯಲ್ಲೇ ಈ ಸೇವೆ ಆರಂಭಿಸಲಾಗಿದೆ.

ರೈಲಿನಲ್ಲಿ ಪ್ರಯಾಣಿಕರಿಗೆ ವೈರ್‌ಲೆಸ್ ಇಂಟರ್ನೆಟ್, ಪ್ರತಿ ಆಸನದಲ್ಲೂ ಎಲೆಕ್ಟ್ರಾನಿಕ್ ಸಾಧನಗಳ ಚಾರ್ಜಿಂಗ್ ಪೋರ್ಟ್‌ ಗಳು ಮತ್ತು ಸಾಕಷ್ಟು ಲಗೇಜ್ ಸ್ಥಳ ಸೇರಿದಂತೆ ಹಲವು ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದು ಎತಿಹಾದ್ ತಿಳಿಸಿದೆ.

ಟಿಕೆಟ್ ಬುಕಿಂಗ್ ಆರಂಭ

ದುಬೈ–ಅಬುಧಾಬಿ ಮತ್ತು ದುಬೈ–ಫುಜೈರಾ ಮಾರ್ಗಗಳ ರೈಲು ಸೇವೆಗೆ ಟಿಕೆಟ್ ಬುಕಿಂಗ್ ಆರಂಭವಾಗಿದೆ. ಎತಿಹಾದ್ ರೈಲ್ ಮೊಬೈಲ್ ಆ್ಯಪ್, ಅಧಿಕೃತ ವೆಬ್‌ಸೈಟ್ ಹಾಗೂ ರೈಲು ನಿಲ್ದಾಣಗಳಲ್ಲಿರುವ ಟಿಕೆಟ್ ವೆಂಡಿಂಗ್ ಯಂತ್ರಗಳ ಮೂಲಕ ಟಿಕೆಟ್ ಕಾಯ್ದಿರಿಸಬಹುದು.

ದುಬೈನ ‘ನೋಲ್’ (Nol) ವ್ಯವಸ್ಥೆಯೊಂದಿಗೆ ಎತಿಹಾದ್ ರೈಲ್ ಅನ್ನು ಸಂಯೋಜಿಸಲಾಗಿದೆ. ಹೀಗಾಗಿ ಒಂದೇ QR ಕೋಡ್ ಬಳಸಿ ಎತಿಹಾದ್ ರೈಲ್ ಜತೆಗೆ ರೈಲು, ಮೆಟ್ರೋ, ಟ್ರಾಮ್ ಮತ್ತು ಬಸ್ ಸೇವೆಗಳನ್ನೂ ಬುಕ್ ಮಾಡಬಹುದು.

ಈ ಮಾರ್ಗಗಳಲ್ಲಿ ರೈಲು

ಪ್ರಯಾಣಿಕರು ಕೆಳಗಿನ ಆರು ಮಾರ್ಗಗಳಲ್ಲಿ ಟಿಕೆಟ್ ಬುಕ್ ಮಾಡಬಹುದು:

* ದುಬೈ–ಅಬುಧಾಬಿ

* ಅಬುಧಾಬಿ–ದುಬೈ

* ದುಬೈ–ಫುಜೈರಾ

* ಫುಜೈರಾ–ದುಬೈ

* ಅಬುಧಾಬಿ–ಫುಜೈರಾ

* ಫುಜೈರಾ–ಅಬುಧಾಬಿ

ಟಿಕೆಟ್ ಬುಕ್ ಮಾಡುವುದು ಹೇಗೆ?

ಎತಿಹಾದ್ ರೈಲ್ ಆ್ಯಪ್ ಅಥವಾ ಅಧಿಕೃತ ವೆಬ್‌ಸೈಟ್ ತೆರೆಯಬೇಕು. ನಂತರ ಪ್ರಯಾಣಿಸಬೇಕಾದ ಮಾರ್ಗ, ಪ್ರಯಾಣದ ದಿನಾಂಕ, ವಾಪಸಾತಿ ಪ್ರಯಾಣವಿದ್ದರೆ ಅದರ ದಿನಾಂಕ ಹಾಗೂ ಪ್ರಯಾಣಿಕರ ಸಂಖ್ಯೆಯನ್ನು ನಮೂದಿಸಿ ‘Search’ ಕ್ಲಿಕ್ ಮಾಡಬೇಕು.

ಲಭ್ಯವಿರುವ ರೈಲುಗಳ ಪಟ್ಟಿಯಲ್ಲಿ ಪ್ರಯಾಣಿಕರಿಗೆ ಅನುಕೂಲವಾದ ಸಮಯವನ್ನು ಆಯ್ಕೆ ಮಾಡಬಹುದು. ಎಲ್ಲ ಆಸನಗಳು ಭರ್ತಿಯಾಗಿರುವ ರೈಲುಗಳನ್ನು ‘Sold Out’ ಎಂದು ತೋರಿಸಲಾಗುತ್ತದೆ. ಲಭ್ಯವಿರುವ ರೈಲುಗಳ ಟಿಕೆಟ್ ದರವನ್ನೂ ಅಲ್ಲಿ ನೋಡಬಹುದು.

ಬಳಿಕ ಪ್ರಯಾಣದ ದರ್ಜೆ ಮತ್ತು ದರದ ವಿಧವನ್ನು ಆಯ್ಕೆ ಮಾಡಬೇಕು. ಪ್ರಯಾಣಿಕರು ‘Saver’, ‘Value’ ಅಥವಾ ‘Flex’ ದರಗಳಲ್ಲಿ ಒಂದನ್ನು ಆಯ್ಕೆ ಮಾಡಬಹುದು. ಈ ಆಯ್ಕೆಗಳು ಪ್ರಯಾಣದ ಹೊಂದಿಕೊಳ್ಳುವಿಕೆ ಮತ್ತು ಹೆಚ್ಚುವರಿ ಸೌಲಭ್ಯಗಳ ಆಧಾರದ ಮೇಲೆ ಬದಲಾಗುತ್ತವೆ.

‘Continue’ ಕ್ಲಿಕ್ ಮಾಡಿ ಪ್ರಯಾಣಿಕರ ಹೆಸರು, ಇ–ಮೇಲ್ ವಿಳಾಸ ಮತ್ತು ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ವಿವರಗಳನ್ನು ನಮೂದಿಸಬೇಕು. ಬಳಿಕ ಪಾವತಿ ಪೂರ್ಣಗೊಳಿಸಿದರೆ ಬುಕಿಂಗ್ ಖಚಿತವಾಗುತ್ತದೆ. ಪಾವತಿ ಯಶಸ್ವಿಯಾದ ನಂತರ ಬುಕಿಂಗ್ ದೃಢೀಕರಣ ಹಾಗೂ ಇ–ಟಿಕೆಟ್ ವಿವರಗಳು ದೊರೆಯುತ್ತವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor