ಅಮೆರಿಕ ವಶಪಡಿಸಿಕೊಂಡ ತೈಲ ಟ್ಯಾಂಕರ್‌ನಲ್ಲಿ ಮೂವರು ಭಾರತೀಯ ಸಿಬ್ಬಂದಿ ಇದ್ದರು: ರಶ್ಯ ಮಾಹಿತಿ
photo: timesofindia
ಮಾಸ್ಕೊ, ಜ. 9: ಅಮೆರಿಕ ಬುಧವಾರ ವಶಪಡಿಸಿಕೊಂಡಿರುವ ರಶ್ಯ ತೈಲ ಟ್ಯಾಂಕರ್‌ನಲ್ಲಿ ಮೂವರು ಭಾರತೀಯರು ಸೇರಿದಂತೆ ಒಟ್ಟು 28 ಮಂದಿ ಸಿಬ್ಬಂದಿ ಇದ್ದರು ಎಂದು ರಶ್ಯ ಅಧಿಕೃತವಾಗಿ ಪ್ರಕಟಿಸಿದೆ.
ರಶ್ಯ ಧ್ವಜವಿದ್ದ ಮರಿನೆರಾ ತೈಲ ಟ್ಯಾಂಕರನ್ನು ಕೆರಿಬಿಯನ್ ಸಮುದ್ರದಿಂದ ಹಿಂಬಾಲಿಸುತ್ತಾ ಬಂದ ಅಮೆರಿಕದ ನೌಕಾಪಡೆ ಉತ್ತರ ಅಟ್ಲಾಂಟಿಕ್‌ನಲ್ಲಿ ವಶಪಡಿಸಿಕೊಂಡಿದೆ ಎಂದು ರಶ್ಯಾದ ಸಾರಿಗೆ ಸಚಿವಾಲಯ ಹೇಳಿದೆ. ವೆನೆಝುವೆಲಾ ಜತೆ ಸಂಪರ್ಕ ಹೊಂದಿದ ಆರೋಪದಲ್ಲಿ ಈ ಟ್ಯಾಂಕರ್ ವಶಪಡಿಸಿಕೊಳ್ಳಲಾಗಿದೆ ಎಂದು ಅಮೆರಿಕನ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
‘ಬೆಲ್ಲಾ 1’ ಎಂಬ ಹೆಸರಿನ ಈ ತೈಲ ಸಾಗಾಣಿಕೆ ಹಡಗನ್ನು ಖಾಸಗಿ ವ್ಯಾಪಾರಿಯೊಬ್ಬರು ಬಾಡಿಗೆಗೆ ಪಡೆದಿದ್ದು, ಗಯಾನಾ ಧ್ವಜದಡಿ ಕಾರ್ಯಾಚರಣೆ ಮಾಡುತ್ತಿತ್ತು. ಇದರಲ್ಲಿ 28 ಮಂದಿ ಸಿಬ್ಬಂದಿ ಇದ್ದರು. ಅವರಲ್ಲಿ ಜಾರ್ಜಿಯಾದ ಆರು ಮಂದಿ, ಉಕ್ರೇನ್‌ನ 17 ಮಂದಿ, ಭಾರತದ ಮೂವರು ಹಾಗೂ ಇಬ್ಬರು ರಶ್ಯನ್ ಪ್ರಜೆಗಳು ಸೇರಿದ್ದಾರೆ ಎಂದು ಸಾರಿಗೆ ಇಲಾಖೆ ವಿವರಿಸಿದೆ.
ನಿರ್ಬಂಧಿತ ಟ್ಯಾಂಕರ್‌ಗಳ ನಿಷೇಧವನ್ನು ಉಲ್ಲಂಘಿಸಿದ ಆರೋಪದಲ್ಲಿ ಮತ್ತು ಹಡಗನ್ನು ಏರಲು ಅಮೆರಿಕದ ಕರಾವಳಿ ಕಾವಲು ಪಡೆಯ ಸಿಬ್ಬಂದಿ ಮಾಡಿದ ಪ್ರಯತ್ನಗಳಿಗೆ ಪ್ರತಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಈ ಹಡಗನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಮೆರಿಕದ ಅಧಿಕಾರಿಗಳು ಹೇಳಿದ್ದಾರೆ. ಅಮೆರಿಕದ ಸೇನೆ ಹಾಗೂ ಕರಾವಳಿ ಕಾವಲು ಪಡೆ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಟ್ಯಾಂಕರ್ ವಶಪಡಿಸಿಕೊಂಡಿದೆ ಎಂದು ಇಬ್ಬರು ಅಮೆರಿಕನ್ ಅಧಿಕಾರಿಗಳ ಹೇಳಿಕೆಯನ್ನು ಉಲ್ಲೇಖಿಸಿ ‘ರಾಯ್ಟರ್ಸ್’ ವರದಿ ಮಾಡಿದೆ.
ಇತ್ತೀಚಿನ ದಿನಗಳಲ್ಲಿ ಅಮೆರಿಕನ್ ಪಡೆಗಳು ರಶ್ಯಾದ ಹಡಗು ವಶಪಡಿಸಿಕೊಂಡಿರುವುದು ಇದೇ ಮೊದಲು. ವೆನೆಝುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಕಳೆದ ಶನಿವಾರ ವಶಕ್ಕೆ ಪಡೆದ ಬೆನ್ನಲ್ಲೇ ಈ ಕಾರ್ಯಾಚರಣೆ ನಡೆದಿದೆ.