ಇರಾನ್ ಜತೆಗಿನ ಸಂಘರ್ಷದಿಂದ ಹೊರಬರಲು ಟ್ರಂಪ್ ಯತ್ನ: ವರದಿ
ಹಾರ್ಮುಝ್ ಜಲಸಂಧಿ ತೆರೆಯಲು ಇರಾನ್‌ನಿಂದ ಪರಿಹಾರ, ನಿರ್ಬಂಧ ತೆರವಿಗೆ ಪಟ್ಟು
ಡೊನಾಲ್ಡ್ ಟ್ರಂಪ್ | Photo Credit : PTI
ವಾಷಿಂಗ್ಟನ್: ಇರಾನ್ ವಿರುದ್ಧದ ಸಂಘರ್ಷವನ್ನು ಕೊನೆಗೊಳಿಸಿ ಅದರಿಂದ ಹೊರಬರಲು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪ್ರಯತ್ನಿಸುತ್ತಿದ್ದಾರೆ ಎಂದು ‘ದಿ ವಾಲ್ ಸ್ಟ್ರೀಟ್ ಜರ್ನಲ್’ (WSJ) ವರದಿ ಮಾಡಿದೆ.
ಇರಾನ್ ವಿರುದ್ಧ ಅಮೆರಿಕ ಹಲವು ತಿಂಗಳುಗಳಿಂದ ಮಿಲಿಟರಿ ದಾಳಿ ನಡೆಸಿದ್ದು, ನಿರ್ಬಂಧಗಳನ್ನು ಹೇರಿದೆ ಮತ್ತು ದಿಗ್ಬಂಧನ ವಿಧಿಸಿದೆ. ಇದರಿಂದ ಇರಾನ್‌ನ ಆರ್ಥಿಕತೆ ಮೇಲೆ ಒತ್ತಡ ಹೆಚ್ಚಾಗಿದೆ. ಇರಾನ್‌ನಲ್ಲಿ ಭಾರಿ ಹಣದುಬ್ಬರವಿದ್ದು, ಹಣದ ಕೊರತೆಯೂ ಇದೆ ಎಂದು ಟ್ರಂಪ್ ಹೇಳಿದ್ದಾರೆ.
‘ನಾವು ಅವರೊಂದಿಗೆ ಅನೌಪಚಾರಿಕವಾಗಿ ಮಾತುಕತೆ ನಡೆಸುತ್ತಿದ್ದೇವೆ. ಇರಾನ್ ನಲ್ಲಿ ಭಾರಿ ಹಣದುಬ್ಬರವಿದೆ ಮತ್ತು ಅವರ ಬಳಿ ಹಣವಿಲ್ಲ ಎಂಬುದನ್ನು ನಾವು ನೋಡುತ್ತಿದ್ದೇವೆ’ ಎಂದು ಟ್ರಂಪ್ ರವಿವಾರ ಹೇಳಿದ್ದಾರೆ.
ಟ್ರಂಪ್ ಅವರ ಇತ್ತೀಚಿನ ಹೇಳಿಕೆಗಳು ಅವರು ಸಂಘರ್ಷದಿಂದ ಹೊರಬರಲು ಮಾರ್ಗ ಹುಡುಕುತ್ತಿರುವುದನ್ನು ಸೂಚಿಸುತ್ತವೆ ಎಂದು WSJ ವರದಿ ಮಾಡಿದೆ.
►ಹಾರ್ಮುಝ್ ಜಲಸಂಧಿ ಪ್ರಮುಖ ವಿಷಯ
ಯುದ್ಧವನ್ನು ಕೊನೆಗೊಳಿಸುವ ಒಪ್ಪಂದದ ಭಾಗವಾಗಿ ಹಾರ್ಮುಝ್ ಜಲಸಂಧಿಯನ್ನು ಮತ್ತೆ ತೆರೆಯುವುದು ಅಮೆರಿಕದ ಪ್ರಮುಖ ಗುರಿಯಾಗಿದೆ. ಈ ಜಲಸಂಧಿಯ ಮೂಲಕ ಜಾಗತಿಕ ವಾಣಿಜ್ಯ ಹಡಗು ಸಂಚಾರ ನಡೆಯುತ್ತದೆ.
ಅಮೆರಿಕದ ಅಧಿಕಾರಿಗಳ ಪ್ರಕಾರ, ಇರಾನ್ ಹಾರ್ಮುಝ್ ಜಲಸಂಧಿಯನ್ನು ಸಂಪೂರ್ಣವಾಗಿ ಮತ್ತೆ ತೆರೆದರೆ, ಇರಾನ್ ವಿರುದ್ಧದ ಯುದ್ಧದಲ್ಲಿ ವಿಜಯ ಸಾಧಿಸಿರುವುದಾಗಿ ಟ್ರಂಪ್ ಘೋಷಿಸಬಹುದು. ಆದರೆ, ಜಲಸಂಧಿಯನ್ನು ತೆರೆಯುವ ಮೊದಲು ಅಮೆರಿಕ ಕೆಲವು ಷರತ್ತುಗಳನ್ನು ಈಡೇರಿಸಬೇಕು ಎಂದು ಇರಾನ್ ಹೇಳಿದೆ.
ಇರಾನ್ ವಿರುದ್ಧದ ಅಮೆರಿಕದ ದಾಳಿಗಳಿಂದ ಉಂಟಾದ ಹಾನಿಗೆ ಪರಿಹಾರ ನೀಡಬೇಕು. ಇರಾನ್ ಮೇಲಿನ ನಿರ್ಬಂಧಗಳನ್ನು ತೆಗೆದುಹಾಕಬೇಕು. ಇರಾನ್ ವಿರುದ್ಧದ ಮಿಲಿಟರಿ ಬೆದರಿಕೆಗಳನ್ನು ನಿಲ್ಲಿಸಬೇಕು ಎಂಬುದು ಟೆಹ್ರಾನ್ ನ ಪ್ರಮುಖ ಬೇಡಿಕೆಗಳು.
►ಒಮಾನ್ ಜತೆ ಮಾತುಕತೆ
ಹಾರ್ಮುಝ್ ಜಲಸಂಧಿಯ ಮೂಲಕ ಹಡಗು ಸಂಚಾರವನ್ನು ಪುನಃ ಆರಂಭಿಸುವ ಕುರಿತು ಒಮಾನ್ ಜತೆಗಿನ ಒಪ್ಪಂದವು ‘ಅಂತಿಮ ಹಂತದಲ್ಲಿದೆ’ ಎಂದು ಇರಾನ್ ವಿದೇಶಾಂಗ ಸಚಿವ ಅಬ್ಬಾಸ್ ಅರಾಕ್ಚಿ ರವಿವಾರ ಹೇಳಿದ್ದಾರೆ. ಆದರೆ, ಅಮೆರಿಕವು ಇರಾನ್‌ನ ಕೆಲವು ಬೇಡಿಕೆಗಳನ್ನು ಈಡೇರಿಸದಿದ್ದರೆ ಜಲಸಂಧಿಯನ್ನು ಮತ್ತೆ ತೆರೆಯುವುದಿಲ್ಲ ಎಂದು ಅರಾಕ್ಚಿ ಸ್ಪಷ್ಟಪಡಿಸಿದ್ದಾರೆ.
ಹಾರ್ಮುಝ್ ಜಲಸಂಧಿ ತೆರೆಯುವ ಕುರಿತು ಇರಾನ್ ಮುಂದಿಟ್ಟಿರುವ ಬೇಡಿಕೆಗಳು ಟ್ರಂಪ್ ಗೆ ಸಂಘರ್ಷದಿಂದ ‘ಗೌರವಯುತವಾಗಿ ಹೊರಬರಲು’ ಕಷ್ಟವಾಗುವಂತೆ ಮಾಡಿವೆ ಎಂದು ಸೆಂಟರ್ ಫಾರ್ ಸ್ಟ್ರಾಟೆಜಿಕ್ ಆ್ಯಂಡ್ ಇಂಟರ್‌ನ್ಯಾಷನಲ್ ಸ್ಟಡೀಸ್‌ನ ಮಧ್ಯಪ್ರಾಚ್ಯ ಕಾರ್ಯಕ್ರಮದ ನಿರ್ದೇಶಕರನ್ನು ಉಲ್ಲೇಖಿಸಿ WSJ ವರದಿ ಮಾಡಿದೆ.
ಟ್ರಂಪ್ ಹಲವು ಬಾರಿ ಯುದ್ಧವನ್ನು ಮತ್ತಷ್ಟು ವಿಸ್ತರಿಸುವ ಬೆದರಿಕೆ ಹಾಕಿದ್ದರೂ, ನಂತರ ಹಿಂದೆ ಸರಿದಿದ್ದಾರೆ. ಇತ್ತೀಚಿನ ಮಾತುಕತೆಗಳು ಇರಾನ್ ಕೂಡ ಮಾತುಕತೆಗೆ ಸಿದ್ಧವಿದೆ ಎಂಬುದನ್ನು ತೋರಿಸಿವೆ ಎಂದು WSJ ವರದಿ ಹೇಳಿದೆ.
►ಬಂದರುಗಳ ದಿಗ್ಬಂಧನ ತೆರವು
ಹಾರ್ಮುಝ್ ಜಲಸಂಧಿಯ ಮೂಲಕ ವಾಣಿಜ್ಯ ಹಡಗುಗಳ ಸಂಚಾರವನ್ನು ಯಾವುದೇ ಅಡೆತಡೆಯಿಲ್ಲದೆ ಪುನಃ ಆರಂಭಿಸುವ ಒಪ್ಪಂದವಾದ ಬಳಿಕ, ಇರಾನಿನ ಬಂದರುಗಳ ಮೇಲಿನ ದಿಗ್ಬಂಧನವನ್ನು ಅಮೆರಿಕ ತೆಗೆದುಹಾಕಲಿದೆ ಎಂದು ಅಮೆರಿಕದ ಅಧಿಕಾರಿಯೊಬ್ಬರು ಹೇಳಿದ್ದಾರೆ ಎಂದು ರಾಯಿಟರ್ಸ್ ವರದಿ ಮಾಡಿದೆ.
ಇರಾನ್ ತನ್ನ ಒಪ್ಪಂದದ ಬದ್ಧತೆಗಳನ್ನು ಜಾರಿಗೊಳಿಸುವುದಕ್ಕೆ ಅನುಗುಣವಾಗಿ ಅಮೆರಿಕವೂ ಕ್ರಮ ಕೈಗೊಳ್ಳಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಇರಾನ್ ಯುದ್ಧ ಪರಿಹಾರವಾಗಿ ಶತಕೋಟಿ ಡಾಲರ್‌ಗಳನ್ನು ಕೇಳುತ್ತಿರುವುದು ಟ್ರಂಪ್‌ಗೆ ಪ್ರಮುಖ ತೊಡಕಾಗಿದೆ ಎಂದು WSJ ವರದಿ ಮಾಡಿದೆ. ಆದರೆ, ಇರಾನ್‌ಗೆ ಅಮೆರಿಕದ ತೆರಿಗೆದಾರರ ಹಣವನ್ನು ನೀಡುವುದಿಲ್ಲ ಎಂದು ಟ್ರಂಪ್ ಹೇಳಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.