ಜೆ.ಡಿ. ವ್ಯಾನ್ಸ್ | Photo Credit : facebook  

ವಾಷಿಂಗ್ಟನ್: ‘ಮಿನಾಬ್ ನಲ್ಲಿ ಮಕ್ಕಳೊಂದಿಗೆ ನಿಮ್ಮ ತಂದೆಯ ಆಡಳಿತ ಏನು ಮಾಡಿತು ಎಂಬುದು ನಿಮಗೆ ಎಂದಿಗೂ ತಿಳಿಯದಿರಲಿ. ಒಂದು ವೇಳೆ ತಿಳಿದುಬಂದರೆ, ನಿಮ್ಮ ತಂದೆಯನ್ನೇ ಕೇಳಿ, ಅವರು ಏಕೆ ಮೌನವಾಗಿದ್ದರು?’ ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರ ನವಜಾತ ಪುತ್ರ ಅಲೆಕ್ಸ್ ನೀಲ್ ವ್ಯಾನ್ಸ್ ಅವರನ್ನು ಉದ್ದೇಶಿಸಿ ಘಾನಾದಲ್ಲಿರುವ ಇರಾನ್ ರಾಯಭಾರ ಕಚೇರಿಯು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಈ ಸಂದೇಶ ಗಮನ ಸೆಳೆದಿದೆ.

ಅಮೆರಿಕ ಮತ್ತು ಇಸ್ರೇಲ್ ನ ಜಂಟಿ ವೈಮಾನಿಕ ದಾಳಿಯಲ್ಲಿ ಇರಾನ್ ನ ಮಿನಾಬ್ನಲ್ಲಿರುವ ಶಾಲೆಯೊಂದರ ವಿದ್ಯಾರ್ಥಿಗಳು ಮೃತಪಟ್ಟಿರುವುದನ್ನು ಪ್ರಸ್ತಾಪಿಸಿರುವ ರಾಯಭಾರ ಕಚೇರಿಯು, ಈ ದುರಂತದ ಕುರಿತು ಅಮೆರಿಕದ ಆಡಳಿತದ ಮೌನವನ್ನು ಪ್ರಶ್ನಿಸಿದೆ. ಪಶ್ಚಿಮ ಆಫ್ರಿಕಾದ ಘಾನಾದಲ್ಲಿರುವ ಇರಾನ್ ರಾಯಭಾರ ಕಚೇರಿಯ ಅಧಿಕೃತ 'X' ಖಾತೆಯಲ್ಲಿ ಈ ಸಂದೇಶ ಪ್ರಕಟವಾಗಿದೆ.

‘ಈ ಜಗತ್ತಿಗೆ ಸ್ವಾಗತ, ಅಲೆಕ್ಸ್. ಇಲ್ಲಿ ನಿಮಗೆ ಬೆಚ್ಚಗಿನ ವಾತಾವರಣ ಮತ್ತು ಸುರಕ್ಷತೆ ಸಿಗಲಿ. ನೀವು ಇನ್ನೂ ನಿಮ್ಮ ತಾಯಿಯ ಗರ್ಭದಲ್ಲಿದ್ದಾಗ, ನಿಮ್ಮ ತಂದೆ ಭಾಗವಾಗಿರುವ ಆಡಳಿತವು ಇರಾನ್ ನ ಮುಗ್ಧ ಮಕ್ಕಳೊಂದಿಗೆ ಏನು ಮಾಡಿತು ಎಂಬುದು ನಿಮಗೆ ಎಂದಿಗೂ ತಿಳಿಯದಿರಲಿ ಎಂದು ನಾವು ಪ್ರಾರ್ಥಿಸುತ್ತೇವೆ’ ಎಂದು ಸಂದೇಶದಲ್ಲಿ ಹೇಳಲಾಗಿದೆ.

‘ಒಂದು ವೇಳೆ ನಿಮಗೆ ಅದರ ಬಗ್ಗೆ ತಿಳಿದುಬಂದರೆ, ಮಿನಾಬ್ ನಲ್ಲಿ ಕೊಲ್ಲಲ್ಪಟ್ಟ ಮಕ್ಕಳ ಕುರಿತು ನಿಮ್ಮ ತಂದೆ ಏಕೆ ಒಂದೇ ಒಂದು ವಿಷಾದದ ಮಾತನ್ನೂ ಆಡಲಿಲ್ಲ ಎಂದು ಅವರನ್ನು ಕೇಳಿ. ಸತ್ಯವೇನೆಂದರೆ, ಇದಕ್ಕೆ ಉತ್ತರಿಸಲು ಅವರಿಗೆ ಎಂದಿಗೂ ಸಾಧ್ಯವಾಗುವುದಿಲ್ಲ’ ಎಂದೂ ಇರಾನ್ ರಾಯಭಾರ ಕಚೇರಿ ಟೀಕಿಸಿದೆ.

ಜೆ.ಡಿ. ವ್ಯಾನ್ಸ್ ಅವರು ಮಗುವನ್ನು ಎತ್ತಿಕೊಂಡಿರುವ ಫೊಟೋದೊಂದಿಗೆ ಈ ಸಂದೇಶವನ್ನು ಹಂಚಿಕೊಳ್ಳಲಾಗಿದೆ. ಅಲೆಕ್ಸ್ ನೀಲ್ ವ್ಯಾನ್ಸ್ ಅವರು ಜೆ.ಡಿ. ವ್ಯಾನ್ಸ್ ಮತ್ತು ಅವರ ಪತ್ನಿ ಉಷಾ ವ್ಯಾನ್ಸ್ ದಂಪತಿಯ ನಾಲ್ಕನೇ ಮಗು.

ಫೆ. 28ರಂದು ಆರಂಭವಾದ ಅಮೆರಿಕ ಮತ್ತು ಇಸ್ರೇಲ್ ನ ಜಂಟಿ ವೈಮಾನಿಕ ದಾಳಿಗಳ ಸಂದರ್ಭದಲ್ಲಿ ಮಿನಾಬ್ ನ ಶಾಲೆಯ ಮೇಲೆ ದಾಳಿ ನಡೆದಿತ್ತು. ಈ ದಾಳಿಯಲ್ಲಿ ಹಲವಾರು ವಿದ್ಯಾರ್ಥಿಗಳು ಮೃತಪಟ್ಟಿದ್ದರು ಎಂದು ವರದಿಯಾಗಿದೆ. ಇರಾನ್ ನ ನಾಗರಿಕರು ಮತ್ತು ಮಕ್ಕಳು ಅನುಭವಿಸುತ್ತಿರುವ ಸಂಕಷ್ಟಗಳ ಕುರಿತು ವಾಷಿಂಗ್ಟನ್ ಮೌನ ವಹಿಸಿದೆ ಎಂಬುದು ಟೆಹರಾನ್ ನ ಆರೋಪಿಸಿದೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor