ಸ್ಪೇನ್‌ನಲ್ಲಿ ರೈಲುಗಳು ಢಿಕ್ಕಿ; ಮೃತರ ಸಂಖ್ಯೆ 39ಕ್ಕೆ ಏರಿಕೆ
PC: x.com/Independent/CNNnews18
ಮ್ಯಾಡ್ರಿಡ್, ಜ. 19: ದಕ್ಷಿಣ ಸ್ಪೇನ್‌ನಲ್ಲಿ ರವಿವಾರ ಸಂಜೆ ಎರಡು ಅಧಿಕ ವೇಗದ ರೈಲುಗಳು ಢಿಕ್ಕಿಯಾಗಿ 39 ಮಂದಿ ಮೃತಪಟ್ಟಿದ್ದಾರೆ ಹಾಗೂ 120ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ. ಇದು ಒಂದು ದಶಕಕ್ಕೂ ಹೆಚ್ಚಿನ ಅವಧಿಯಲ್ಲಿ ದೇಶದಲ್ಲಿ ನಡೆದಿರುವ ಅತ್ಯಂತ ಭೀಕರ ರೈಲು ಅಪಘಾತ ಇದಾಗಿದೆ.
ಇದು 2013ರ ಬಳಿಕ ಸ್ಪೇನ್‌ನಲ್ಲಿ ನಡೆದ ಅತ್ಯಂತ ಭೀಕರ ರೈಲು ಅಪಘಾತವಾಗಿದೆ. 2013ರಲ್ಲಿ ಸಾಂಟಿಯಾಗೊ ಡಿ ಕೊಂಪೆಸ್ಟೆಲ ಎಂಬ ನಗರದಲ್ಲಿ ನಡೆದ ಅಪಘಾತದಲ್ಲಿ, ರೈಲೊಂದು ತಿರುವಿನಲ್ಲಿ ಹಳಿ ತಪ್ಪಿ 80 ಮಂದಿ ಮೃತಪಟ್ಟಿದ್ದರು.
ರವಿವಾರ ಸಂಜೆ, ಇರ್ಯೊ ರೈಲು ಕಂಪೆನಿಗೆ ಸೇರಿದ ರೈಲು ಮಲಗದಿಂದ ಮ್ಯಾಡ್ರಿಡ್ಗೆಡ್‌ಗೆ ಹೋಗುತ್ತಿದ್ದಾಗ ಆ್ಯಡಮಝ್ ಎಂಬಲ್ಲಿ ಹಳಿ ತಪ್ಪಿತು. ಬಳಿಕ ಅದು ಇನ್ನೊಂದು ಹಳಿಯನ್ನು ಪ್ರವೇಶಿಸಿ ಎದುರಿನಿಂದ ಬರುತ್ತಿದ್ದ ರೈಲೊಂದಕ್ಕೆ ಢಿಕ್ಕಿ ಹೊಡೆಯಿತು. ಢಿಕ್ಕಿಯ ರಭಸಕ್ಕೆ ಆ ರೈಲು ಕೂಡ ಹಳಿ ತಪ್ಪಿತು.
ಈ ಅಪಘಾತದಲ್ಲಿ ಕನಿಷ್ಠ 39 ಮಂದಿ ಮೃತಪಟ್ಟಿದ್ದಾರೆ ಹಾಗೂ 123 ಮಂದಿ ಗಾಯಗೊಂಡಿದ್ದಾರೆ ಎಂದು ಸ್ಪೇನ್‌ನ ಆಂತರಿಕ ಸಚಿವಾಲಯ ತಿಳಿಸಿದೆ.