ಅಮೆರಿಕ ಸೆನೆಟ್ ಪ್ರಾಥಮಿಕ ಚುನಾವಣೆ: ಮಿಷಿಗನ್‌ನಲ್ಲಿ ಅಬ್ದುಲ್ ಅಲ್-ಸಯೀದ್‌ಗೆ ಐತಿಹಾಸಿಕ ಜಯ

Update: 2026-08-05 21:48 IST

ಅಬ್ದುಲ್ ಅಲ್‌-ಸಯೀದ್ | Photo Credit ; time.com

ವಾಷಿಂಗ್ಟನ್ / ಡೆಟ್ರಾಯಿಟ್: ಅಮೆರಿಕದ ಮಿಷಿಗನ್ ರಾಜ್ಯದಲ್ಲಿ ನಡೆದ ಡೆಮಾಕ್ರಟಿಕ್ ಪಕ್ಷದ ಯು.ಎಸ್. ಸೆನೆಟ್ ಪ್ರಾಥಮಿಕ ಚುನಾವಣೆಯಲ್ಲಿ ಮಾಜಿ ಸಾರ್ವಜನಿಕ ಆರೋಗ್ಯ ಅಧಿಕಾರಿ, ಎಡಪಂಥೀಯ ಯುವ ನಾಯಕ ಅಬ್ದುಲ್ ಅಲ್‌-ಸಯೀದ್ ಅವರು ಐತಿಹಾಸಿಕ ಗೆಲುವು ಸಾಧಿಸಿದ್ದಾರೆ. ತೀವ್ರ ಪೈಪೋಟಿಯಿಂದ ಕೂಡಿದ್ದ ಈ ಚುನಾವಣೆಯಲ್ಲಿ ಅವರು ಯು.ಎಸ್. ಪ್ರತಿನಿಧಿ ಸಭೆಯ ಸದಸ್ಯೆ ಹೇಲಿ ಸ್ಟೀವನ್ಸ್ ಅವರನ್ನು ಅಲ್ಪ ಅಂತರದಿಂದ ಪರಾಭವಗೊಳಿಸಿದ್ದಾರೆ.

ಒಟ್ಟು ಚಲಾವಣೆಯಾದ ಸುಮಾರು 15 ಲಕ್ಷ ಮತಗಳಲ್ಲಿ 41 ವರ್ಷದ ಅಲ್‌-ಸಯೀದ್ ಅವರು ಸುಮಾರು 15,000 ಮತಗಳ ಅಂತರದ ಮುನ್ನಡೆಯೊಂದಿಗೆ ಜಯಭೇರಿ ಬಾರಿಸಿದ್ದಾರೆ. ಈ ಗೆಲುವಿನೊಂದಿಗೆ, ಮುಂಬರುವ ನವೆಂಬರ್‌ ನಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ಗೆದ್ದು ಬಂದಲ್ಲಿ ಅಮೆರಿಕದ ಇತಿಹಾಸದಲ್ಲೇ ಪ್ರಥಮ ಮುಸ್ಲಿಂ ಯು.ಎಸ್. ಸೆನೆಟರ್ ಆಗಿ ಹೊರಹೊಮ್ಮುವ ಅವಕಾಶ ಅವರಿಗೆ ಲಭಿಸಿದೆ. ಅಮೆರಿಕಾ ಸಂಸತ್ತಿನ ಹೌಸ್ ಆಫ್ ರೆಪ್ರೆಸೆಂಟೇಟಿವ್ಸ್ ನಲ್ಲಿ ಹಲವು ಮುಸ್ಲಿಮರು ಸೇವೆ ಸಲ್ಲಿಸಿದ್ದರೂ, ಮೇಲ್ಮನೆ ಎಂದು ಕರೆಯಲ್ಪಡುವ ಸೆನೆಟ್ ಗೆ ಈವರೆಗೆ ಯಾವುದೇ ಮುಸ್ಲಿಮ್ ವ್ಯಕ್ತಿ ಆಯ್ಕೆಯಾಗಿ ಹೋಗಿಲ್ಲ.

ಈ ಚುನಾವಣೆಯು ಡೆಮಾಕ್ರಟಿಕ್ ಪಕ್ಷದ ಒಳಗಿನ ಸೈದ್ಧಾಂತಿಕ ಸಂಘರ್ಷಕ್ಕೆ ಸಾಕ್ಷಿಯಾಗಿತ್ತು. ಪ್ರಗತಿಪರ ಬಣವನ್ನು ಪ್ರತಿನಿಧಿಸುತ್ತಿದ್ದ ಅಲ್-ಸಯೀದ್ ಅವರಿಗೆ ಅಮೆರಿಕದ ಖ್ಯಾತ ನಾಯಕರಾದ ಬರ್ನಿ ಸ್ಯಾಂಡರ್ಸ್ ಹಾಗೂ ಅಲೆಕ್ಸಾಂಡ್ರಿಯಾ ಒಕಾಸಿಯೋ-ಕಾರ್ಟೆಜ್ ಬೆಂಬಲ ನೀಡಿದ್ದರು. ಮತ್ತೊಂದೆಡೆ, ಪಕ್ಷದ ಹಿರಿಯ ನಾಯಕರಾದ ಚಕ್ ಶುಮರ್ ಮತ್ತು ರಾಜ್ಯಪಾಲರಾದ ಗ್ರೆಚೆನ್ ವಿಟ್ಮರ್ ಅವರ ಬೆಂಬಲದೊಂದಿಗೆ ಕಣಕ್ಕಿಳಿದಿದ್ದ ಹೇಲಿ ಸ್ಟೀವನ್ಸ್ ಸಾಂಪ್ರದಾಯಿಕ ಹಾಗೂ ಮಿತವಾದಿ ಬಣವನ್ನು ಪ್ರತಿನಿಧಿಸಿದ್ದರು.

ತಮ್ಮ ಪ್ರಚಾರದ ಉದ್ದಕ್ಕೂ 'ಮೆಡಿಕೇರ್ ಫಾರ್ ಆಲ್' (ಎಲ್ಲರಿಗೂ ಉಚಿತ ಆರೋಗ್ಯ ಯೋಜನೆ) ಹಾಗೂ ಶತಕೋಟ್ಯಧಿಪತಿಗಳ ಮೇಲೆ ಶೇಕಡಾ 7 ರಷ್ಟು ಆಸ್ತಿ ತೆರಿಗೆ ವಿಧಿಸುವಂತಹ ನೀತಿಗಳನ್ನು ಅಲ್-ಸಯೀದ್ ಪ್ರತಿಪಾದಿಸಿದ್ದರು. ಇದಲ್ಲದೆ, ಇಸ್ರೇಲ್‌ ಗೆ ಯುಎಸ್ ಮಿಲಿಟರಿ ನೆರವು ನೀಡುವುದನ್ನು ತೀವ್ರವಾಗಿ ವಿರೋಧಿಸಿದ್ದ ಅವರು, ಗಾಝಾದಲ್ಲಿ ಇಸ್ರೇಲ್‌ ನ ಕ್ರಮಗಳನ್ನು ಕಟುವಾಗಿ ವಿಮರ್ಶಿಸಿದ್ದರು. ಅವರ ಪ್ರತಿಸ್ಫರ್ಧಿ ಸ್ಟೀವನ್ಸ್ ಕಟ್ಟಾ ಇಸ್ರೇಲ್ ಬೆಂಬಲಿಗರಾಗಿ ಗುರುತಿಸಿಕೊಂಡವರು.

ಫಲಿತಾಂಶ ಹೊರಬಿದ್ದ ತಕ್ಷಣವೇ ಹೇಲಿ ಸ್ಟೀವನ್ಸ್ ಅವರು ಅಲ್-ಸಯೀದ್ ಅವರಿಗೆ ಕರೆ ಮಾಡಿ ತಮ್ಮ ಸೋಲನ್ನು ಒಪ್ಪಿಕೊಂಡಿದ್ದಾರೆ ಹಾಗೂ ನವೆಂಬರ್ ಸಾರ್ವತ್ರಿಕ ಚುನಾವಣೆಯಲ್ಲಿ ಅವರಿಗೆ ಸಂಪೂರ್ಣ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

ನವೆಂಬರ್‌ ನಲ್ಲಿ ನಡೆಯಲಿರುವ ಅಂತಿಮ ಹಣಾಹಣಿಯಲ್ಲಿ ಈಜಿಪ್ಟ್ ವಲಸಿಗ ಪೋಷಕರ ಪುತ್ರ ಅಲ್-ಸಯೀದ್ ಅವರು ರಿಪಬ್ಲಿಕನ್ ಪಕ್ಷದ ಮೈಕ್ ರೋಜರ್ಸ್ ಅವರನ್ನು ಎದುರಿಸಲಿದ್ದಾರೆ. ಈ ನಡುವೆ, ಅಲ್-ಸಯೀದ್ ಅವರ ಪ್ರಗತಿಪರ ಸಿದ್ಧಾಂತಗಳು ಸಾರ್ವತ್ರಿಕ ಚುನಾವಣೆಯಲ್ಲಿ ತಮಗೆ ಲಾಭ ತರಲಿವೆ ಎಂದು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರತಿಕ್ರಿಯಿಸಿದ್ದಾರೆ. ಮಿಷಿಗನ್ ರಾಜ್ಯವು ಯು.ಎಸ್. ಸೆನೆಟ್‌ ನ ಮೇಲ್ಮನೆಯ ನಿಯಂತ್ರಣವನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುವುದರಿಂದ ಈ ಸಾರ್ವತ್ರಿಕ ಚುನಾವಣೆ ದೇಶಾದ್ಯಂತ ತೀವ್ರ ಕುತೂಹಲ ಕೆರಳಿಸಿದೆ.

ಅಧ್ಯಕ್ಷೀಯ ಚುನಾವಣೆಯಲ್ಲಿ ಮಿಷಿಗನ್ ಸಾಮಾನ್ಯವಾಗಿ ಡೆಮೊಕ್ರಾಟರ ಪರವೇ ಜನಾದೇಶ ಕೊಡುತ್ತಾ ಬಂದಿತ್ತು. ಆದರೆ ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಟ್ರಂಪ್ ಗೆ ಈ ರಾಜ್ಯ ಮುನ್ನಡೆ ನೀಡಿ ಅಚ್ಚರಿ ಮೂಡಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News