ಹಾರ್ಮುಝ್ ಭದ್ರತಾ ಮಸೂದೆಗೆ ಇರಾನ್ ಸಂಸತ್ತು ಅಂಗೀಕಾರ ಮರು ತೆರೆಯಲು ಕಠಿಣ ಷರತ್ತು

Update: 2026-08-10 20:41 IST

Photo Credit : AP 

ಟೆಹರಾನ್, ಆ.10: ಇರಾನ್ ಸಂಸತ್ತು ಹಾರ್ಮುಝ್ ಭದ್ರತಾ ವಿಧೇಯಕವನ್ನು `ಸರ್ವಾನುಮತದಿಂದ' ಅಂಗೀಕರಿಸಿದೆ ಮತ್ತು ಅದನ್ನು ಮರುಪರಿಶೀಲಿಸಲು ಕಠಿಣ ಷರತ್ತುಗಳನ್ನು ವಿಧಿಸಿದೆ. ಇದರೊಂದಿಗೆ ಹೊಸ ಶಾಸನದ ಮೂಲಕ ಹಾರ್ಮುಝ್ ಜಲಸಂಧಿಯ ವಿಚಾರದಲ್ಲಿ ತನ್ನ ನಿಲುವನ್ನು ಅಧಿಕೃತಗೊಳಿಸಲು ಮುಂದಾಗಿದೆ.

ಇರಾನ್ ಸಂಸತ್ತಿನ ರಾಷ್ಟ್ರೀಯ ಭದ್ರತೆ ಮತ್ತು ವಿದೇಶಾಂಗ ನೀತಿ ಸಮಿತಿಯು ಹಾರ್ಮುಝ್ ಜಲಸಂಧಿ ಮತ್ತು ಪರ್ಷಿಯನ್ ಕೊಲ್ಲಿಯ ಭದ್ರತೆ ಮತ್ತು ಸುಸ್ಥಿರ ಅಭಿವೃದ್ಧಿಯನ್ನು ಖಚಿತಪಡಿಸಿಕೊಳ್ಳುವ ಕಾರ್ಯತಂತ್ರದ ಉಪಕ್ರಮದ ಸಾಮಾನ್ಯ ರೂಪುರೇಷೆಗಳನ್ನು ಸರ್ವಾನುಮತದಿಂದ ಅನುಮೋದಿಸಿದೆ ಎಂದು ಸಮಿತಿಯ ಮುಖ್ಯಸ್ಥ ಇಬ್ರಾಹಿಂ ಅಜೀಜಿ ಹೇಳಿದ್ದಾರೆ.

ಈ ಪ್ರಸ್ತಾವಿತ ಶಾಸನವು ಇರಾನ್‍ನ ಸರ್ವೋಚ್ಚ ನಾಯಕರ ಮಾರ್ಗದರ್ಶನಗಳನ್ನು ಅನುಸರಿಸುತ್ತದೆ ಮತ್ತು ಸಂಬಂಧಿತ ಸಂಸ್ಥೆಗಳ ಸಲಹೆಗಳನ್ನು ಒಳಗೊಂಡಿದೆ ಎಂದು ಅಜೀಜಿ ತಿಳಿಸಿದ್ದಾರೆ.

ಈ ಕ್ರಮವು ಟೆಹ್ರಾನ್ ಪ್ರಸ್ತುತ ನಿರ್ಬಂಧಗಳನ್ನು ಕೇವಲ ಹಂಗಾಮಿ ಯುದ್ಧಕಾಲದ ಕ್ರಮವೆಂದು ಪರಿಗಣಿಸುವ ಬದಲು, ಈ ಆಯಕಟ್ಟಿನ ಜಲಮಾರ್ಗದ ಸುತ್ತಲಿನ ಭದ್ರತೆಯನ್ನು ನಿರ್ವಹಿಸಲು ಒಂದು ಅಧಿಕೃತ ಚೌಕಟ್ಟನ್ನು ಸ್ಥಾಪಿಸಲು ಬಯಸುತ್ತದೆ ಎಂಬುದನ್ನು ಸೂಚಿಸುತ್ತದೆ.

ಷರತ್ತು ಈಡೇರಿಸುವವರೆಗೆ ಹಾರ್ಮುಝ್ ತೆರೆಯುವುದಿಲ್ಲ

ಅಮೆರಿಕವು ತನ್ನ ಷರತ್ತುಗಳನ್ನು ಈಡೇರಿಸುವವರೆಗೆ ಹಾರ್ಮುಝ್ ಜಲಸಂಧಿಯನ್ನು ತೆರೆಯುವುದಿಲ್ಲ ಎಂದು ಇರಾನ್ ಸೋಮವಾರ ತಿಳಿಸಿದೆ.

ತನ್ನ ಅಕ್ರಮ ಮತ್ತು ವಿನಾಶಕಾರಿ ಕ್ರಮಗಳನ್ನು ನಿಲ್ಲಿಸುವುದು ಹಾಗೂ ಅವುಗಳನ್ನು ಸರಿಪಡಿಸುವುದು ಅಮೆರಿಕದ ಜವಾಬ್ದಾರಿಯಾಗಿದೆ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಇಸ್ಮಾಯೀಲ್ ಬಗಾಯೀ ಹೇಳಿದ್ದಾರೆ.

ತನ್ನ ಬಂದರುಗಳ ಮೇಲಿನ ದಿಗ್ಬಂಧನವನ್ನು ತೆರವುಗೊಳಿಸಬೇಕು, ತಿಂಗಳುಗಳ ಕಾಲ ನಡೆದ ಯುದ್ಧದ ಹಾನಿಗೆ ಪರಿಹಾರ ನೀಡಬೇಕು, ಆರ್ಥಿಕ ನಿಬರ್ಂಧಗಳನ್ನು ರದ್ದುಗೊಳಿಸಬೇಕು ಮತ್ತು ತನ್ನ ಮುಟ್ಟುಗೋಲು ಹಾಕಿಕೊಳ್ಳಲಾದ ಆಸ್ತಿಯನ್ನು ಬಿಡುಗಡೆ ಮಾಡಬೇಕು ಎಂದು ಇರಾನ್ ಅಮೆರಿಕವನ್ನು ಆಗ್ರಹಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News