ಫೆಲೆಸ್ತೀನ್| ಹೆಬ್ರಾನ್‌ನಲ್ಲಿ ಬೃಹತ್ ಸೇನಾ ಕಾರ್ಯಾಚರಣೆ ಆರಂಭಿಸಿದ ಇಸ್ರೇಲ್ ಸೇನೆ
ಸಾಂದರ್ಭಿಕ ಚಿತ್ರ | Photo Credit ; PTI
ಹೆಬ್ರಾನ್ (ಫೆಲೆಸ್ತೀನ್), ಜ. 19: ಫೆಲೆಸ್ತೀನ್‌ನ ಆಕ್ರಮಿತ ಪಶ್ಚಿಮ ದಂಡೆಯಲ್ಲಿರುವ ಹೆಬ್ರಾನ್ ನಗರದ ಮೇಲೆ ಇಸ್ರೇಲ್ ಸೇನೆ ಭಾರೀ ಪ್ರಮಾಣದಲ್ಲಿ ಸೇನಾ ಕಾರ್ಯಾಚರಣೆ ಆರಂಭಿಸಿದೆ. ಅದು ನೂರಾರು ಸೈನಿಕರು ಮತ್ತು ಬೃಹತ್ ಯಂತ್ರಗಳನ್ನು ನಿಯೋಜಿಸಿದ್ದು, ನಗರದ ದಕ್ಷಿಣದ ಜಿಲ್ಲೆಗಳಲ್ಲಿ ಜನಜೀವನ ಸ್ಥಗಿತಗೊಂಡಿದೆ.
ಇಸ್ರೇಲ್ ಸೇನೆ ಮತ್ತು ಆಂತರಿಕ ಭದ್ರತಾ ಸೇವೆ ‘ಶಿನ್ ಬೆಟ್’ ಸೋಮವಾರ ಜಂಟಿ ಹೇಳಿಕೆಯೊಂದನ್ನು ನೀಡಿದ್ದು, ಸೇನಾ ಕಾರ್ಯಾಚರಣೆಯನ್ನು ಖಚಿತಪಡಿಸಿದೆ. ಸೇನಾ ಕಾರ್ಯಾಚರಣೆಯು ಹಲವು ದಿನಗಳ ಕಾಲ ನಡೆಯಲಿದೆ ಎಂಬ ಎಚ್ಚರಿಕೆಯನ್ನು ಸೇನೆ ನೀಡಿದೆ.
ಹೆಬ್ರಾನ್ ನಗರದಲ್ಲಿ ಸಂಪೂರ್ಣ ಲಾಕ್‌ಡೌನ್ ಪರಿಸ್ಥಿತಿ ಇದೆ ಎಂದು ‘aljazeera’ ವರದಿ ಮಾಡಿದೆ. ‘‘ನಾವೀಗ ದಕ್ಷಿಣದ ಹೆಬ್ರಾನ್ ನಗರದಲ್ಲಿದ್ದೇವೆ. ನಗರದಲ್ಲಿ ಬೆಳಗ್ಗಿನಿಂದ ಕರ್ಫ್ಯೂ ವಿಧಿಸಲಾಗಿದೆ. ಭಾರೀ ಪ್ರಮಾಣದಲ್ಲಿ ಆಕ್ರಮಣಕಾರಿ ಪಡೆಗಳನ್ನು ನಿಯೋಜಿಸಲಾಗಿದೆ. ಬುಲ್ಡೋಝರ್‌ಗಳ ಮತ್ತು ಶಸ್ತ್ರಸಜ್ಜಿತ ವಾಹನಗಳು ಓಡಾಡುತ್ತಿವೆ’’ ಎಂದು ಅದರ ವರದಿಗಾರರು ಹೇಳಿದ್ದಾರೆ.
‘‘ಅವರು ಕಬ್ಬಿಣದ ದ್ವಾರಗಳನ್ನು ತಂದಿದ್ದಾರೆ. ಇದು ಅಪಾಯಕಾರಿ. ಅವರು ಈಗಾಗಲೇ ವಿಭಜನೆಗೊಂಡಿರುವ ನಗರವನ್ನು ಮತ್ತಷ್ಟು ವಿಭಜಿಸುವುದಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ ಅನಿಸುತ್ತದೆ’’ ಎಂದು aljazeera ಹೇಳಿದೆ.
ಕನಿಷ್ಠ ಏಳು ಮಂದಿಯನ್ನು ಇಸ್ರೇಲ್ ಸೇನೆ ಬಂಧಿಸಿದೆ ಎಂದು ಫೆಲೆಸ್ತೀನ್‌ನ ಸುದ್ದಿ ಸಂಸ್ಥೆ ವಫಾ ಹೇಳಿದೆ.