ಡೀಪ್ ಫೇಕ್ ತಂತ್ರಜ್ಞಾನ ಬಳಸಿ ಲೈಂಗಿಕ ಪ್ರಚೋದಕ ಚಿತ್ರಗಳ ರಚನೆ: ಜಾಗತಿಕ ತರಾಟೆಯ ಬಳಿಕ ಮಸ್ಕ್‌ರ ‘Grok’ ಚಾಟ್‌ಬಾಟ್ ಗೆ ನಿರ್ಬಂಧ
photo:PTI
ಕ್ಯಾಲಿಫೋರ್ನಿಯಾ: ಎಲಾನ್ ಮಸ್ಕ್ ಮಾಲಕತ್ವದ AI ಚಾಟ್‌ಬಾಟ್ ‘ಗ್ರೋಕ್’ ಜನರ ಲೈಂಗಿಕ ಪ್ರಚೋದಕ ಡೀಪ್‌ಫೇಕ್ ಚಿತ್ರಗಳನ್ನು ರಚಿಸುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಜಾಗತಿಕ ಮಟ್ಟದಲ್ಲಿ ಆಕ್ರೋಶ ವ್ಯಕ್ತವಾದ ಬೆನ್ನಲ್ಲೇ, ಗ್ರೋಕ್ ತನ್ನ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಯಾವುದೇ ಚಿತ್ರಗಳನ್ನು ರಚಿಸುವ ಅಥವಾ ಸಂಕಲಿಸುವ ಅವಕಾಶವನ್ನು ಬಹುತೇಕ ಬಳಕೆದಾರರಿಗೆ ನಿರ್ಬಂಧಿಸಿದೆ.
ಎಲಾನ್ ಮಸ್ಕ್‌ರ ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆಯ ಮೂಲಕ ಪ್ರವೇಶ ಪಡೆಯಬಹುದಾದ ಗ್ರೋಕ್ ಎಐ ಚಾಟ್‌ಬಾಟ್, ದುರುದ್ದೇಶಪೂರಿತ ಬಳಕೆದಾರರ ಮನವಿಗೆ ಸ್ಪಂದಿಸಿ ಮಹಿಳೆಯರನ್ನು ಬಿಕಿನಿ ಧರಿಸಿದಂತೆ ಅಥವಾ ಲೈಂಗಿಕ ಪ್ರಚೋದಕ ರೂಪದಲ್ಲಿ ತೋರಿಸುವಂತೆ ಚಿತ್ರಗಳನ್ನು ಮಾರ್ಪಡಿಸುತ್ತಿದೆ ಎಂದು ಸಂಶೋಧಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೆಲವು ಪ್ರಕರಣಗಳಲ್ಲಿ ಮಕ್ಕಳ ಚಿತ್ರಗಳನ್ನೂ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂದು ಸಂಶೋಧಕರು ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ವಿಶ್ವದ ಹಲವು ದೇಶಗಳು ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆಯನ್ನು ಖಂಡಿಸಿದ್ದು, ಅದರ ವಿರುದ್ಧ ತನಿಖೆಗೂ ಆದೇಶಿಸಿವೆ.
ಈ ಬೆಳವಣಿಗೆಯ ನಡುವೆ, “ಚಿತ್ರಗಳ ರಚನೆ ಮತ್ತು ಸಂಕಲನವನ್ನು ಪಾವತಿಸಿದ ಚಂದಾದಾರರಿಗೆ ಮಾತ್ರ ಸೀಮಿತಗೊಳಿಸಲಾಗಿದೆ. ಈ ವೈಶಿಷ್ಟ್ಯಗಳಿಗೆ ಪ್ರವೇಶ ಪಡೆಯಲು ನೀವು ಚಂದಾದಾರರಾಗಬಹುದು” ಎಂದು ಚಿತ್ರಗಳ ಮಾರ್ಪಾಡು ಕುರಿತ ಮನವಿಗಳಿಗೆ ಗ್ರೋಕ್ ಶುಕ್ರವಾರ ಪ್ರತಿಕ್ರಿಯಿಸಿದೆ.
ಗ್ರೋಕ್‌ಗೆ ಇರುವ ಚಂದಾದಾರರ ಸಂಖ್ಯೆ ಸಾರ್ವಜನಿಕವಾಗಿ ಲಭ್ಯವಿಲ್ಲ. ಆದರೆ, ಹಿಂದಿನ ದಿನಗಳಿಗೆ ಹೋಲಿಸಿದರೆ ಗ್ರೋಕ್ ರಚಿಸುತ್ತಿದ್ದ ಲೈಂಗಿಕ ಪ್ರಚೋದಕ ಚಿತ್ರಗಳ ಸಂಖ್ಯೆಯಲ್ಲಿ ಗಮನಾರ್ಹ ಇಳಿಕೆ ಕಂಡುಬಂದಿದೆ ಎಂದು ವರದಿಯಾಗಿದೆ.
ಗ್ರೋಕ್‌ನ ಕಾನೂನುಬಾಹಿರ ಹಾಗೂ ಭಯಾನಕ ವರ್ತನೆ ವಿರುದ್ಧ ಯೂರೋಪಿಯನ್ ಒಕ್ಕೂಟ ಕಠಿಣ ಕ್ರಮಕ್ಕೆ ಮುಂದಾಗಿದ್ದು, ಫ್ರಾನ್ಸ್, ಭಾರತ, ಮಲೇಶಿಯಾ ಅಧಿಕಾರಿಗಳು ಹಾಗೂ ಬ್ರೆಝಿಲ್ ನ ಸಂಸದರು ಎಕ್ಸ್ ಸಾಮಾಜಿಕ ಮಾಧ್ಯಮ ವೇದಿಕೆಯ ವಿರುದ್ಧ ತನಿಖೆಗೆ ಆದೇಶಿಸಿದ್ದಾರೆ.