Photo: x.com/IsraeliPM

ಟೆಲ್ ಅವಿವ್: ವಿಮಾನ ಅಪಘಾತಗಳ ತನಿಖೆ ಕುರಿತ ಟಿವಿ ಕಾರ್ಯಕ್ರಮವನ್ನು ನಿಯಮಿತವಾಗಿ ವೀಕ್ಷಿಸುತ್ತಿದ್ದ ಪ್ರಯಾಣಿಕನೊಬ್ಬ, ಫ್ಲೈದುಬೈ ವಿಮಾನ ತುರ್ತು ಪರಿಸ್ಥಿತಿಗೆ ಸಿಲುಕಿದಾಗ ಅದೇ ಕಾರ್ಯಕ್ರಮದಿಂದ ಪಡೆದ ಜ್ಞಾನವನ್ನು ಬಳಸಿಕೊಂಡು ವಿಮಾನವನ್ನು ನಿಯಂತ್ರಣಕ್ಕೆ ತರಲು ನೆರವಾಗಿದ್ದಾರೆ.

ಯುನೈಟೆಡ್ ಅರಬ್ ಎಮಿರೇಟ್ಸ್‌ ನಿಂದ ಇಸ್ರೇಲ್‌ಗೆ ತೆರಳುತ್ತಿದ್ದ ಫ್ಲೈದುಬೈ ವಿಮಾನದಲ್ಲಿ ಈ ಘಟನೆ ನಡೆದಿದೆ. ವಿಮಾನದಲ್ಲಿ ಒಬ್ಬ ಪೈಲಟ್ ಮತ್ತೊಬ್ಬ ಪೈಲಟ್‌ ಗೆ ಚಾಕುವಿನಿಂದ ಇರಿದ ಬಳಿಕ ವಿಮಾನ ಹಠಾತ್ತನೆ ಕೆಳಮುಖವಾಗಿ ಚಲಿಸತೊಡಗಿತ್ತು. ಸುಮಾರು ಒಂದು ನಿಮಿಷದಲ್ಲಿ ವಿಮಾನವು ಹಾರಾಟದ ಎತ್ತರದ ಅರ್ಧದಷ್ಟು ಭಾಗವನ್ನು ಕಳೆದುಕೊಂಡಿತ್ತು.

ಘಟನೆಯ ವೇಳೆ ಕಾಕ್‌ಪಿಟ್‌ ಗೆ ನುಗ್ಗಿದ ಪ್ರಯಾಣಿಕರು ಹಾಗೂ ಸಿಬ್ಬಂದಿಯೊಬ್ಬರು ಆರೋಪಿಯನ್ನು ಹತೋಟಿಗೆ ತಂದರು. ಇದೇ ವೇಳೆ ಇತರ ಸಿಬ್ಬಂದಿ ವಿಮಾನದ ನಿಯಂತ್ರಣವನ್ನು ಮರಳಿ ಪಡೆದರು. ಬಳಿಕ ವಿಮಾನದ ಮಾರ್ಗವನ್ನು ಬದಲಿಸಿ ಸೌದಿ ಅರೇಬಿಯಾದಲ್ಲಿ ಸುರಕ್ಷಿತವಾಗಿ ಇಳಿಸಲಾಯಿತು.

ಈ ಘಟನೆಯಲ್ಲಿ ಮಧ್ಯಪ್ರವೇಶಿಸಿದ್ದ ಪ್ರಯಾಣಿಕ ಯಾನೀವ್ ಹಯೂನ್ ಅವರನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಬುಧವಾರ ಟೆಲ್ ಅವಿವ್ ವಿಮಾನ ನಿಲ್ದಾಣದಲ್ಲಿ ಭೇಟಿಯಾದರು. ನೆತನ್ಯಾಹು ಅವರ ಕಚೇರಿ ಬಿಡುಗಡೆ ಮಾಡಿರುವ ವೀಡಿಯೊದಲ್ಲಿ ಪ್ರಧಾನಿ ಹಯೂನ್ ಅವರನ್ನು ತಬ್ಬಿಕೊಂಡು ‘ಹೀರೋ’ ಎಂದು ಕರೆದಿದ್ದಾರೆ.

ಕ್ಯಾಪ್ಟನ್ ಸ್ಮಿತ್ ಮಚ್ಚರ್ ಎಂದು ಗುರುತಿಸಲಾದ ಪೈಲಟ್‌ ಗಳಲ್ಲಿ ಒಬ್ಬರಿಗೆ ಚಾಕುವಿನಿಂದ ಇರಿದ ಬಳಿಕ ತಾನು ಹಾಗೂ ಇತರ ಪ್ರಯಾಣಿಕರು ಕಾಕ್‌ಪಿಟ್‌ ಗೆ ಬಲವಂತವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾಗಿ ಹಯೂನ್ ನೆತನ್ಯಾಹು ಅವರಿಗೆ ತಿಳಿಸಿದರು. ಗಾಯಗೊಂಡ ಪೈಲಟ್ ಕಾಕ್‌ಪಿಟ್ ಬಾಗಿಲಿಗೆ ಬಿದ್ದಿದ್ದರಿಂದ ಒಳಗೆ ಪ್ರವೇಶಿಸಲು ಕಷ್ಟವಾಗಿತ್ತು ಎಂದರು.

ಕಾಕ್‌ಪಿಟ್‌ ಗೆ ಪ್ರವೇಶಿಸಿದಾಗ ನಿಯಂತ್ರಣ ಫಲಕಗಳ ಬಳಿ ಆರೋಪಿಯನ್ನು ಕಂಡಿದ್ದಾಗಿ ಹಯೂನ್ ಹೇಳಿದರು.

“ಆಸನಗಳಲ್ಲಿ ಯಾವುದೇ ಪೈಲಟ್‌ಗಳು ಇರಲಿಲ್ಲ. ಒಬ್ಬರು ನೆಲದ ಮೇಲೆ ಇದ್ದರು. ಮತ್ತೊಬ್ಬರು ಫಲಕದ ಬಳಿ ಇದ್ದರು. ದಾಳಿಕೋರ ವಿಮಾನವನ್ನು ನಿಷ್ಕ್ರಿಯಗೊಳಿಸಲು ಪ್ರಯತ್ನಿಸುತ್ತಿರುವಂತೆ ಕಂಡುಬಂದ” ಎಂದು ಅವರು ವಿವರಿಸಿದರು.

ಘರ್ಷಣೆ ಕೆಲವೇ ಸೆಕೆಂಡುಗಳಲ್ಲಿ ನಡೆದಿತ್ತು. ದಾಳಿಕೋರನನ್ನು ಹಿಡಿದು ಉಸಿರುಗಟ್ಟಿಸಿ ಕಾಕ್‌ ಪಿಟ್‌ ನಿಂದ ಹೊರಗೆ ಎಳೆದುಕೊಂಡು ಹೋದ ಬಳಿಕ ವಿಮಾನದ ನಿಯಂತ್ರಣವನ್ನು ಮರಳಿ ಪಡೆಯಲು ಮತ್ತೆ ಕಾಕ್‌ಪಿಟ್‌ಗೆ ತೆರಳಿದ್ದಾಗಿ ಹಯೂನ್ ಹೇಳಿದರು.

“ನಾನು ಒಳಗೆ ಹೋದಾಗ ಎರಡು ಕುರ್ಚಿಗಳ ನಡುವಿನ ಸಾಧನಗಳ ಬಳಿ ದಾಳಿಕೋರನನ್ನು ನೋಡಿದೆ. ಆತನನ್ನು ಹಿಡಿದು, ಉಸಿರುಗಟ್ಟಿಸಿ ಅಲ್ಲಿಂದ ಎಳೆದಿದ್ದೇನೆ. ವಿಮಾನದ ಮುಂಭಾಗ ಕೆಳಮುಖವಾಗಿತ್ತು. ಅದನ್ನು ನಿಷ್ಕ್ರಿಯಗೊಳಿಸಲು ಆತ ನಿಯಂತ್ರಣ ಸಾಧನಗಳನ್ನು ಹಾಳುಮಾಡಲು ಪ್ರಯತ್ನಿಸುತ್ತಿದ್ದ” ಎಂದು ಅವರು ಹೇಳಿದರು.

“ನಾವು ಇಸ್ರೇಲ್‌ ನ ವಾಯುಪ್ರದೇಶವನ್ನು ಪ್ರವೇಶಿಸಿದ್ದರೆ, ಪರಿಸ್ಥಿತಿ ದುರಂತದಲ್ಲಿ ಅಂತ್ಯಗೊಳ್ಳುತ್ತಿತ್ತು ಎಂದು ನನಗೆ ಅನ್ನಿಸುತ್ತದೆ” ಎಂದರು.

‘ಏರ್ ಕ್ರ್ಯಾಶ್ ಇನ್ವೆಸ್ಟಿಗೇಷನ್’ ನೆರವು

ವಿಮಾನವನ್ನು ಮತ್ತೆ ನಿಯಂತ್ರಣಕ್ಕೆ ತರಲು ತಕ್ಷಣ ಕ್ರಮ ಕೈಗೊಳ್ಳಬೇಕೆಂಬುದು ತಮಗೆ ತಿಳಿದಿತ್ತು ಎಂದು ಹಯೂನ್ ಹೇಳಿದರು. ನಿಯಂತ್ರಣ ಹ್ಯಾಂಡಲ್‌ ಗಳನ್ನು ಹಿಂದಕ್ಕೆ ಎಳೆಯಬೇಕೆಂಬುದು ಹೇಗೆ ತಿಳಿಯಿತು ಎಂದು ನೆತನ್ಯಾಹು ಕೇಳಿದಾಗ ಅವರು ನೀಡಿದ ಉತ್ತರ ಅಚ್ಚರಿ ಮೂಡಿಸಿತು.

“ನಾನು ‘ಏರ್ ಕ್ರ್ಯಾಶ್ ಇನ್ವೆಸ್ಟಿಗೇಷನ್’ ಕಾರ್ಯಕ್ರಮವನ್ನು ವೀಕ್ಷಿಸುತ್ತೇನೆ, ಮಾನ್ಯ ಪ್ರಧಾನ ಮಂತ್ರಿಗಳೇ—ನಿಜವಾಗಿಯೂ!” ಎಂದು ಹಯೂನ್ ಹೇಳಿದರು.

ವಿಮಾನ ಅಪಘಾತಗಳ ತನಿಖೆ ಕುರಿತ ಈ ಕಾರ್ಯಕ್ರಮದಲ್ಲಿ ಅಪಘಾತಗಳಿಗೆ ಕಾರಣವಾಗುವ ಅಂಶಗಳು ಹಾಗೂ ತುರ್ತು ಸಂದರ್ಭಗಳಲ್ಲಿ ವಿಮಾನದ ನಿಯಂತ್ರಣ ಹೇಗೆ ಮರಳಿ ಪಡೆಯಲಾಗುತ್ತದೆ ಎಂಬುದನ್ನು ವಿವರಿಸಲಾಗುತ್ತದೆ. ಕಾರ್ಯಕ್ರಮ ವೀಕ್ಷಿಸುವ ಮೂಲಕ ತಮಗೆ ದೊರೆತಿದ್ದ ಅರಿವು ಈ ತುರ್ತು ಸಂದರ್ಭದಲ್ಲಿ ನೆರವಾಯಿತು ಎಂದು ಹಯೂನ್ ಹೇಳಿದ್ದಾರೆ.

‘ನೀವು ಮಹಾನ್ ವೀರರು’

ನೆತನ್ಯಾಹು ಅವರನ್ನು ಭೇಟಿಯಾಗುವ ವೇಳೆ ಹಯೂನ್ ಅವರ ಬಟ್ಟೆಗಳಲ್ಲಿ ಇನ್ನೂ ರಕ್ತದ ಕಲೆಗಳಿದ್ದವು. ರಕ್ತದ ಕಲೆಗಳಿಗಾಗಿ ಅವರು ಕ್ಷಮೆ ಯಾಚಿಸಿದಾಗ, ನೆತನ್ಯಾಹು ಅದನ್ನು ಲೆಕ್ಕಿಸದೆ ಅವರ ಕಾರ್ಯವನ್ನು ಶ್ಲಾಘಿಸಿದರು.

“ನಿಮ್ಮನ್ನು ನೋಡಿದಾಗ ನನಗೆ ಸಿಂಹವೊಂದು ಕಾಣುತ್ತದೆ. ನೀವು ಒಬ್ಬ ಮಹಾನ್ ವೀರರು. ನೀವು ಮಾಡಿದ ಕೆಲಸ ನಿಜಕ್ಕೂ ನಂಬಲಸಾಧ್ಯವಾದುದು. ನೀವು ವಿಮಾನದ ಪ್ರಯಾಣಿಕರನ್ನು ಮಾತ್ರವಲ್ಲದೆ, ಇನ್ನೂ ಅನೇಕರ ಪ್ರಾಣವನ್ನೂ ಉಳಿಸಿದ್ದೀರಿ” ಎಂದು ನೆತನ್ಯಾಹು ಹೇಳಿದರು.

ಆರೋಪಿತ ದಾಳಿಯ ಹಿಂದಿನ ಉದ್ದೇಶ ಇನ್ನೂ ಸ್ಪಷ್ಟವಾಗಿಲ್ಲ. ಗಾಝಾದಲ್ಲಿ ನಡೆಯುತ್ತಿರುವ ಯುದ್ಧಕ್ಕೆ ಕಾರಣವಾದ 2023ರ ಅಕ್ಟೋಬರ್ 7ರಂದು ಹಮಾಸ್ ಇಸ್ರೇಲ್ ಮೇಲೆ ನಡೆಸಿದ ದಾಳಿಯ ಮೂರನೇ ವರ್ಷಕ್ಕೆ ಕೆಲವೇ ದಿನಗಳ ಮೊದಲು ಈ ಘಟನೆ ನಡೆದಿದೆ.

ಘಟನೆಯ ಬಳಿಕ ಸೌದಿ ಅರೇಬಿಯ ದಾಳಿಕೋರನ ವಿರುದ್ಧ ಯಾವ ಕಾನೂನು ಕ್ರಮ ಕೈಗೊಳ್ಳಲಿದೆ, ಇಸ್ರೇಲಿಗಳಿಂದ ತುಂಬಿದ್ದ ಅನಿರೀಕ್ಷಿತ ವಿಮಾನವನ್ನು ಸೌದಿ ಅಧಿಕಾರಿಗಳು ಹೇಗೆ ನಿರ್ವಹಿಸಿದರು ಹಾಗೂ ಘಟನೆಯಿಂದ ಫ್ಲೈದುಬೈಗೆ ಯಾವುದೇ ರಾಜತಾಂತ್ರಿಕ ಪರಿಣಾಮ ಎದುರಾಗಲಿದೆಯೇ ಎಂಬ ಪ್ರಶ್ನೆಗಳು ಎದುರಾಗಿವೆ.

ತನಿಖೆ ಪೂರ್ಣಗೊಳ್ಳುವವರೆಗೆ ಇಸ್ರೇಲ್‌ ಗೆ ಮತ್ತು ಅಲ್ಲಿಂದ ಬರುವ ವಿಮಾನಯಾನವನ್ನು ಸ್ಥಗಿತಗೊಳಿಸುವುದಾಗಿ ಫ್ಲೈದುಬೈ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor