ಇನ್ನೊಂದು ತೈಲ ಟ್ಯಾಂಕರನ್ನು ವಶಪಡಿಸಿಕೊಂಡ ಅಮೆರಿಕ
Screengrab: X
ವಾಶಿಂಗ್ಟನ್, ಜ. 9: ವೆನೆಝುವೆಲಾ ವಿರುದ್ಧ ತನ್ನ ಒತ್ತಡ ಅಭಿಯಾನವನ್ನು ಅಮೆರಿಕ ಮುಂದುವರಿಸಿದ್ದು, ಕೆರಿಬಿಯನ್ ನಲ್ಲಿ ಇನ್ನೊಂದು ತೈಲ ಟ್ಯಾಂಕರನ್ನು ವಶಪಡಿಸಿಕೊಂಡಿದೆ.
ತನ್ನ ಪಡೆಗಳು ಯಾವುದೇ ಪ್ರತಿರೋಧವಿಲ್ಲದೆ ‘ಒಲೀನಾ’ ಟ್ಯಾಂಕರನ್ನು ವಶಪಡಿಸಿಕೊಂಡಿವೆ ಎಂದು ಶುಕ್ರವಾರ ನೀಡಿದ ಹೇಳಿಕೆಯಲ್ಲಿ ಅಮೆರಿಕ ಸೇನೆಯ ದಕ್ಷಿಣ ಕಮಾಂಡ್ ತಿಳಿಸಿದೆ.
ಆದರೆ, ತೈಲ ಟ್ಯಾಂಕರನ್ನು ಯಾಕೆ ವಶಪಡಿಸಿಕೊಳ್ಳಲಾಗಿದೆ ಎಂಬುದನ್ನು ಅದು ತಿಳಿಸಿಲ್ಲ. ಅಲ್ಲದೆ, ಟ್ಯಾಂಕರ್ ಎಸಗಿರುವ ಉಲ್ಲಂಘನೆಗಳ ವಿವರಗಳನ್ನೂ ನೀಡಿಲ್ಲ. ಹಿಂದೆ, ರಷ್ಯಾದ ತೈಲವನ್ನು ಸಾಗಿಸುತ್ತಿದ್ದ ಕಾರಣ ಈ ಟ್ಯಾಂಕರ್‌ಗೆ ಅಮೆರಿಕ ನಿಷೇಧ ವಿಧಿಸಿತ್ತು ಎಂದು ‘ವಾಲ್ ಸ್ಟ್ರೀಟ್ ಜರ್ನಲ್’ ವರದಿ ಮಾಡಿದೆ.
ರಷ್ಯಾ ಧ್ವಜ ಹೊಂದಿರುವ ‘ಮರಿನೇರ’ ತೈಲ ಟ್ಯಾಂಕರ್ ಸೇರಿದಂತೆ ಎರಡು ತೈಲ ಟ್ಯಾಂಕರ್‌ಗಳನ್ನು ಅಮೆರಿಕ ಪಡೆಗಳು ವಶಪಡಿಸಿಕೊಂಡ ಎರಡು ದಿನಗಳ ಬಳಿಕ ಈ ಕಾರ್ಯಾಚರಣೆ ನಡೆದಿದೆ.
ವೆನೆಝುವೆಲಾ ಅಧ್ಯಕ್ಷ ನಿಕೊಲಸ್ ಮಡುರೊ ಅವರ ಅಪಹರಣದ ಬಳಿಕ, ನಿಷೇಧಿತ ತೈಲ ಟ್ಯಾಂಕರ್‌ಗಳ ಮೇಲಿನ ನಿರ್ಬಂಧವನ್ನು ಜಾರಿಗೊಳಿಸಲು ಅಮೆರಿಕ ಪಣತೊಟ್ಟಿದೆ.