ಗಾಝಾ ಕುರಿತು `ಶಾಂತಿ ಮಂಡಳಿ' ಹೇಳಿಕೆಗೆ ಅಸಮಾಧಾನ ವ್ಯಕ್ತಪಡಿಸಿದ ಹಮಾಸ್
ಡೊನಾಲ್ಡ್ ಟ್ರಂಪ್ | Photo Credit : PTI
ಗಾಝಾ , ಆ.5: ಹಮಾಸ್‍ನ ನಿರೀಕ್ಷಿತ ಶಸ್ತ್ರತ್ಯಾಗ ಮತ್ತು ಗಾಝಾದಲ್ಲಿ ಇಸ್ರೇಲ್ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳುವ ಕುರಿತು ನೀಡಿದ ಹೇಳಿಕೆಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವ ಹಮಾಸ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ `ಶಾಂತಿ ಮಂಡಳಿ'ಯಿಂದ ಸ್ಪಷ್ಟೀಕರಣವನ್ನು ಕೋರಿದೆ.
ಹಮಾಸ್ ಸಂಘಟನೆಯು ತನ್ನ ಶಸ್ತ್ರಾಸ್ತ್ರಗಳನ್ನು ಹಸ್ತಾಂತರಿಸಲು ಒಪ್ಪಿಕೊಂಡಿದೆ ಎಂದು ಜುಲೈ 31ರಂದು ತಿಳಿಸಿದ್ದ `ಶಾಂತಿ ಮಂಡಳಿ' , ಹಮಾಸ್ ಸಂಘಟನೆಯ ಹಂತ ಹಂತದ ಶಸ್ತ್ರತ್ಯಾಗ ಮತ್ತು ಗಾಝಾದಿಂದ ಹಂತ ಹಂತವಾಗಿ ಇಸ್ರೇಲ್ ಹಿಂತೆಗೆದುಕೊಳ್ಳುವಿಕೆ ಸೇರಿದಂತೆ ಹಲವು ನಿಬಂಧನೆಗಳಿರುವ ಮಾರ್ಗಸೂಚಿಯನ್ನು ಪ್ರಕಟಿಸಿತ್ತು.
ಆದರೆ, ಆಗಸ್ಟ್ 3ರಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ಸಭೆ ನಡೆಸಿದ್ದ `ಶಾಂತಿ ಮಂಡಳಿ', ಹಮಾಸ್ ಸಂಪೂರ್ಣವಾಗಿ ಶಸ್ತ್ರತ್ಯಾಗ ಮಾಡಿದ ನಂತರವೇ ಗಾಝಾದಲ್ಲಿನ ಪ್ರಸ್ತುತ ಸ್ಥಾನಗಳಿಂದ ಇಸ್ರೇಲ್ ಪಡೆಗಳನ್ನು ಹಿಂತೆಗೆದುಕೊಳ್ಳುವ ಪ್ರಕ್ರಿಯೆ ಪ್ರಾರಂಭವಾಗುತ್ತದೆ ಎಂದು ಹೇಳಿದೆ.
`ಶಾಂತಿ ಮಂಡಳಿಯ' ಅಡಿಯಲ್ಲಿ ಗಾಝಾದ ಉನ್ನತ ಪ್ರತಿನಿಧಿಯಾಗಿರುವ ನಿಕೊಲಾಯ್ ಮ್ಲಾಡೆನೋವ್ ಅವರು ನೆತನ್ಯಾಹು ಅವರೊಂದಿಗಿನ ಸಭೆಯ ನಂತರ ನೀಡಿದ ಹೇಳಿಕೆಯಿಂದ ಹಮಾಸ್ ಮತ್ತು ಇತರ ಫೆಲೆಸ್ತೀನ್ ಬಣಗಳು ಅಸಮಾಧಾನಗೊಂಡಿವೆ ಎಂದು ಮೂಲಗಳನ್ನು ಉಲ್ಲೇಖಿಸಿ ಎಎಫ್‍ಪಿ ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ಹೇಳಿಕೆಯು ಕೇವಲ ಶಸ್ತ್ರಾಸ್ತ್ರಗಳ ವಿಷಯದ ಮೇಲೆ ಮಾತ್ರ ಗಮನ ಹರಿಸಿದೆ. ಆದರೆ ಇಸ್ರೇಲ್‍ನ ಜವಾಬ್ದಾರಿಗಳು, ವಿಶೇಷವಾಗಿ ಮಾನವೀಯ ಅಂಶಗಳು ಮತ್ತು ಗಾಝಾ ಪಟ್ಟಿಯಲ್ಲಿ ವೈಮಾನಿಕ ಹಾಗೂ ಫಿರಂಗಿ ಬಾಂಬ್ ದಾಳಿ, ಗುಂಡಿನ ಚಕಮಕಿ, ಹತ್ಯೆಗಳು ಮತ್ತು ಮಿಲಿಟರಿ ಕಾರ್ಯಾಚರಣೆಗಳನ್ನು ನಿಲ್ಲಿಸುವ ಇಸ್ರೇಲ್‍ನ ಬದ್ಧತೆಯನ್ನು ಉಲ್ಲೇಖಿಸುವಲ್ಲಿ ವಿಫಲವಾಗಿದೆ.
ಒಪ್ಪಂದದ ಪ್ರಕಾರ `ಒಪ್ಪಿಕೊಂಡ ನಿಯಮಗಳು, ಗಾಝಾದಲ್ಲಿ ಇಸ್ರೇಲ್ ಮಿಲಿಟರಿ ಕಾರ್ಯಾಚರಣೆ ತೀವ್ರಗೊಳಿಸಿರುವ ಬಗ್ಗೆ , ಮತ್ತು ಒಪ್ಪಂದದ ಅನುಷ್ಠಾನವನ್ನು ವಿಳಂಬಗೊಳಿಸುವ ನೀತಿಯ ಬಗ್ಗೆ ಮ್ಲಾಡೆನೋವ್ ಅವರಿಂದ `ಸ್ಪಷ್ಟ ಮತ್ತು ಅಧಿಕೃತ ಉತ್ತರಕ್ಕಾಗಿ ಕಾಯುತ್ತಿರುವುದಾಗಿ ಹಮಾಸ್ ಹೇಳಿದೆ.
ಈ ಮಧ್ಯೆ, ಇಸ್ರೇಲ್ ಮತ್ತು ಹಮಾಸ್ ಸಂಘಟನೆಯ ನಡುವೆ ನಡೆಯುತ್ತಿರುವ ಪರೋಕ್ಷ ಮಾತುಕತೆಯಲ್ಲಿ ಫೆಲೆಸ್ತೀನ್ ನಾಯಕರು ತೆಗೆದುಕೊಳ್ಳುವ ಯಾವುದೇ ಉಪಕ್ರಮ ಅಥವಾ ನಿರ್ಧಾರವನ್ನು ಟೆಹರಾನ್ ಬೆಂಬಲಿಸಲಿದೆ ಎಂದು ಇರಾನ್ ಅಧ್ಯಕ್ಷರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.