ಅಂತರ್‌ರಾಷ್ಟ್ರೀಯ ನಿಯಮಗಳು ನನಗೆ ಅನ್ವಯಿಸುವುದಿಲ್ಲ: ಟ್ರಂಪ್
photo:PTI
ವಾಶಿಂಗ್ಟನ್, ಜ. 9: ಅಂತರ್‌ರಾಷ್ಟ್ರೀಯ ನಿಯಮಗಳು ತನಗೆ ಅನ್ವಯವಾಗುವುದಿಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ವೆನೆಝುವೆಲದ ಅಧ್ಯಕ್ಷ ನಿಕೊಲಸ್ ಮಡುರೊ ಅವರನ್ನು ಅಪಹರಿಸಿದ ಬಳಿಕ, ಜಗತ್ತಿನಾದ್ಯಂತ ತಾನು ಅನುಸರಿಸುತ್ತಿರುವ ಆಕ್ರಮಣಕಾರಿ ನೀತಿಗಳನ್ನು ‘‘ನನ್ನ ನೈತಿಕತೆ’’ ಮಾತ್ರ ನಿಯಂತ್ರಿಸಬಲ್ಲದು ಎಂದು ಅವರು ಹೇಳಿದ್ದಾರೆ.
‘‘ನನಗೆ ಅಂತರ್‌ರಾಷ್ಟ್ರೀಯ ಕಾನೂನಿನ ಅಗತ್ಯವಿಲ್ಲ. ನಾನು ಜನರಿಗೆ ಹಾನಿ ಮಾಡುತ್ತಿಲ್ಲ’’ ಎಂದು ಗುರುವಾರ ‘ನ್ಯೂಯಾರ್ಕ್ ಟೈಮ್ಸ್’ನೊಂದಿಗೆ ಮಾತನಾಡಿದ ಅವರು ಹೇಳಿದರು.
ನೀವು ಅಂತರ್‌ರಾಷ್ಟ್ರೀಯ ಕಾನೂನನ್ನು ಪಾಲಿಸಬೇಕಾಗುತ್ತದೆಯೇ ಎಂಬ ಪ್ರಶ್ನೆಗೆ ಟ್ರಂಪ್, ‘‘ಹೌದು’’ ಎಂದು ಉತ್ತರಿಸಿದರು. ಆದರೆ, ಅದು ಅಂತರ್‌ರಾಷ್ಟ್ರೀಯ ಕಾನೂನಿಗೆ ನೀವು ಕೊಡುವ ವ್ಯಾಖ್ಯೆಯನ್ನು ಅವಲಂಬಿಸುತ್ತದೆ ಎಂದು ಹೇಳಿದರು.
ಶನಿವಾರ ಮುಂಜಾನೆ ಅಮೆರಿಕ ಸೇನೆಯು ವೆನೆಝುವೆಲದ ಮೇಲೆ ದಾಳಿ ನಡೆಸಿ ದೇಶದ ಅಧ್ಯಕ್ಷ ನಿಕೊಲಸ್ ಮಡುರೊ ಮತ್ತು ಅವರ ಪತ್ನಿಯನ್ನು ಅಮೆರಿಕಕ್ಕೆ ಅಪಹರಿಸಿದೆ. ದಾಳಿಯ ವೇಳೆ, ರಾಜಧಾನಿ ಕ್ಯಾರಕಸ್ ಮತ್ತು ವೆನೆಝುವೆಲ ಸೇನಾ ನೆಲೆಗಳ ಮೇಲೆ ಬಾಂಬ್‌ಗಳನ್ನು ಹಾಕಿದೆ.
ವೆನೆಝುವೆಲ ಅಧ್ಯಕ್ಷರ ಅಪಹರಣವು ವಿಶ್ವಸಂಸ್ಥೆ ಸನ್ನದಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ವೀಕ್ಷಕರು ಹೇಳುತ್ತಾರೆ. ಯವುದೇ ದೇಶದ ಭೂಭಾಗ ಸಾರ್ವಭೌಮತೆ ಅಥವಾ ರಾಜಕೀಯ ಸ್ವಾತಂತ್ರ್ಯದ ವಿರುದ್ಧ ಬಲ ಪ್ರಯೋಗಿಸುವುದು ಅಥವಾ ಬಲಪ್ರಯೋಗದ ಬೆದರಿಕೆ ಹಾಕುವುದನ್ನು ಈ ಸನ್ನದು ನಿಷೇಧಿಸುತ್ತದೆ.