Photo Credit : who.int

ಜಿನೀವಾ: ಯಮನ್‍ನಲ್ಲಿ ತೀವ್ರಗೊಳ್ಳುತ್ತಿರುವ ಸಂಘರ್ಷವು ದೇಶದ ಆರೋಗ್ಯ ವ್ಯವಸ್ಥೆಯನ್ನು ಕುಸಿಯುವ ಹಂತಕ್ಕೆ ತಳ್ಳುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ತಿಳಿಸಿದ್ದು, ಕಾಲರಾದಂತಹ ರೋಗಗಳು ಈಗಾಗಲೇ ವ್ಯಾಪಕವಾಗಿ ಹರಡುತ್ತಿವೆ ಎಂದು ಎಚ್ಚರಿಸಿದೆ.

ಯಮನ್‍ನ ಸೌದಿ ಬೆಂಬಲಿತ ಸರಕಾರಿ ಪಡೆಗಳ ವಿರುದ್ಧ ಇರಾನ್ ಬೆಂಬಲಿತ ಹೌದಿಗಳು ನಡೆಸುತ್ತಿರುವ ನವೀಕೃತ ಸೇನಾ ದಾಳಿಯು ನೂರಾರು ಜನರ ಸಾವು-ನೋವಿಗೆ ಕಾರಣವಾಗಿದೆ ಮತ್ತು ದೇಶದ ಮಾನವೀಯ ಬಿಕ್ಕಟ್ಟನ್ನು ಇನ್ನಷ್ಟು ತೀವ್ರಗೊಳಿಸಿದೆ. ವಿಶ್ವಸಂಸ್ಥೆಯ ಅಂಕಿಅಂಶಗಳ ಪ್ರಕಾರ, ಈ ತಿಂಗಳೊಂದರಲ್ಲೇ ಕನಿಷ್ಠ 1,45,000 ಜನರು ನಿರಾಶ್ರಿತರಾಗಿದ್ದಾರೆ.

ಯಮನ್‍ನ ಇತ್ತೀಚಿನ ಸಂಘರ್ಷದ ತೀವ್ರತೆಯು ದಶಕಕ್ಕೂ ಹೆಚ್ಚು ಕಾಲ ನಡೆದ ಅಂತರ್ಯುದ್ಧದಿಂದ ಈಗಾಗಲೇ ದುರ್ಬಲವಾಗಿರುವ ಆರೋಗ್ಯ ವ್ಯವಸ್ಥೆಯನ್ನು ಕುಸಿಯುವ ಹಂತಕ್ಕೆ ತಳ್ಳುತ್ತಿದೆ. ಅಭದ್ರತೆ, ಹಾನಿಗೊಳಗಾದ ಮೂಲಸೌಕರ್ಯ, ಆರೋಗ್ಯ ಕಾರ್ಯಕರ್ತರ ಸ್ಥಳಾಂತರ, ಔಷಧಿಗಳು ಮತ್ತು ವೈದ್ಯಕೀಯ ಸರಬರಾಜುಗಳ ಕೊರತೆ ಹಾಗೂ ಯಮನ್‍ನ ಪಶ್ಚಿಮ ಕರಾವಳಿಯ ಪ್ರದೇಶಗಳಿಗೆ ಸೀಮಿತ ಪ್ರವೇಶದ ಕಾರಣದಿಂದಾಗಿ ಅನೇಕ ಜನರಿಗೆ ಅಗತ್ಯ ಸೇವೆಗಳು ಸಿಗದಂತೆ ತಡೆಯಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪೂರ್ವ ಮೆಡಿಟರೇನಿಯನ್ ಪ್ರದೇಶದ ನಿರ್ದೇಶಕಿ ಅನೆಟ್ ಹೈನ್ಜೆಲ್‍ಮನ್ ಎಚ್ಚರಿಸಿದ್ದಾರೆ.

ಹೆಚ್ಚು ಪೀಡಿತ ಪ್ರದೇಶಗಳಾದ ತೈಜ್, ಲಹ್ಜ್ ಮತ್ತು ಹುದೈದಾ ಪ್ರದೇಶಗಳಲ್ಲಿ 9 ಆರೋಗ್ಯ ಸೌಲಭ್ಯಗಳು ಅಥವಾ ಆಸ್ತಿಗಳು ಈಗ ಹಾನಿಗೊಳಗಾಗಿವೆ, ಸೇವೆ ಸ್ಥಗಿತಗೊಂಡಿವೆ, ಮುಚ್ಚಲ್ಪಟ್ಟಿವೆ ಅಥವಾ ನೇರ ದಾಳಿಗೆ ಒಳಗಾಗಿವೆ. ಮಾರಿಬ್ ಮತ್ತು ರಾಸ್ ಅಲ್-ಅರಾ ಪ್ರದೇಶದ ಎರಡು ಆಸ್ಪತ್ರೆಗಳಲ್ಲಿ ಸಮಗ್ರ ತುರ್ತು ಪ್ರಸೂತಿ ಮತ್ತು ನವಜಾತ ಶಿಶುಗಳ ಆರೈಕೆಯನ್ನು ಅಮಾನತುಗೊಳಿಸಲಾಗಿದ್ದು, ಸಿಬ್ಬಂದಿ ಮತ್ತು ಕಾರ್ಯನಿರ್ವಹಣಾ ಸಾಮರ್ಥ್ಯವನ್ನು ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ನೀಡಲು ಮರುನಿರ್ದೇಶಿಸಲಾಗಿದೆ ಎಂದು ಹೈನ್ಜೆಲ್‍ಮನ್ ಹೇಳಿದ್ದಾರೆ.

ಇತ್ತೀಚಿನ ಸಂಘರ್ಷ ತೀವ್ರಗೊಳ್ಳುವ ಮುಂಚೆಯೂ ಸಹ, ಯಮನ್‍ನ ಶೇಕಡಾ 60ರಷ್ಟು ಆರೋಗ್ಯ ಸೌಲಭ್ಯಗಳು ಮಾತ್ರ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ದೇಶವು ಈಗಾಗಲೇ ತೀವ್ರ ಪೌಷ್ಟಿಕಾಂಶದ ಕೊರತೆ ಹಾಗೂ ವ್ಯಾಪಕ ಪ್ರಮಾಣದಲ್ಲಿ ಹರಡುತ್ತಿರುವ ಕಾಲರಾದಂತಹ ಸಾಂಕ್ರಾಮಿಕ ರೋಗಗಳ ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಅವರು ಹೇಳಿದರು.

ಈ ವರ್ಷದ ಆರಂಭದಿಂದ ಯೆಮನ್‍ನಲ್ಲಿ ಸುಮಾರು 8,000 ಕಾಲರಾ ಶಂಕಿತ ಪ್ರಕರಣಗಳು ದಾಖಲಾಗಿದ್ದು, ಇದರಲ್ಲಿ 22 ಸಾವುಗಳು ಸಂಭವಿಸಿವೆ. ಹಾಗೆಯೇ 9,600ಕ್ಕೂ ಹೆಚ್ಚು ಡೆಂಗ್ಯೂ ಪ್ರಕರಣಗಳು ದಾಖಲಾಗಿದ್ದು, 37 ಜನರು ಮೃತಪಟ್ಟಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ವರದಿ ಮಾಡಿದೆ.

ಬಿಕ್ಕಟ್ಟು ಶಮನಕ್ಕೆ ಹೌದಿಗಳನ್ನು ಭೇಟಿಯಾದ ವಿಶ್ವಸಂಸ್ಥೆ ರಾಯಭಾರಿ

ಯಮನ್‍ನಲ್ಲಿ ಸಂಘರ್ಷ ಇನ್ನಷ್ಟು ಉಲ್ಬಣಗೊಳ್ಳುವುದನ್ನು ತಡೆಯುವ ಪ್ರಯತ್ನವಾಗಿ, ಕಳೆದ ವಾರಾಂತ್ಯದಲ್ಲಿ ಹೌದಿ ಪ್ರತಿನಿಧಿಗಳನ್ನು ಭೇಟಿಯಾಗಿದ್ದಾಗಿ ಯಮನ್‍ನ ನಿಯೋಜಿತ ವಿಶ್ವಸಂಸ್ಥೆ ರಾಯಭಾರಿ ಹಾನ್ಸ್ ಗ್ರಂಡ್‍ಬರ್ಗ್ ತಿಳಿಸಿದ್ದಾರೆ.

ಪ್ರಸ್ತುತ ಹೆಚ್ಚಾಗುತ್ತಿರುವ ಸಂಘರ್ಷವನ್ನು ಇನ್ನಷ್ಟು ಮುಂದುವರಿಯದಂತೆ ತಡೆಯಲು ಯಾವುದೇ ಮಾರ್ಗಗಳಿವೆಯೇ ಎಂದು ಪರಿಶೀಲಿಸುವ ಉದ್ದೇಶದಿಂದ ಮಸ್ಕತ್‍ನಲ್ಲಿ ಹೌದಿಗಳ ಮುಖ್ಯ ಸಂಧಾನಕಾರ ಮೊಹಮ್ಮದ್ ಅಬ್ದುಲ್-ಸಲಾಮ್ ಅವರನ್ನು ಭೇಟಿಯಾಗಿದ್ದೇನೆ. ಜೊತೆಗೆ, ಅಂತಾರಾಷ್ಟ್ರೀಯವಾಗಿ ಮಾನ್ಯತೆ ಪಡೆದ ಯಮನ್ ಸರಕಾರ ಮತ್ತು ಸೌದಿ ಅರೇಬಿಯಾ ಸೇರಿದಂತೆ ಪ್ರಾದೇಶಿಕ ಶಕ್ತಿಗಳೊಂದಿಗೆ ಸೌದಿ ರಾಜಧಾನಿ ರಿಯಾದ್‍ನಲ್ಲಿ ಮಾತುಕತೆ ನಡೆಸಲಾಗಿದೆ. ಈ ಪ್ರದೇಶದಲ್ಲಿನ ಅಸ್ಥಿರತೆ ಮತ್ತು ಇರಾನ್ ಸೇರಿದಂತೆ ಪ್ರಾದೇಶಿಕ ಶಕ್ತಿಗಳ ಹಾಗೂ ಯಮನ್‍ನ ಇತರ ನೆರೆಹೊರೆಯವರ ಪ್ರಭಾವವು ಯಮನ್ ಸಂಘರ್ಷದ ಹಾದಿಯ ಮೇಲೆಯೂ ಪರಿಣಾಮ ಬೀರಿದೆ ಎಂದು ಗ್ರಂಡ್‍ಬರ್ಗ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor