ಇರಾನ್ ವಿಷಯದಲ್ಲಿ ಇಸ್ರೇಲ್ ಪ್ರಧಾನಿ, ಸೇನಾ ಮುಖ್ಯಸ್ಥರ ನಡುವೆ ಭಿನ್ನಾಭಿಪ್ರಾಯ: ವರದಿ
ಎಯಾಲ್ ಝಮೀರ್ , ಬೆಂಜಮಿನ್ ನೆತನ್ಯಾಹು | Photo Credit : X
ಜೆರುಸಲೇಮ್, ಅ.26: ಇರಾನ್ ವಿರುದ್ಧ ಹೊಸ ಕಾರ್ಯಾಚರಣೆ ನಡೆಸುವ ವಿಷಯದಲ್ಲಿ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಮತ್ತು ಸೇನಾ ಮುಖ್ಯಸ್ಥ ಎಯಾಲ್ ಝಮೀರ್ ನಡುವೆ ಭಿನ್ನಾಭಿಪ್ರಾಯ ಮೂಡಿದೆ ಎಂದು ಅನಾಮಧೇಯ ಮೂಲಗಳನ್ನು ಉಲ್ಲೇಖಿಸಿ ಇಸ್ರೇಲ್ ನ ಚಾನೆಲ್ 12 ವರದಿ ಮಾಡಿದೆ.
ಝಮೀರ್ ಅವರು ತಮಗೆ ಬಂದ ನಿರ್ದೇಶನವನ್ನು ಅನುಷ್ಠಾನಗೊಳಿಸುವ ಮೊದಲು ವಿವರವಾದ ಚರ್ಚೆ, ಕಾನೂನು ಭರವಸೆಗಳು ಮತ್ತು ರಾಜಕೀಯ ನಾಯಕತ್ವದ ಸಹಿಗಳನ್ನು ಕೋರಿದ್ದರು. ಯುದ್ಧವನ್ನು ರಾಜಕೀಯ ಲಾಭಕ್ಕಾಗಿ ಬಳಸಿಕೊಳ್ಳಬಹುದು ಎಂಬ ಕಳವಳ ಸೇನೆಯಲ್ಲಿದೆ ಎಂದು ತನ್ನ ವರದಿಯಲ್ಲಿ ಚಾನೆಲ್ 12 ಹೇಳಿದೆ.
ಆದರೆ, ಈ ವರದಿಗಳು ಸಂಪೂರ್ಣ ಆಧಾರರಹಿತ. ಇಬ್ಬರ ನಡುವೆ ಸಂಪೂರ್ಣ ಸಮನ್ವಯವಿದೆ. ಚುನಾವಣೆಗೆ ಮೊದಲು ಇರಾನ್ ಮೇಲೆ ದಾಳಿ ಪ್ರಾರಂಭಿಸುವ ಯಾವುದೇ ಉದ್ದೇಶ ಇಸ್ರೇಲ್ ಕಡೆಯಿಂದ ಇರಲಿಲ್ಲ ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸೋಮವಾರ ಪ್ರತಿಪಾದಿಸಿದ್ದಾರೆ.
ವಿರೋಧ ಪಕ್ಷದ ನಾಯಕ ಯೈರ್ ಲಾಪಿಡ್ ಈ ವರದಿಯನ್ನು ಉಲ್ಲೇಖಿಸಿ, ಚುನಾವಣೆಯನ್ನು ಮುಂದೂಡುವ ಸಲುವಾಗಿ ನೆತನ್ಯಾಹು ಇರಾನ್ನೊಂದಿಗೆ ಸಂಘರ್ಷ ಮತ್ತು ಉದ್ವಿಗ್ನತೆಯನ್ನು ಸೃಷ್ಟಿಸಲು ಬಯಸಿದ್ದಾರೆ ಎಂದು ಆರೋಪಿಸಿದ್ದಾರೆ.