‘ಆಸಕ್ತಿದಾಯಕ ಐಡಿಯಾ’: ಇರಾನ್ ಪರಿಹಾರ ಕೇಳಿರುವುದರಿಂದ ತಮಗೂ ಪರಿಹಾರ ಬೇಕೆಂದ ಟ್ರಂಪ್
ಡೊನಾಲ್ಡ್ ಟ್ರಂಪ್ | Photo Credit : PTI
ಹೊಸದಿಲ್ಲಿ, ಆ.10: ಕಳೆದ ಐದು ತಿಂಗಳ ಯುದ್ಧದಲ್ಲಿ ತಮಗಾದ ಹಾನಿಗೆ ಪರಿಹಾರ ನೀಡಬೇಕು ಎಂದು ಇರಾನ್ ಕೇಳಿರುವುದನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ‘ಆಸಕ್ತಿದಾಯಕ ಐಡಿಯಾ’ ಎಂದು ಬಣ್ಣಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇರಾನ್ ನಿಂದಲೂ ಪರಿಹಾರ ಕೋರುವುದಾಗಿ ಅವರು ಹೇಳಿದ್ದಾರೆ.
ಭವಿಷ್ಯದಲ್ಲಿ ನಡೆಯುವ ಶಾಂತಿ ಮಾತುಕತೆಗಳ ಭಾಗವಾಗಿ, ಇರಾನ್ ಬೆಂಬಲಿಸಿದೆ ಅಥವಾ ನಡೆಸಿದೆ ಎಂದು ಹೇಳಲಾಗಿರುವ ದಶಕಗಳ ಹಿಂದಿನ ದಾಳಿಗಳು ಮತ್ತು ದೌರ್ಜನ್ಯಗಳನ್ನು ಉಲ್ಲೇಖಿಸಿರುವ ಟ್ರಂಪ್, ಅವುಗಳಲ್ಲಿ ಮೃತಪಟ್ಟವರು ಹಾಗೂ ಗಾಯಗೊಂಡವರಿಗೆ ಪರಿಹಾರ ನೀಡಬೇಕು ಎಂದು ಇರಾನ್ ಅನ್ನು ಒತ್ತಾಯಿಸಿದ್ದಾರೆ.
ಟ್ರುತ್ ಸೋಶಿಯಲ್ ನಲ್ಲಿ ಸೋಮವಾರ ಪ್ರಕಟಿಸಿದ ಪೋಸ್ಟ್‌ನಲ್ಲಿ, ಕಳೆದ ಐದು ತಿಂಗಳ ಯುದ್ಧದಿಂದ ತಮಗಾದ ಹಾನಿಗೆ ಪರಿಹಾರ ಕೇಳುತ್ತಿರುವ ಇರಾನ್‌ನ ‘ಆಸಕ್ತಿದಾಯಕ ಐಡಿಯಾ’ ತನಗೆ ಇಷ್ಟವಾಗಿದೆ ಎಂದು ಟ್ರಂಪ್ ಹೇಳಿದ್ದಾರೆ. ‘ಇದಕ್ಕೆ ಪ್ರತಿಯಾಗಿ, ಈಗ ನಾನು ಇಸ್ಲಾಮಿಕ್ ರಿಪಬ್ಲಿಕ್‌ನಿಂದ ಪರಿಹಾರವನ್ನು ಕೋರುತ್ತೇನೆ’ ಎಂದು ಅವರು ಬರೆದಿದ್ದಾರೆ.
ಇರಾನ್ ಒತ್ತಾಯಿಸುತ್ತಿರುವ ಪರಿಹಾರದ ವಿಷಯವು ಅಮೆರಿಕದೊಂದಿಗಿನ ಮಾತುಕತೆಗಳಲ್ಲಿ ‘ಎಂದಿಗೂ ಉಲ್ಲೇಖವಾಗಿಲ್ಲ’ ಎಂದೂ ಟ್ರಂಪ್ ಹೇಳಿದ್ದಾರೆ.
‘ಇದು ಒಂದು ಆಸಕ್ತಿದಾಯಕ ವಿಚಾರ. ಏಕೆಂದರೆ ಈಗ ನಾನು ಇರಾನ್ ನಿಂದ ಪರಿಹಾರವನ್ನು ಕೋರುತ್ತಿದ್ದೇನೆ. ಬಾಂಬ್‌ಗಳು ಮತ್ತು ಹಲವು ಸಂಘರ್ಷಗಳಲ್ಲಿ ಕೊಲ್ಲಲ್ಪಟ್ಟ ಹಾಗೂ ಗಂಭೀರವಾಗಿ ಗಾಯಗೊಂಡ ಎಲ್ಲ ಜನರಿಗೆ ಇರಾನ್ ಪರಿಹಾರ ನೀಡಬೇಕು. ಜನರಲ್ ಸೊಲೈಮಾನಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಗಳಲ್ಲಿ ಮೃತಪಟ್ಟವರು, ಯುಎಸ್‌ಎಸ್ ಕೋಲ್ ನಲ್ಲಿ ಮೃತಪಟ್ಟವರ ಕುಟುಂಬಗಳು ಹಾಗೂ ಯುದ್ಧದಲ್ಲಿ ಕೊಲ್ಲಲ್ಪಟ್ಟ ಸಾವಿರಾರು ಮಂದಿ ಇದರಲ್ಲಿ ಸೇರಿದ್ದಾರೆ’ ಎಂದು ಟ್ರಂಪ್ ಬರೆದಿದ್ದಾರೆ.
ಪರಿಹಾರದ ಕುರಿತ ತಮ್ಮ ಯೋಜನೆಯನ್ನೂ ವಿವರಿಸಿರುವ ಟ್ರಂಪ್, ಕಳೆದ 50 ವರ್ಷಗಳಲ್ಲಿ ಸಾರ್ವಜನಿಕ ದಂಗೆಗಳಲ್ಲಿ ಭಾಗವಹಿಸುವ ವೇಳೆ ಕೊಲ್ಲಲ್ಪಟ್ಟ ಪ್ರತಿಭಟನಾಕಾರರ ಕುಟುಂಬಗಳಿಗೂ ಪರಿಹಾರ ನೀಡಬೇಕು ಎಂದು ಹೇಳಿದ್ದಾರೆ. ಕಳೆದ ಐದು ತಿಂಗಳಲ್ಲಿ ಮೃತಪಟ್ಟ ಇತರ 52,000 ಮಂದಿಗೂ ಹಾನಿ ಪರಿಹಾರ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
‘ಭವಿಷ್ಯದಲ್ಲಿ ನಡೆಯುವ ಯಾವುದೇ ಮಾತುಕತೆಗಳಲ್ಲಿ ಈ ವಿಷಯವನ್ನು ದೃಢವಾಗಿ ಸೇರಿಸಿಕೊಳ್ಳುವಂತೆ ನನ್ನ ಪ್ರತಿನಿಧಿಗಳಿಗೆ ಸೂಚಿಸಿದ್ದೇನೆ’ ಎಂದು ಟ್ರಂಪ್ ತಿಳಿಸಿದ್ದಾರೆ.