ಫಾತಿಮಾ ಎಝ್ಝಹ್ರಾ | Photo Credit : x 

ರಬಾತ್: ಮೊರಾಕ್ಕೊದ ರಾಜ ಮುಹಮ್ಮದ್ VI ಅವರು ಫಾತಿಮಾ ಎಝ್ಝಹ್ರಾ ಅಲ್ ಮನ್ಸೂರಿ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಿದ್ದಾರೆ. ಇದರೊಂದಿಗೆ ಮೊರಾಕ್ಕೊದ ಇತಿಹಾಸದಲ್ಲಿ ಪ್ರಧಾನಮಂತ್ರಿ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ 50 ವರ್ಷದ ಎಝ್ಝಹ್ರಾ ಪಾತ್ರರಾಗಿದ್ದಾರೆ. ಅರಬ್ ಜಗತ್ತಿನಲ್ಲಿ ಪ್ರಧಾನಿಯಾಗುತ್ತಿರುವ ಮೂರನೇ ಮಹಿಳೆ ಎಂಬ ಹೆಗ್ಗಳಿಕೆಯೂ ಅವರಿಗೆ ದೊರೆತಿದೆ.

ನಗರ ಯೋಜನಾ ಸಚಿವೆಯಾಗಿರುವ ಹಾಗೂ ಮರಾಕೆಶ್ ನಗರದ ಮೇಯರ್ ಆಗಿರುವ ಎಝ್ಝಹ್ರಾ ಅವರಿಗೆ ಹೊಸ ಸರ್ಕಾರ ರಚಿಸುವ ಹೊಣೆ ವಹಿಸಲಾಗಿದೆ ಎಂದು ರಾಜಭವನದ ಹೇಳಿಕೆ ತಿಳಿಸಿದೆ.

ಕಳೆದ ವಾರ ನಡೆದ ಚುನಾವಣೆಯ ಫಲಿತಾಂಶ ಪ್ರಕಟವಾದ ನಾಲ್ಕು ದಿನಗಳ ಬಳಿಕ ಎಝ್ಝಹ್ರಾ ಅವರನ್ನು ಪ್ರಧಾನಿಯಾಗಿ ನೇಮಕ ಮಾಡಲಾಗಿದೆ. ನೇಮಕದ ಬಳಿಕ ಟಿವಿ ಮೂಲಕ ಮಾತನಾಡಿದ ಅವರು, ತಮ್ಮ ನೇಮಕವನ್ನು ಐತಿಹಾಸಿಕ ಘಟನೆ ಎಂದು ಬಣ್ಣಿಸಿದರು.

“ನಮ್ಮ ದೇಶದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮಹಿಳೆಯೊಬ್ಬರು ಸರ್ಕಾರದ ನೇತೃತ್ವ ವಹಿಸುವ ಜವಾಬ್ದಾರಿಯನ್ನು ಸ್ವೀಕರಿಸುತ್ತಿದ್ದಾರೆ. ಇದು ನನಗೆ ಮಾತ್ರವಲ್ಲ, ಮೊರಾಕ್ಕೊದ ಎಲ್ಲ ಮಹಿಳೆಯರಿಗೂ ಹೆಮ್ಮೆಯ ಸಂಗತಿ” ಎಂದು ಅವರು ಹೇಳಿದರು.

ಎಝ್ಝಹ್ರಾ ಅವರ ರಾಜಪ್ರಭುತ್ವ ಪರವಾದ ‘ಆಥೆಂಟಿಸಿಟಿ ಆ್ಯಂಡ್ ಮಾಡರ್ನಿಟಿ ಪಾರ್ಟಿ’ (PAM) ಚುನಾವಣೆಯಲ್ಲಿ ಅತಿ ಹೆಚ್ಚು ಮತಗಳನ್ನು ಪಡೆದುಕೊಂಡಿದೆ. ಸಂಸತ್ತಿನ ಕೆಳಮನೆಯಾದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ನ ಒಟ್ಟು 395 ಸ್ಥಾನಗಳ ಪೈಕಿ PAM 97 ಸ್ಥಾನಗಳನ್ನು ಗೆದ್ದಿದೆ.

ಸರ್ಕಾರ ರಚಿಸಲು 198 ಸ್ಥಾನಗಳ ಬಹುಮತ ಅಗತ್ಯವಿದೆ. ಆದರೆ PAM 97 ಸ್ಥಾನಗಳನ್ನು ಮಾತ್ರ ಗೆದ್ದಿರುವುದರಿಂದ, ಸರ್ಕಾರ ರಚಿಸಲು ಇತರ ಪಕ್ಷಗಳೊಂದಿಗೆ ಮೈತ್ರಿ ಮಾಡಿಕೊಳ್ಳಬೇಕಾಗಿದೆ. ಪ್ರಧಾನಿಯಾಗಿ ಎಝ್ಝಹ್ರಾ ಅವರ ಮುಂದಿರುವ ಮೊದಲ ಪ್ರಮುಖ ಕೆಲಸ ಇದಾಗಿದೆ.

ರಾಜನ ಆಪ್ತ ಸ್ನೇಹಿತ ಫುವಾದ್ ಅಲಿ ಅಲ್ ಹಿಮ್ಮಾ ಅವರು 2008ರಲ್ಲಿ PAM ಪಕ್ಷವನ್ನು ಸ್ಥಾಪಿಸಿದ್ದರು. ಎಲ್ಲ ಪಕ್ಷಗಳೊಂದಿಗೆ ಕೆಲಸ ಮಾಡಲು ಸಿದ್ಧವಿರುವುದಾಗಿ PAM ತಿಳಿಸಿದೆ. ಆದರೆ ನ್ಯಾಯ ಮತ್ತು ಅಭಿವೃದ್ಧಿ ಪಕ್ಷ (PJD) ಹಾಗೂ ಫೆಡರೇಷನ್ ಆಫ್ ಡೆಮಾಕ್ರಟಿಕ್ ಲೆಫ್ಟ್ ಸೇರಿದಂತೆ ಕೆಲವು ಪಕ್ಷಗಳು ತಾವು ವಿರೋಧ ಪಕ್ಷದಲ್ಲೇ ಉಳಿಯುವುದಾಗಿ ಘೋಷಿಸಿವೆ.

ಅರಬ್ ಜಗತ್ತಿನ ಮೂರನೇ ಮಹಿಳಾ ಪ್ರಧಾನಿ

ಎಝ್ಝಹ್ರಾ ಅವರು ಅರಬ್ ಜಗತ್ತಿನಲ್ಲಿ ಪ್ರಧಾನಿಯಾಗುತ್ತಿರುವ ಮೂರನೇ ಮಹಿಳೆಯಾಗಿದ್ದಾರೆ. ಇದಕ್ಕೂ ಮೊದಲು ಟ್ಯುನೀಷಿಯಾದ ನಝ್ಲಾ ಬೌಡೆನ್ ಅವರು 2021ರ ಅಕ್ಟೋಬರ್‌ ನಿಂದ 2023ರ ಆಗಸ್ಟ್‌ ವರೆಗೆ ಪ್ರಧಾನಿಯಾಗಿ ಸೇವೆ ಸಲ್ಲಿಸಿದ್ದರು. ಬಳಿಕ 2025ರ ಮಾರ್ಚ್‌ ನಲ್ಲಿ ನೇಮಕಗೊಂಡ ಟ್ಯುನೀಷಿಯಾದ ಪ್ರಸ್ತುತ ಪ್ರಧಾನಿ ಸಾರಾ ಝಾಫರಾನಿ ಅವರು ಈ ಹುದ್ದೆಯಲ್ಲಿದ್ದಾರೆ.

ಕಾನೂನು ಪದವೀಧರೆ

1976ರಲ್ಲಿ ಮರಾಕೆಶ್‌ ನಲ್ಲಿ ಜನಿಸಿದ ಎಝ್ಝಹ್ರಾ ಕಾನೂನು ವ್ಯಾಸಂಗ ಮಾಡಿದ್ದಾರೆ. ಫ್ರಾನ್ಸ್‌ ನ ಮಾಂಟ್ಪೆಲಿಯರ್ ವಿಶ್ವವಿದ್ಯಾಲಯದಿಂದ ಉನ್ನತ ಅಧ್ಯಯನದ ಡಿಪ್ಲೊಮಾ ಪಡೆದಿದ್ದಾರೆ. ಅಮೆರಿಕದ ನ್ಯೂಯಾರ್ಕ್ ವಿಶ್ವವಿದ್ಯಾಲಯದಿಂದ ಆಂಗ್ಲೋ-ಸ್ಯಾಕ್ಸನ್ ವಾಣಿಜ್ಯ ಕಾನೂನಿನಲ್ಲೂ ಡಿಪ್ಲೊಮಾ ಪಡೆದಿದ್ದಾರೆ.

ಅವರು ಆರಂಭದಲ್ಲೇ ಸ್ಥಳೀಯ ಆಡಳಿತಕ್ಕೆ ಪ್ರವೇಶಿಸಿದರು. 2009ರಲ್ಲಿ ಮರಾಕೆಶ್ ನಗರದ ಮೇಯರ್ ಆಗಿ ಆಯ್ಕೆಯಾದ ಅವರು, ನಗರದ ಮೇಯರ್ ಹುದ್ದೆ ಅಲಂಕರಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 2009ರಿಂದ 2015ರವರೆಗೆ ಈ ಹುದ್ದೆಯಲ್ಲಿದ್ದ ಅವರು, 2021ರಲ್ಲಿ ಮತ್ತೆ ಮರಾಕೆಶ್ ಮೇಯರ್ ಆಗಿ ಆಯ್ಕೆಯಾದರು.

2011, 2016 ಹಾಗೂ 2021ರ ಚುನಾವಣೆಗಳಲ್ಲಿ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್‌ ಗೆ ಆಯ್ಕೆಯಾಗುವ ಮೂಲಕ ಸಂಸದೀಯ ಅನುಭವ ಗಳಿಸಿದರು.

2021ರ ಅಕ್ಟೋಬರ್‌ ನಲ್ಲಿ ಎಝ್ಝಹ್ರಾ ರಾಷ್ಟ್ರೀಯ ಸರ್ಕಾರಕ್ಕೆ ಸೇರ್ಪಡೆಯಾದರು. ರಾಷ್ಟ್ರೀಯ ಭೂಯೋಜನೆ, ನಗರಾಭಿವೃದ್ಧಿ, ವಸತಿ ಮತ್ತು ನಗರ ನೀತಿ ಸಚಿವೆಯಾಗಿ ಅವರನ್ನು ನೇಮಕ ಮಾಡಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor