ಸಾಂದರ್ಭಿಕ ಚಿತ್ರ | Photo credit : warontherocks

ಟೆಹರಾನ್ : ಇರಾನ್‌ ನ ಪಡೆಗಳ ಸಾಮರ್ಥ್ಯ ಹಾಗೂ ಪ್ರಭಾವದ ಪರಿಣಾಮ ಅಮೆರಿಕದ ಸೇನೆ ಇರಾನ್ ಗಡಿಯಿಂದ 1,000 ಕಿ.ಮೀಗೂ ಹೆಚ್ಚು ದೂರಕ್ಕೆ ಹಿಂದೆ ಸರಿದಿದೆ ಎಂದು ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC)ನ ಉನ್ನತ ಕಮಾಂಡರ್ ರಿಯರ್ ಅಡ್ಮಿರಲ್ ಅಲಿ ಫದಾವಿ ಹೇಳಿದ್ದಾರೆ ಎಂದು Aljazeera ವರದಿ ಮಾಡಿದೆ.

‘ಅಮೆರಿಕನ್ನರು ಪಲಾಯನ ಮಾಡಿ ನಮ್ಮ ಗಡಿಯಿಂದ 1,000 ಕಿ.ಮೀಗಿಂತಲೂ ಹೆಚ್ಚು ದೂರಕ್ಕೆ ತೆರಳಿದ್ದಾರೆ. ಇದು ಅವರ ಆಯ್ಕೆಯಾಗಿರಲಿಲ್ಲ. ಇಸ್ಲಾಮಿಕ್ ಗಣರಾಜ್ಯ ಇರಾನ್ ಮತ್ತು IRGCಯ ಭೂಸೇನೆಯ ಪ್ರಭಾವ ಹಾಗೂ ಸಾಮರ್ಥ್ಯದ ಪರಿಣಾಮವಾಗಿ ಅವರು ಹಿಂದೆ ಸರಿಯಬೇಕಾಯಿತು’ ಎಂದು ಫದಾವಿ ಟಿವಿ ಸಂದರ್ಶನವೊಂದರಲ್ಲಿ ಹೇಳಿದ್ದಾರೆ ಎಂದು ಇರಾನ್‌ ನ ‘ಪ್ರೆಸ್ ಟಿವಿ’ ವರದಿ ಮಾಡಿದೆ.

ಗಲ್ಫ್, ಹಾರ್ಮುಝ್ ಜಲಸಂಧಿ, ಒಮಾನ್ ಸಮುದ್ರ ಅಥವಾ ಉತ್ತರ ಹಿಂದೂ ಮಹಾಸಾಗರದಲ್ಲಿ ಅಮೆರಿಕದ ಯಾವುದೇ ನೌಕೆಗಳು ಇಲ್ಲದಿರುವುದು ಇದೇ ಮೊದಲ ಬಾರಿ ಎಂದು ಫದಾವಿ ಹೇಳಿದ್ದಾರೆ. ಅಲ್ಲದೆ, ಅಮೆರಿಕದ ಯುದ್ಧನೌಕೆಗಳು IRGCಯ ದಾಳಿಗಳಿಗೆ ‘ಶೇಕಡಾ 100ರಷ್ಟು ದುರ್ಬಲವಾಗಿವೆ’ ಎಂದೂ ಅವರು ಪ್ರತಿಪಾದಿಸಿದ್ದಾರೆ. ಅಂದರೆ, ಅಮೆರಿಕದ ಯುದ್ಧನೌಕೆಗಳು IRGCಗೆ ಸುಲಭವಾಗಿ ಗುರಿಯಾಗಬಲ್ಲವು ಎಂದು ಅವರು ಹೇಳಿದ್ದಾರೆ.

ಇರಾನ್‌ ನ ಬಂದರುಗಳ ಮೇಲೆ ಅಮೆರಿಕದ ಸೇನೆ ಕಠಿಣ ನೌಕಾ ದಿಗ್ಬಂಧನ ಮುಂದುವರಿಸಿರುವ ಸಂದರ್ಭದಲ್ಲೇ ಫದಾವಿ ಅವರ ಈ ಹೇಳಿಕೆ ಹೊರಬಿದ್ದಿದೆ.

‘ನಿಯಮಗಳ ಕಟ್ಟುನಿಟ್ಟಿನ ಪಾಲನೆಯನ್ನು ಖಚಿತಪಡಿಸಿಕೊಳ್ಳಲು’ ಜುಲೈ ತಿಂಗಳಿನಿಂದ 125 ವಾಣಿಜ್ಯ ನೌಕೆಗಳನ್ನು ಬೇರೆಡೆಗೆ ತಿರುಗಿಸಲಾಗಿದೆ ಎಂದು ಅಮೆರಿಕದ ಸೆಂಟ್ರಲ್ ಕಮಾಂಡ್ ಕಳೆದ ವಾರ ತಿಳಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor