ಅಮೆರಿಕ ಸೆನೆಟ್ ನಲ್ಲಿ ಕುರ್ಆನ್ ಮೇಲೆ ಪ್ರಮಾಣವಚನ ಸ್ವೀಕರಿಸಲಿರುವ ಅಲ್-ಸಯ್ಯದ್
Photo: Time.com
ವಾಷಿಂಗ್ಟನ್: ಅಮೆರಿಕದ ಸೆನೆಟ್ ಗೆ ಆಯ್ಕೆಯಾದ ಮೊದಲ ಮುಸ್ಲಿಂ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ಮಿಶಿಗನ್ ನ ಅಬ್ದುಲ್ ಅಲ್-ಸಯ್ಯದ್ ಅವರು, ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಕುರ್ಆನ್ ಬಳಸುವ ಸಾಧ್ಯತೆಯಿದೆ ಎಂದು ತಿಳಿಸಿದ್ದಾರೆ.
NPRನ 'ನ್ಯೂಸ್ಮೇಕರ್ಸ್' ಕಾರ್ಯಕ್ರಮದಲ್ಲಿ ನಿರೂಪಕಿ ಲೀಲಾ ಫಾಡೆಲ್ ಅವರೊಂದಿಗೆ ಮಾತನಾಡಿದ ಅವರು, ಕುರ್ಆನ್ ಮೇಲೆ ಪ್ರಮಾಣವಚನ ಸ್ವೀಕರಿಸುವ ಉದ್ದೇಶ ಹೊಂದಿರುವುದಾಗಿ ಹೇಳಿದ್ದಾರೆ.
ನ.3ರಂದು ನಡೆದ ಮಧ್ಯಂತರ ಚುನಾವಣೆಯಲ್ಲಿ ಡೆಮೋಕ್ರಾಟ್ ಅಭ್ಯರ್ಥಿಯಾಗಿದ್ದ ಅಲ್-ಸಯ್ಯದ್, ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ಅವರನ್ನು ಸೋಲಿಸಿದ್ದರು. ಅವರು 2027ರ ಜನವರಿಯಲ್ಲಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.
ಮಿನ್ನೇಸೋಟದ ಡೆಮೋಕ್ರಾಟ್ ಸಂಸದರಾಗಿದ್ದ ಕೀತ್ ಎಲಿಸನ್ ಅವರು ಅಮೆರಿಕದ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ಗೆ ಆಯ್ಕೆಯಾದ ಮೊದಲ ಮುಸ್ಲಿಂ ಆಗಿದ್ದರು. 2007ರ ಜನವರಿ 4ರಂದು ಅಂದಿನ ಹೌಸ್ ಸ್ಪೀಕರ್ ನ್ಯಾನ್ಸಿ ಪೆಲೋಸಿ ಉಪಸ್ಥಿತಿಯಲ್ಲಿ ನಡೆದ ಮರು ಪ್ರಮಾಣವಚನ ಸಮಾರಂಭದಲ್ಲಿ ಅವರು ಕುರ್ಆನ್ ಪ್ರತಿಯನ್ನು ಬಳಸಿದ್ದರು.
ಸದನದ ಅಧಿಕೃತ ಪ್ರಮಾಣವಚನವನ್ನು ಸದಸ್ಯರು ಸಾಮೂಹಿಕವಾಗಿ ಯಾವುದೇ ಧಾರ್ಮಿಕ ಗ್ರಂಥವಿಲ್ಲದೆ ಸ್ವೀಕರಿಸುತ್ತಾರೆ. ಧಾರ್ಮಿಕ ಗ್ರಂಥವು ಸೆನೆಟರ್ ನ ಸಾಂವಿಧಾನಿಕ ಬದ್ಧತೆಯನ್ನು ನಿರ್ಧರಿಸುವುದಿಲ್ಲ ಎಂದು ಅಲ್-ಸಯ್ಯದ್ ಸ್ಪಷ್ಟಪಡಿಸಿದ್ದಾರೆ.
ಅಮೆರಿಕ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರು ಜನವರಿಯಲ್ಲಿ ನೂತನ ಸೆನೆಟರ್ ಗಳಿಗೆ ಪ್ರಮಾಣವಚನ ಬೋಧಿಸುವ ನಿರೀಕ್ಷೆಯಿದೆ. ವ್ಯಾನ್ಸ್ ಅವರು ಪ್ರಮಾಣವಚನ ಬೋಧಿಸುವುದು ಸಾಂವಿಧಾನಿಕ ಕರ್ತವ್ಯವಾಗಿರುವುದರಲ್ಲಿ 'ಒಂದು ವ್ಯಂಗ್ಯ' ಇದೆ ಎಂದು ಅಲ್-ಸಯ್ಯದ್ ಹೇಳಿದ್ದಾರೆ.