ಐರ್ಲೆಂಡ್ ವಾಯುಪ್ರದೇಶದಲ್ಲಿ ಹಾರುತ್ತಿದ್ದಾಗ ಒಮ್ಮೆಲೇ 9,000 ಅಡಿ ಕೆಳಗಿಳಿದ ಬ್ರಿಟಿಷ್ ಏರ್ವೇಸ್ ವಿಮಾನ; ‘7700’ ತುರ್ತು ಸಂಕೇತ ರವಾನೆ!
ಸಾಂದರ್ಭಿಕ ಚಿತ್ರ | Photo Credit : AP
ಲಂಡನ್: ಚಿಕಾಗೊಗೆ ತೆರಳುತ್ತಿದ್ದ ಬ್ರಿಟಿಷ್ ಏರ್ವೇಸ್ ನ BA295 ವಿಮಾನವು ಐರ್ಲೆಂಡ್ ವಾಯುಪ್ರದೇಶದಲ್ಲಿ ಒಮ್ಮಲೇ ಸುಮಾರು 9,000 ಅಡಿ ಕೆಳಗಿಳಿದು ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ. ವಿಮಾನವು ವಾಯುಯಾನ ತುರ್ತು ಸಂಕೇತ ‘7700’ ಅನ್ನು ರವಾನಿಸಿರುವುದಾಗಿ ಫ್ಲೈಟ್ ಟ್ರ್ಯಾಕರ್ ಮಾಹಿತಿ ತಿಳಿಸಿದೆ.
ವಿಮಾನದಲ್ಲಿ ತುರ್ತು ಪರಿಸ್ಥಿತಿ ಎದುರಾದಾಗ ತಕ್ಷಣದ ನೆರವು ಅಗತ್ಯವಿದೆ ಎಂಬುದನ್ನು ವಾಯು ಸಂಚಾರ ನಿಯಂತ್ರಕರಿಗೆ ತಿಳಿಸಲು ‘7700’ ಸಂಕೇತವನ್ನು ಬಳಸಲಾಗುತ್ತದೆ.
ಬೋಯಿಂಗ್ 777-200ER ಮಾದರಿಯ BA295 ವಿಮಾನವು G-VIIA ನೋಂದಣಿ ಸಂಖ್ಯೆಯನ್ನು ಹೊಂದಿದೆ. ಸ್ಥಳೀಯ ಸಮಯದ ಪ್ರಕಾರ ಬೆಳಿಗ್ಗೆ 11.50ರ ಸುಮಾರಿಗೆ ಲಂಡನ್ನ ಹೀಥ್ರೂ ವಿಮಾನ ನಿಲ್ದಾಣದ ಟರ್ಮಿನಲ್ 5ರಿಂದ ಚಿಕಾಗೊಗೆ ಪ್ರಯಾಣ ಆರಂಭಿಸಿತ್ತು. ಸುಮಾರು 8 ಗಂಟೆ 40 ನಿಮಿಷಗಳ ಪ್ರಯಾಣ ಇದಾಗಿತ್ತು ಎಂದು ತಿಳಿದು ಬಂದಿದೆ.
ತುರ್ತು ಪರಿಸ್ಥಿತಿಗೆ ನಿಖರ ಕಾರಣವೇನು, ವಿಮಾನದಲ್ಲಿ ಎಷ್ಟು ಪ್ರಯಾಣಿಕರು ಮತ್ತು ಸಿಬ್ಬಂದಿ ಇದ್ದರು ಹಾಗೂ ವಿಮಾನದ ಬಳಿಕದ ಪ್ರಯಾಣದ ಕುರಿತು ಹೆಚ್ಚಿನ ವಿವರಗಳು ತಕ್ಷಣಕ್ಕೆ ಲಭ್ಯವಾಗಿಲ್ಲ.