ಬಾಂಗ್ಲಾ ಕ್ರಿಕೆಟ್ ತಂಡದ ಮಾಜಿ ನಾಯಕ ತಮೀಮ್ ಇಕ್ಬಾಲ್ ಭಾರತದ ಏಜೆಂಟ್: ಬಿಸಿಬಿ ಆರೋಪ
PC: x.com/JARA_Memer
ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ)ಯ ಹಿರಿಯ ಅಧಿಕಾರಿಯೊಬ್ಬರು, ಮಾಜಿ ನಾಯಕ ತಮೀಮ್ ಇಕ್ಬಾಲ್ ಅವರನ್ನು “ಭಾರತೀಯ ಏಜೆಂಟ್” ಎಂದು ಕರೆದಿರುವ ಹೇಳಿಕೆ ದೇಶದ ಕ್ರಿಕೆಟ್ ವಲಯದಲ್ಲಿ ತೀವ್ರ ಟೀಕೆಗಳಿಗೆ ಕಾರಣವಾಗಿದೆ. ಬಾಂಗ್ಲಾದೇಶದ ಪ್ರಮುಖ ಆರಂಭಿಕ ಬ್ಯಾಟರ್‌ಗಳಲ್ಲಿ ಒಬ್ಬರಾಗಿರುವ ತಮೀಮ್ ಇಕ್ಬಾಲ್, ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ನಲ್ಲಿ ರಾಷ್ಟ್ರೀಯ ತಂಡದ ಭಾಗವಹಿಸುವಿಕೆ ಕುರಿತು ನಿರ್ಧಾರ ಕೈಗೊಳ್ಳುವಾಗ ಭಾವನಾತ್ಮಕತೆಗೆ ಒಳಗಾಗಬಾರದು ಎಂದು ಬಿಸಿಬಿಗೆ ಸಲಹೆ ನೀಡಿದ್ದರು.
ಬಿಸಿಬಿಯ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ಬಿಸಿಬಿಯ ಹಣಕಾಸು ಸಮಿತಿ ಅಧ್ಯಕ್ಷ ನಜ್ಮುಲ್ ಇಸ್ಲಾಂ ಅವರು ಫೇಸ್‌ಬುಕ್ ಪೋಸ್ಟ್‌ನಲ್ಲಿ, “ಈ ಬಾರಿ ಮತ್ತೊಬ್ಬ ಭಾರತೀಯ ಏಜೆಂಟ್ ರೂಪುಗೊಂಡಿರುವುದನ್ನು ಬಾಂಗ್ಲಾದೇಶದ ಜನತೆ ತಮ್ಮದೇ ಕಣ್ಣುಗಳಿಂದ ನೋಡಿದ್ದಾರೆ” ಎಂದು ಬರೆದಿದ್ದಾರೆ.
ಈ ಪೋಸ್ಟ್‌ಗೆ ಮಾಜಿ ಹಾಗೂ ಹಾಲಿ ಕ್ರಿಕೆಟಿಗರಿಂದ ತಕ್ಷಣವೇ ತೀವ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ತಸ್ಕಿನ್ ಅಹ್ಮದ್, ಮೊಮಿನುಲ್ ಹಕ್ ಮತ್ತು ತೈಜುಲ್ ಇಸ್ಲಾಂ ಸೇರಿದಂತೆ ಹಲವು ಕ್ರಿಕೆಟಿಗರು ಈ ಹೇಳಿಕೆಯನ್ನು ಖಂಡಿಸಿದ್ದಾರೆ. ಜೊತೆಗೆ ಬಾಂಗ್ಲಾದೇಶ ಕ್ರಿಕೆಟಿಗರ ಕಲ್ಯಾಣ ಸಂಘಟನೆ (ಕ್ರಿಕೆಟರ್ಸ್ ವೆಲ್ಫೇರ್ ಅಸೋಸಿಯೇಷನ್ ಆಫ್ ಬಾಂಗ್ಲಾದೇಶ – ಸಿಡಬ್ಲ್ಯುಎಬಿ) ಕೂಡ ಗಂಭೀರ ಆತಂಕ ವ್ಯಕ್ತಪಡಿಸಿದೆ.
ಸಿಡಬ್ಲ್ಯುಎಬಿ ಪ್ರಕಟಿಸಿರುವ ಹೇಳಿಕೆಯಲ್ಲಿ, “ಬಿಸಿಬಿ ನಿರ್ದೇಶಕ ಎಂ. ನಜ್ಮುಲ್ ಇಸ್ಲಾಂ ಅವರು ಮಾಜಿ ರಾಷ್ಟ್ರೀಯ ನಾಯಕ ತಮೀಮ್ ಇಕ್ಬಾಲ್ ಕುರಿತು ನೀಡಿರುವ ಹೇಳಿಕೆ ನಮ್ಮ ಗಮನಕ್ಕೆ ಬಂದಿದೆ. ಈ ಹೇಳಿಕೆ ನಮಗೆ ಆಘಾತಕಾರಿಯಾಗಿದೆ; ಅಚ್ಚರಿ ಮತ್ತು ಆಕ್ರೋಶ ಉಂಟುಮಾಡಿದೆ. 16 ವರ್ಷಗಳ ಕಾಲ ದೇಶವನ್ನು ಪ್ರತಿನಿಧಿಸಿ, ಬಾಂಗ್ಲಾದೇಶ ಕ್ರಿಕೆಟ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಆರಂಭಿಕ ಆಟಗಾರರಾಗಿರುವ ತಮೀಮ್ ಇಕ್ಬಾಲ್ ಕುರಿತು ಮಂಡಳಿ ಅಧಿಕಾರಿಯೊಬ್ಬರು ಇಂಥ ಹೇಳಿಕೆ ನೀಡಿರುವುದು ಸಂಪೂರ್ಣವಾಗಿ ಖಂಡನೀಯವಾಗಿದೆ,” ಎಂದು ತಿಳಿಸಿದೆ.
“ಇದು ತಮೀಮ್ ಇಕ್ಬಾಲ್ ಕುರಿತು ಮಾತ್ರವಲ್ಲ; ದೇಶದ ಯಾವುದೇ ಕ್ರಿಕೆಟಿಗರ ಬಗ್ಗೆ ಇಂಥ ಹೇಳಿಕೆಗಳು ಅಸಹ್ಯಕರವಾಗಿದ್ದು, ಸಂಪೂರ್ಣ ಕ್ರಿಕೆಟ್ ಸಮುದಾಯಕ್ಕೆ ಅವಮಾನಕರವಾಗಿವೆ,” ಎಂದು ಸಿಡಬ್ಲ್ಯುಎಬಿ ಸ್ಪಷ್ಟಪಡಿಸಿದೆ.