ದುಬೈನ ಜೆಬೆಲ್ ಅಲಿ ಕೈಗಾರಿಕಾ ಪ್ರದೇಶದಲ್ಲಿ ಸರಣಿ ಸ್ಫೋಟ : ವರದಿ
ಯೆಮನ್ ರಾಜಧಾನಿ ಸನಾದಲ್ಲೂ ಸರಣಿ ಸ್ಫೋಟದ ವರದಿ
Photo Credit : x
ದುಬೈ, ಆ.5: ಬುಧವಾರ ಬೆಳಗ್ಗೆ ದುಬೈನ ಜೆಬೆಲ್ ಅಲಿ ಕೈಗಾರಿಕಾ ವಲಯದಲ್ಲಿ ಸರಣಿ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾದ ವಿವಿಧ ವೀಡಿಯೊಗಳಲ್ಲಿ ಆಗಸದಲ್ಲಿ ದಟ್ಟವಾದ ಹೊಗೆಯ ಮೋಡಗಳು ಏಳುತ್ತಿರುವುದು ಕಂಡುಬಂದಿದೆ.
ಪ್ರಮುಖ ಸಾರಿಗೆ ಮತ್ತು ಇಂಧನ ಕೇಂದ್ರವಾಗಿರುವ ದಕ್ಷಿಣ ದುಬೈನ ಜೆಬೆಲ್ ಅಲಿ ಬಂದರು ಮತ್ತು ಕೈಗಾರಿಕಾ ಪ್ರದೇಶದ ಬಳಿ 20 ನಿಮಿಷಗಳ ಅವಧಿಯಲ್ಲಿ ಕನಿಷ್ಠ ಏಳು ಸ್ಫೋಟಗಳು ಸಂಭವಿಸಿವೆ. ಘಟನೆಗೆ ನಿಖರವಾದ ಕಾರಣ, ಸಾವುನೋವುಗಳು ಅಥವಾ ಹಾನಿಯ ಪ್ರಮಾಣದ ಬಗ್ಗೆ ಅಧಿಕಾರಿಗಳು ಇನ್ನು ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ. ಜೆಬೆಲ್ ಅಲಿ ಬಂದರಿಗೆ ಹೊಂದಿಕೊಂಡಿರುವ ಇಂಧನ ಸಂಗ್ರಹಣೆ ಮತ್ತು ವರ್ಗಾವಣೆಗೆ ಬಳಸಲಾಗುವ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ಘಟನೆಯನ್ನು ವೀಡಿಯೊ ಚಿತ್ರೀಕರಿಸಿದ ಇಬ್ಬರನ್ನು ವಶಕ್ಕೆ ಪಡೆಯಲಾಗಿದೆ ಎಂದು ಯುಎಇ ಅಧಿಕಾರಿಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ.
ಯೆಮನ್‍ನಿಂದ ನಡೆಸಲಾದ ಕ್ಷಿಪಣಿ ದಾಳಿಯಿಂದ ಈ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್‍ನ `ಮೆಹ್ರ್' ಸುದ್ದಿ ಸಂಸ್ಥೆ ಪ್ರತಿಪಾದಿಸಿದೆ. ಹಲವು ಸ್ಫೋಟಗಳ ಶಬ್ದ ಕೇಳಿಸಿರುವುದನ್ನು ಸ್ಥಳೀಯ ಮಾಧ್ಯಮಗಳು ದೃಢಪಡಿಸಿವೆಯಾದರೂ ಯಾವುದೇ ಅಧಿಕೃತ ವಿವರಣೆಯನ್ನು ನೀಡಿಲ್ಲ.
ಇದೇ ವೇಳೆಗೆ, ಯೆಮನ್ ರಾಜಧಾನಿ ಸನಾದಲ್ಲೂ ಸ್ಫೋಟಗಳು ವರದಿಯಾಗಿವೆ. ಕೆಲವು ವರದಿಗಳು ಈ ಸ್ಫೋಟಗಳನ್ನು ವೈಮಾನಿಕ ದಾಳಿಗಳು ಎಂದು ಹೇಳಿದರೆ, ಯೆಮನ್‍ನ ಹೌದಿ ಬಂಡುಕೋರರು ಜೆಬೆಲ್ ಅಲಿ ಕೈಗಾರಿಕಾ ಪ್ರದೇಶವನ್ನು ಗುರಿಯಾಗಿಸಿಕೊಂಡಿರಬಹುದು ಎಂದು ಕೆಲವು ಸ್ಥಳೀಯ ಮಾಧ್ಯಮ ವರದಿಗಳು ಸುಳಿವು ನೀಡಿವೆ.
ಈ ಘಟನೆಯ ಹೊಣೆಗಾರಿಕೆಯ ಕುರಿತು ಯುಎಇ ಅಧಿಕಾರಿಗಳಿಂದಾಗಲಿ ಅಥವಾ ಹೌದಿಗಳಿಂದಾಗಲಿ ಯಾವುದೇ ಅಧಿಕೃತ ದೃಢೀಕರಣ ಸಿಕ್ಕಿಲ್ಲ. ಪ್ರಸ್ತುತ ನಡೆಯುತ್ತಿರುವ ಇರಾನ್ ಸಂಘರ್ಷಕ್ಕೆ ಸಂಬಂಧಿಸಿದಂತೆ ಪ್ರಾದೇಶಿಕ ಉದ್ವಿಗ್ನತೆ ಹೆಚ್ಚಾಗಿರುವ ಬೆನ್ನಲ್ಲೇ ಈ ಬೆಳವಣಿಗೆಗಳು ಸಂಭವಿಸಿದೆ.