Photo Credit : x 

ನಾಂಟಕೆಟ್ (ಅಮೆರಿಕ): ರೋಗಿಯೊಬ್ಬರನ್ನು ಬರ್ಮುಡಾದಿಂದ ಅಮೆರಿಕಕ್ಕೆ ಕರೆತರುತ್ತಿದ್ದ ವೈದ್ಯಕೀಯ ಜೆಟ್‌ ಸಮುದ್ರದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಆರು ಮಂದಿಯೂ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ. ಸುಮಾರು 66 ಗಂಟೆಗಳ ಕಾಲ ವಿಮಾನ ಮತ್ತು ಹಡಗುಗಳ ಮೂಲಕ ವ್ಯಾಪಕ ಶೋಧ ನಡೆಸಿದ ಬಳಿಕ ಅಮೆರಿಕದ ಕೋಸ್ಟ್‌ಗಾರ್ಡ್ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಿದೆ ಎಂದು Aljazeera ವರದಿ ಮಾಡಿದೆ.

ಮ್ಯಾಸಚೂಸೆಟ್ಸ್‌ ನ ನಾಂಟಕೆಟ್ ದ್ವೀಪದ ಕರಾವಳಿಯಲ್ಲಿ ಪತ್ತೆಯಾದ ಅವಶೇಷಗಳು ಪತನಗೊಂಡ ವೈದ್ಯಕೀಯ ವಿಮಾನದ್ದೇ ಎಂಬುದು ಖಚಿತವಾದ ಬಳಿಕ ಶೋಧವನ್ನು ಸ್ಥಗಿತಗೊಳಿಸಲಾಗಿದೆ. ಕೋಸ್ಟ್‌ಗಾರ್ಡ್ ತಂಡಗಳು ಆಗಸ ಮತ್ತು ಸಮುದ್ರದ ಮೂಲಕ ಸುಮಾರು 4,445 ಮೈಲು (7,150 ಕಿ.ಮೀ.) ವ್ಯಾಪ್ತಿಯಲ್ಲಿ ಶೋಧ ನಡೆಸಿದ್ದವು.

‘ಶೋಧ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಸುಲಭದ ನಿರ್ಧಾರವಲ್ಲ’ ಎಂದು ಕೋಸ್ಟ್‌ಗಾರ್ಡ್‌ ನ ಈಶಾನ್ಯ ಜಿಲ್ಲೆಯ ಕಮಾಂಡರ್ ರಿಯರ್ ಅಡ್ಮಿರಲ್ ಮ್ಯಾಥ್ಯೂ ಲೇಕ್ ರವಿವಾರ ತಿಳಿಸಿದ್ದಾರೆ.

ಕೆನಡಾ ಮೂಲದ ‘ಲ್ಯಾಟಿಟ್ಯೂಡ್ ಏರ್ ಆಂಬ್ಯುಲೆನ್ಸ್’ ಸಂಸ್ಥೆಗೆ ಸೇರಿದ ‘ಗಲ್ಫ್‌ಸ್ಟ್ರೀಮ್ G100’ ವಿಮಾನದಲ್ಲಿ ಇಬ್ಬರು ಪೈಲಟ್‌ ಗಳು, ಇಬ್ಬರು ವೈದ್ಯಕೀಯ ಸಿಬ್ಬಂದಿ, ಒಬ್ಬ ರೋಗಿ ಮತ್ತು ರೋಗಿಯ ಕುಟುಂಬದ ಒಬ್ಬ ಸದಸ್ಯ ಇದ್ದರು.

ನಾಲ್ವರು ಸಿಬ್ಬಂದಿ ಕೆನಡಾದವರು ಹಾಗೂ ಇಬ್ಬರು ಪ್ರಯಾಣಿಕರು ಬರ್ಮುಡಾದವರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಹಾರ್ಟ್‌ಬೀಟ್ 104’ ಎಂಬ ವಿಮಾನದಲ್ಲಿದ್ದ ತನ್ನ ನಾಲ್ವರು ಸಿಬ್ಬಂದಿ, ರೋಗಿ ಮತ್ತು ರೋಗಿಯೊಂದಿಗೆ ತೆರಳುತ್ತಿದ್ದ ಕುಟುಂಬದ ಸದಸ್ಯರು ಮೃತಪಟ್ಟಿದ್ದಾರೆ ಎಂದು ಭಾವಿಸಲಾಗಿದೆ ಎಂದು ‘ಲ್ಯಾಟಿಟ್ಯೂಡ್ ಏರ್ ಆಂಬ್ಯುಲೆನ್ಸ್’ ತಿಳಿಸಿದೆ.

ರೋಗಿಯನ್ನು ಕರೆತರಲು ವಿಮಾನವು ಬರ್ಮುಡಾಗೆ ತೆರಳಿತ್ತು. ಅಲ್ಲಿಂದ ರೋಗಿ ಹಾಗೂ ಅವರ ಕುಟುಂಬದ ಸದಸ್ಯರನ್ನು ಕರೆದುಕೊಂಡು ಬೋಸ್ಟನ್‌ ನ ಲೋಗನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿದೆ.

ವಿಮಾನದೊಂದಿಗೆ ಸಂಪರ್ಕ ಕಡಿತಗೊಂಡ ಬಳಿಕ ಶನಿವಾರ ಬೆಳಿಗ್ಗೆ ಸುಮಾರು 2 ಗಂಟೆಗೆ (06:00 GMT) ಅಮೆರಿಕದ ಫೆಡರಲ್ ಏವಿಯೇಷನ್ ಅಡ್ಮಿನಿಸ್ಟ್ರೇಷನ್ (FAA) ಕೋಸ್ಟ್‌ಗಾರ್ಡ್‌ ಗೆ ಮಾಹಿತಿ ನೀಡಿತ್ತು.

ವಿಮಾನ ಪತನಕ್ಕೂ ಮುನ್ನ ಅದು ತೀವ್ರವಾಗಿ ಕೆಳಮುಖವಾಗಿ ಚಲಿಸಿತ್ತು ಎಂದು ವಿಮಾನದ ಚಲನವಲನ ಪತ್ತೆಹಚ್ಚುವ ದತ್ತಾಂಶ ತೋರಿಸಿದೆ. ಈ ವೇಳೆ ವಾಯು ಸಂಚಾರ ನಿಯಂತ್ರಕರು ವಿಮಾನದೊಂದಿಗೆ ಸಂಪರ್ಕ ಮರುಸ್ಥಾಪಿಸಲು ಪ್ರಯತ್ನಿಸಿದ್ದರು.

ವಿಮಾನವು ಪತನಗೊಳ್ಳಲು ಕಾರಣವೇನು ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ತನಿಖೆ ಮುಂದುವರಿದಿದೆ.

27 ಮೀಟರ್ ಆಳದಲ್ಲಿ ಅವಶೇಷ

ವಿಮಾನದ ಅವಶೇಷಗಳು ಪತ್ತೆಯಾದ ಸಮುದ್ರ ಪ್ರದೇಶದಲ್ಲಿ ನೀರಿನ ಆಳ ಸುಮಾರು 80ರಿಂದ 90 ಅಡಿ (24ರಿಂದ 27 ಮೀಟರ್) ಇದೆ ಎಂದು ಲೇಕ್ ತಿಳಿಸಿದ್ದಾರೆ.

ವಿಮಾನದಲ್ಲಿದ್ದವರ ಕುಟುಂಬಗಳಿಗೆ ಸಂತಾಪ ಸೂಚಿಸಿದ ಲೇಕ್, ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಎಲ್ಲ ಸಂಸ್ಥೆಗಳಿಗೆ ಧನ್ಯವಾದ ಸಲ್ಲಿಸಿದ್ದಾರೆ.

‘ಲ್ಯಾಟಿಟ್ಯೂಡ್ ಏರ್ ಆಂಬ್ಯುಲೆನ್ಸ್’ ವೈದ್ಯಕೀಯ ಸ್ಥಳಾಂತರ ಸೇವೆಯಲ್ಲಿ ಪರಿಣತಿ ಹೊಂದಿದೆ. ಇತರ ದೇಶಗಳಿಂದ ರೋಗಿಗಳನ್ನು ಅವರ ತಾಯ್ನಾಡಿಗೆ ಕರೆತರುವ ವಿಮಾನ ಸೇವೆಯನ್ನೂ ಸಂಸ್ಥೆ ಒದಗಿಸುತ್ತದೆ. ಸಾಮಾನ್ಯವಾಗಿ ಸಂಸ್ಥೆಯ ವೈದ್ಯಕೀಯ ವಿಮಾನಗಳಲ್ಲಿ ಇಬ್ಬರು ಪೈಲಟ್‌ ಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ ಎಂದು ತಿಳಿದು ಬಂದಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor