ನೊಬೆಲ್ ಶಾಂತಿ ಪ್ರಶಸ್ತಿ ಸಿಗದಿರುವುದಕ್ಕೆ ಪ್ರತೀಕಾರವಾಗಿ ಗ್ರೀನ್‌ಲ್ಯಾಂಡ್ ವಶಕ್ಕೆ ಮುಂದಾದ ಟ್ರಂಪ್!
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Photo: PTI)
ವಾಶಿಂಗ್ಟನ್: ನನಗೆ ನೊಬೆಲ್ ಶಾಂತಿ ಪ್ರಶಸ್ತಿ ಸಿಗದಿರುವುದಕ್ಕೆ ಪ್ರತೀಕಾರವಾಗಿ ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳಲು ಮುಂದಾಗಿದ್ದೇನೆ ಎಂದು ನಾರ್ವೆ ಪ್ರಧಾನಿ ಜೊನಾಸ್ ಗಹರ್ ಸ್ಟೋರ್ ಅವರಿಗೆ ಬರೆದ ಪತ್ರದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.
‘‘ಎಂಟಕ್ಕಿಂತಲೂ ಹೆಚ್ಚಿನ ಯುದ್ಧಗಳನ್ನು ನಾನು ನಿಲ್ಲಿಸಿದ್ದೇನೆ. ಆದರೂ ನಿಮ್ಮ ದೇಶ ನನಗೆ ನೊಬೆಲ್ ಶಾಂತಿ ಪ್ರಶಸ್ತಿ ನೀಡಲು ನಿರಾಕರಿಸಿದೆ. ಹಾಗಾಗಿ, ಸಂಪೂರ್ಣವಾಗಿ ಶಾಂತಿಯ ಬಗ್ಗೆ ಯೋಚಿಸಬೇಕಾದ ಯಾವ ಬದ್ಧತೆಯೂ ಈಗ ನನಗಿಲ್ಲ’’ ಎಂಬುದಾಗಿ ಟ್ರಂಪ್ ತನ್ನ ಪತ್ರದಲ್ಲಿ ಬರೆದಿದ್ದಾರೆ ಎಂದು ‘ಬ್ಲೂಮ್‌ಬರ್ಗ್’ ವರದಿ ಮಾಡಿದೆ. ‘‘ಅಮೆರಿಕಕ್ಕೆ ಯಾವುದು ಉತ್ತಮ ಮತ್ತು ಸರಿ ಎನ್ನುವುದನ್ನು ಯೋಚಿಸುವುದು ಯಾವತ್ತೂ ನಮ್ಮ ಆದ್ಯತೆಯಾಗಿದೆಯಾದರೂ, ಈಗ ನಾನು ಅದರ ಬಗ್ಗೆ ಯೋಚಿಸಬಹುದಾಗಿದೆ’’ ಎಂದು ಟ್ರಂಪ್ ತನ್ನ ಪತ್ರದಲ್ಲಿ ಹೇಳಿದ್ದಾರೆ.
‘‘ಗ್ರೀನ್‌ಲ್ಯಾಂಡ್ ಮೇಲೆ ಸಂಪೂರ್ಣ ನಿಯಂತ್ರಣವನ್ನು ನಾವು ಹೊಂದದ ಹೊರತು ಜಗತ್ತು ಸುರಕ್ಷಿತವಲ್ಲ’’ ಎಂದು ಅಮೆರಿಕ ಅಧ್ಯಕ್ಷರು ಹೇಳಿದ್ದಾರೆ.
ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವುದು ನಾರ್ವೆ ಸರಕಾರವಲ್ಲ. ಸ್ವತಂತ್ರ ಸಮಿತಿಯೊಂದು ಅದನ್ನು ನೀಡುತ್ತಿದೆ.
‘‘ನೊಬೆಲ್ ಶಾಂತಿ ಪ್ರಶಸ್ತಿಯ ವಿಷಯದಲ್ಲಿ, ಎಲ್ಲರಿಗೂ ಗೊತ್ತಿರುವ ಸಂಗತಿಯನ್ನು ನಾನು ಟ್ರಂಪ್‌ಗೆ ಹಲವು ಬಾರಿ ಸ್ಪಷ್ಟವಾಗಿ ವಿವರಿಸಿದ್ದೇನೆ. ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡುವುದು ಒಂದು ಸ್ವತಂತ್ರ ಸಮಿತಿಯೇ ಹೊರತು ನಾರ್ವೆ ಸರಕಾರವಲ್ಲ’’ ಎಂದು ಬ್ಲೂಮ್‌ಬರ್ಗ್‌ಗೆ ನೀಡಿರುವ ಹೇಳಿಕೆಯೊಂದರಲ್ಲಿ ನಾರ್ವೆ ಅಧ್ಯಕ್ಷ ಸ್ಟೋರ್ ಹೇಳಿದ್ದಾರೆ.