ಅಮೆರಿಕ | ಟ್ರಂಪ್ ಪ್ರಯಾಣಿಸುತ್ತಿದ್ದ 'ಏರ್ ಫೋರ್ಸ್ ಒನ್' ನಲ್ಲಿ ತಾಂತ್ರಿಕ ಸಮಸ್ಯೆ; ವಾಷಿಂಗ್ಟನ್ ಗೆ ಮರಳಿದ ವಿಮಾನ
ಸಾಂದರ್ಭಿಕ ಚಿತ್ರ (credit: af.mil)
ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪ್ರಯಾಣಿಸುತ್ತಿದ್ದ ಏರ್ ಫೋರ್ಸ್ ಒನ್ ವಿಮಾನವು ಮಂಗಳವಾರ ಸ್ವಿಟ್ಜರ್ಲೆಂಡ್‌ಗೆ ತೆರಳಿದ ಸುಮಾರು ಒಂದು ಗಂಟೆಯ ಬಳಿಕ ವಾಷಿಂಗ್ಟನ್ ನ ಜಂಟಿ ನೆಲೆ ಆಂಡ್ರ್ಯೂಸ್‌ಗೆ ಮರಳಿದೆ.
ವಿಮಾನದಲ್ಲಿದ್ದ ಸಿಬ್ಬಂದಿ ಸಣ್ಣ ವಿದ್ಯುತ್ ಸಮಸ್ಯೆಯನ್ನು ಗುರುತಿಸಿದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ವಿಮಾನವನ್ನು ಹಿಂತಿರುಗಿಸಲಾಗಿದೆ ಎಂದು ಶ್ವೇತಭವನದ ಪತ್ರಿಕಾ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ತಿಳಿಸಿದ್ದಾರೆ.
ವಿಮಾನದಲ್ಲಿದ್ದ ವರದಿಗಾರರ ಪ್ರಕಾರ, ಟೇಕ್‌ಆಫ್ ಆದ ಕೆಲಕಾಲದ ಬಳಿಕ ಪ್ರೆಸ್ ಕ್ಯಾಬಿನ್ ನ ದೀಪಗಳು ಆರಿಹೋಗಿದ್ದವು. ಬಳಿಕ ಸುಮಾರು ಅರ್ಧ ಗಂಟೆಯ ಹಾರಾಟದ ನಂತರ ವಿಮಾನವು ವಾಷಿಂಗ್ಟನ್ ಗೆ ಮರಳಲಿದೆ ಎಂಬ ಮಾಹಿತಿ ನೀಡಲಾಯಿತು.
ಘಟನೆಯ ಸಮಯದಲ್ಲಿ ವಿಮಾನದಲ್ಲಿದ್ದ ಟ್ರಂಪ್, ಮತ್ತೊಂದು ವಿಮಾನದ ಮೂಲಕ ವಿಶ್ವ ಆರ್ಥಿಕ ವೇದಿಕೆ ಸಭೆಗೆ ದಾವೋಸ್ ಗೆ ತೆರಳುವುದಾಗಿ ತಿಳಿಸಿದ್ದಾರೆ.
ಏರ್ ಫೋರ್ಸ್ ಒನ್ ಆಗಿ ಬಳಸಲಾಗುತ್ತಿರುವ ವಿಮಾನಗಳು ಸುಮಾರು ಎರಡು ದಶಕಗಳಿಂದ ಸೇವೆಯಲ್ಲಿವೆ. ಬದಲಿ ವಿಮಾನಗಳ ನಿರ್ಮಾಣ ಕಾರ್ಯವನ್ನು ಬೋಯಿಂಗ್ ಕೈಗೊಂಡಿದ್ದರೂ, ಯೋಜನೆ ಹಲವು ಬಾರಿ ವಿಳಂಬವನ್ನು ಎದುರಿಸಿದೆ.
ಅಮೆರಿಕ ಅಧ್ಯಕ್ಷರ ಭದ್ರತೆಗೆ ಸಂಬಂಧಿಸಿದಂತೆ ವಿಕಿರಣ ರಕ್ಷಾಕವಚ, ಕ್ಷಿಪಣಿ ವಿರೋಧಿ ತಂತ್ರಜ್ಞಾನ ಸೇರಿದಂತೆ ವಿವಿಧ ತುರ್ತು ವ್ಯವಸ್ಥೆಗಳನ್ನು ಏರ್ ಫೋರ್ಸ್ ಒನ್ ವಿಮಾನಗಳಲ್ಲಿ ಅಳವಡಿಸಲಾಗಿದೆ. ಸೇನೆಯೊಂದಿಗೆ ನಿರಂತರ ಸಂಪರ್ಕ ಸಾಧಿಸಲು ಅಗತ್ಯವಿರುವ ಸಂವಹನ ವ್ಯವಸ್ಥೆಗಳೂ ವಿಮಾನದಲ್ಲಿವೆ.
ಕಳೆದ ವರ್ಷ ಖತರ್ ನ ರಾಜ ಕುಟುಂಬ ನೀಡಿದ ಬೋಯಿಂಗ್ 747–8 ಜೆಟ್ ಅನ್ನು ಏರ್ ಫೋರ್ಸ್ ಒನ್ ಫ್ಲೀಟ್‌ಗೆ ಸೇರಿಸುವ ಕುರಿತು ನಿರ್ಧಾರ ಪರಿಶೀಲನೆಗೆ ಒಳಪಟ್ಟಿದ್ದು, ಭದ್ರತಾ ಮಾನದಂಡಗಳಿಗೆ ಅನುಗುಣವಾಗಿ ಆ ವಿಮಾನವನ್ನು ಪ್ರಸ್ತುತ ಮರುರೂಪಿಸಲಾಗುತ್ತಿದೆ.