"ಡೆನ್ಮಾರ್ಕ್, ಗ್ರೀನ್‌ಲ್ಯಾಂಡ್ ಜನತೆಯೊಂದಿಗೆ ದೃಢವಾಗಿ ನಿಲ್ಲುತ್ತೇವೆ’ : ಟ್ರಂಪ್ ಸುಂಕ ಬೆದರಿಕೆಗೆ ಬಗ್ಗದ ಐರೋಪ್ಯ ನಾಯಕರು
ಡೊನಾಲ್ಡ್ ಟ್ರಂಪ್ | Photo Credit : PTI \ AP
ಬ್ರಸೆಲ್ಸ್: ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ತನ್ನ ಯೋಜನೆಯನ್ನು ವಿರೋಧಿಸುವ ದೇಶಗಳ ಮೇಲೆ ಹೆಚ್ಚುವರಿ ಸುಂಕಗಳನ್ನು ವಿಧಿಸುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬೆದರಿಕೆಯನ್ನು ಯುರೋಪಿಯನ್ ದೇಶಗಳ ನಾಯಕರು ಖಂಡಿಸಿದ್ದಾರೆ. ಅಮೆರಿಕ ಅಧ್ಯಕ್ಷರ ಈ ಕ್ರಮವು ಅಟ್ಲಾಂಟಿಕ್ ಸಾಗರದ ಆಚೆಗಿನ ದೇಶಗಳ ನಡುವಿನ ಸಂಬಂಧವನ್ನು ಅಪಾಯಕಾರಿ ಕೆಳಮಟ್ಟಕ್ಕೆ ಒಯ್ಯುವ ಅಪಾಯವನ್ನು ಒಡ್ಡಿದೆ ಎಂಬುದಾಗಿ ಎಚ್ಚರಿಸಿದ್ದಾರೆ.
ಟ್ರಂಪ್ ಅವರ ಸುಂಕ ಬೆದರಿಕೆಯನ್ನು ಎದುರಿಸುತ್ತಿರುವ ಎಂಟು ಯುರೋಪಿಯನ್ ದೇಶಗಳು ರವಿವಾರ ಜಂಟಿ ಹೇಳಿಕೆಯೊಂದನ್ನು ನೀಡಿ, ತಾವು ಡೆನ್ಮಾರ್ಕ್ ಮತ್ತು ಡೆನ್ಮಾರ್ಕ್ ಅರೆ-ಸ್ವಾಯತ್ತ ಭೂಭಾಗ ಗ್ರೀನ್‌ಲ್ಯಾಂಡ್‌ನ ಜನತೆಯೊಂದಿಗೆ ದೃಢವಾಗಿ ನಿಲ್ಲುವುದಾಗಿ ಘೋಷಿಸಿವೆ.
‘‘ಕಳೆದ ವಾರ ಆರಂಭಗೊಂಡಿರುವ ಮಾತುಕತೆ ಪ್ರಕ್ರಿಯೆಯನ್ನು ಮುಂದಕ್ಕೆ ಒಯ್ಯಲು ನಾವು ನಿರ್ಧರಿಸಿದ್ದೇವೆ. ಸಾರ್ವಭೌಮತೆ ಮತ್ತು ಪ್ರಾದೇಶಿಕ ಸಮಗ್ರತೆಯ ತತ್ವಗಳ ಆಧಾರದಲ್ಲಿ ಮಾತುಕತೆಯಲ್ಲಿ ತೊಡಗಲು ನಾವು ಸಿದ್ಧರಿದ್ದೇವೆ’’ ಎಂದು ಡೆನ್ಮಾರ್ಕ್, ಫಿನ್ಲ್ಯಾಂಡ್, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್, ನಾರ್ವೆ, ಸ್ವೀಡನ್ ಮತ್ತು ಬ್ರಿಟನ್ ಹೇಳಿಕೆಯಲ್ಲಿ ತಿಳಿಸಿವೆ.
‘‘ಹೆಚ್ಚುವರಿ ಸುಂಕದ ಬೆದರಿಕೆಗಳು ಅಟ್ಲಾಂಟಿಕ್ ದೇಶಗಳ ನಡುವಿನ ಸಂಬಂಧವನ್ನು ದುರ್ಬಲಗೊಳಿಸುತ್ತವೆ ಹಾಗೂ ಅಪಾಯಕಾರಿ ಎನಿಸುವಷ್ಟು ಕೆಳಮಟ್ಟಕ್ಕೆ ತಳ್ಳುವ ಅಪಾಯವನ್ನು ಒಡ್ಡಿವೆ. ಒಗ್ಟಟ್ಟಿನ ಮತ್ತು ಸಮನ್ವಯದ ಪ್ರತಿಕ್ರಿಯೆ ನೀಡುವುದನ್ನು ನಾವು ಮುಂದುವರಿಸುತ್ತೇವೆ. ನಮ್ಮ ಸಾರ್ವಭೌಮತೆಯನ್ನು ಎತ್ತಿಹಿಡಿಯುವುದಕ್ಕೆ ನಾವು ಬದ್ಧರಾಗಿದ್ದೇವೆ’’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಗ್ರೀನ್‌ಲ್ಯಾಂಡ್‌ನ ಭವಿಷ್ಯಕ್ಕೆ ಸಂಬಂಧಿಸಿ ಟ್ರಂಪ್ ಹೆಚ್ಚುತ್ತಿರುವ ಒತ್ತಡಕ್ಕೆ ಸರ್ವಾನುಮತದ ಪ್ರತಿಕ್ರಿಯೆಯೊಂದನ್ನು ರೂಪಿಸಲು ಯುರೋಪಿಯನ್ ದೇಶಗಳು ತುರ್ತು ಮಾತುಕತೆಗೆ ಸಿದ್ಧತೆ ನಡೆಸುತ್ತಿರುವಂತೆಯೇ ಆ ದೇಶಗಳು ಈ ಕಠಿಣ ಎಚ್ಚರಿಕೆಯನ್ನು ನೀಡಿವೆ.
ರಾಷ್ಟ್ರೀಯ ಸಾರ್ವಭೌಮತೆಯನ್ನು ಎತ್ತಿಹಿಡಿಯಲು ಮತ್ತು ಯಾವುದೇ ರೀತಿಯ ಬಲವಂತದ ವಿರುದ್ಧ ನಮ್ಮನ್ನು ರಕ್ಷಿಸಿಕೊಳ್ಳಲು ಐರೋಪ್ಯ ಒಕ್ಕೂಟವು ಒಗ್ಗಟ್ಟಿನಿಂದಿದೆ ಎಂದು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೊ ಕೋಸ್ಟ ರವಿವಾರ ಹೇಳಿದರು.
ಟ್ರಂಪ್ ಆರ್ಥಿಕ ಬೆದರಿಕೆಗಳಿಗೆ ಪ್ರತಿಕ್ರಿಯೆಯಾಗಿ ಹಲವು ಆಯ್ಕೆಗಳ ಬಗ್ಗೆ ಚರ್ಚಿಸಲು ಐರೋಪ್ಯ ಒಕ್ಕೂಟದ ದೇಶಗಳು ಸಭೆ ನಡೆಸಲಿವೆ ಎಂಬುದಾಗಿ ನಿರೀಕ್ಷಿಸಲಾಗಿದೆ. ಪ್ರತೀಕಾರದ ಸುಂಕಗಳು ಮತ್ತು ಅಮೆರಿಕದ ಕಂಪೆನಿಗಳಿಗೆ ಮಾರುಕಟ್ಟೆ ನಿರ್ಬಂಧಿಸುವುದು ಈ ಆಯ್ಕೆಗಳಲ್ಲಿ ಸೇರಿವೆ.
ಈ ಎಂಟು ದೇಶಗಳಿಗೆ ಫೆಬ್ರವರಿ ಒಂದರಿಂದ 10 ಶೇಕಡ ಸುಂಕ ವಿಧಿಸಲಾಗುವುದು ಎಂಬುದಾಗಿ ಟ್ರಂಪ್ ಶನಿವಾರ ಘೋಷಿಸಿದ್ದಾರೆ. ಬಳಿಕ, ಜೂನ್ ಒಂದರಿಂದ ಅದನ್ನು 25 ಶೇಕಡಕ್ಕೆ ಹೆಚ್ಚಿಸಲಾಗುವುದು. ಅಮೆರಿಕಕ್ಕೆ ಗ್ರೀನ್‌ಲ್ಯಾಂಡ್ ಖರೀದಿಸಲು ಅವಕಾಶ ನೀಡುವ ಒಪ್ಪಂದವೊಂದು ಸಿದ್ಧಗೊಳ್ಳುವವರೆಗೆ ಈ ಸುಂಕ ಮುಂದುವರಿಯುವುದು ಎಂದು ಟ್ರಂಪ್ ಹೇಳಿದ್ದಾರೆ.