ಭಾರತದಲ್ಲಿನ ತನ್ನ ರಾಯಭಾರಿಯನ್ನು ಬದಲಾಯಿಸುವ ಕ್ರಮ ಪ್ರಾರಂಭಿಸಿದ ಸ್ಪೇನ್
ಚೀನಾದ ಗಾಯಕಿಯೊಂದಿಗೆ ಪ್ರಣಯ ಸಂಬಂಧ, ಹಣ ದುರುಪಯೋಗ ಆರೋಪ
ಹುವಾನ್ ಆಂಟೋನಿಯೊ ಮಾರ್ಚ್ ಪುಜೋಲ್ - Photo Credit : X @JindalGlobalUNI
ಮ್ಯಾಡ್ರಿಡ್, ಆ. 9: ನಿಯಮಗಳ ಉಲ್ಲಂಘನೆ, ಸಾರ್ವಜನಿಕ ಹಣದ ದುರುಪಯೋಗ ಮತ್ತು ಸಂಶಯಾಸ್ಪದ ಆರ್ಥಿಕ ವ್ಯವಹಾರಗಳ ವರದಿಗಳ ನಂತರ, ಸ್ಪೇನ್ ಸರಕಾರವು ಭಾರತದಲ್ಲಿನ ತನ್ನ ರಾಯಭಾರಿ ಹುವಾನ್ ಆಂಟೋನಿಯೊ ಮಾರ್ಚ್ ಪುಜೋಲ್ ಅವರನ್ನು ಬದಲಾಯಿಸಲು ಕ್ರಮಗಳನ್ನು ಪ್ರಾರಂಭಿಸಿದೆ.
ಮೇ ತಿಂಗಳಲ್ಲಿ ಸ್ಪೇನ್ ನ ವಿದೇಶಾಂಗ ಸಚಿವಾಲಯವು ಭ್ರಷ್ಟಾಚಾರ ವಿರೋಧಿ ಪ್ರಾಸಿಕ್ಯೂಟರ್ ಕಚೇರಿಗೆ ಸಲ್ಲಿಸಿದ ವರದಿಯ ನಂತರ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸ್ಪೇನ್ ನ ಮಾಧ್ಯಮ ಸಂಸ್ಥೆ ‘ದಿ ಆಬ್ಜೆಕ್ಟಿವ್’ ವರದಿ ಮಾಡಿದೆ.
ಭಾರತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಪ್ಯಾನಿಷ್ ಕಂಪೆನಿಗಳು ಮತ್ತು ರಾಜಸ್ಥಾನ ಸರಕಾರವನ್ನು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪ್ರಾಯೋಜಕತ್ವ ನೀಡುವಂತೆ ರಾಯಭಾರಿಯವರು ಸಂಪರ್ಕಿಸಿದ್ದರು. ಈ ಬಗ್ಗೆ ವಿದೇಶಾಂಗ ಸಚಿವಾಲಯಕ್ಕೆ ಮಾಹಿತಿ ನೀಡಿರಲಿಲ್ಲ ಮತ್ತು ರಾಯಭಾರ ಕಚೇರಿಯು ಯಾವುದೇ ಅಧಿಕೃತ ಆರ್ಥಿಕ ದಾಖಲೆಗಳನ್ನು ನಿರ್ವಹಿಸಿರಲಿಲ್ಲ ಎಂದು ವರದಿ ಸೇರಿಸಿದೆ.
ಈ ಪ್ರದರ್ಶನಗಳನ್ನು ‘ಸ್ಪೇನ್-ಇಂಡಿಯಾ ಡ್ಯುಯಲ್ ಇಯರ್’ನ ಭಾಗವಾಗಿ ಯೋಜಿಸಲಾಗಿತ್ತು. (ನಂತರ ಸ್ಪೇನ್ ಈ ಕಾರ್ಯಕ್ರಮಗಳನ್ನು ತಡೆಹಿಡಿಯಿತು.)
ಈ ಕಲಾವಿದರಲ್ಲಿ ‘ಸ್ಟೆಮ್ ಡ್ಯಾನ್ಸ್ ಕಂಪೆನಿ’, ಸ್ಪ್ಯಾನಿಷ್ ಟೆನರ್ ಜೋನ್ ಲೈನೆಜ್ ಮತ್ತು ಚೀನಾದ ಮೆಝೋ-ಸೊಪ್ರಾನೊ ಹುಯಿಲಿಂಗ್ ಝು ಸೇರಿದ್ದರು. ಹುಯಿಲಿಂಗ್ ಅವರು ರಾಯಭಾರಿಯೊಂದಿಗೆ ಪ್ರಣಯ ಸಂಬಂಧವನ್ನು ಹೊಂದಿದ್ದಾರೆ ಎಂಬ ವದಂತಿ ಇತ್ತು. ಈ ಕಲಾವಿದೆ ರಾಯಭಾರ ಕಚೇರಿಯ ಸಾಂಸ್ಕೃತಿಕ ಬಜೆಟ್ ನಿಂದ 18,000 ಯುರೋ ಪಡೆದಿದ್ದಾರೆ ಎಂದು ವರದಿ ತಿಳಿಸಿದೆ. ಆಕೆಯ ಗಾಯನದಲ್ಲಿ ಮುಖ್ಯವಾಗಿ ಸ್ಪ್ಯಾನಿಷ್ ಹಾಡುಗಳೇ ಇವೆ ಎಂದು ಹೇಳುವ ಮೂಲಕ ರಾಯಭಾರಿ ಈ ಧನಸಹಾಯವನ್ನು ಸಮರ್ಥಿಸಿಕೊಂಡಿದ್ದರು. ಆದರೆ, ಆಕೆಯ ಅಧಿಕೃತ ಪ್ರೊಫೈಲ್ ನಲ್ಲಿ ಸ್ಪ್ಯಾನಿಷ್ ಸಂಗೀತದ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದು ಹೇಳಲಾಗಿದೆ.
ಇದಲ್ಲದೆ, ರಾಜಸ್ಥಾನದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಕ್ಕಾಗಿ 5,000 ಯುರೋ ನೀಡುವಂತೆ ಸ್ಪ್ಯಾನಿಷ್ ವೀಸಾಗಳನ್ನು ಪ್ರಕ್ರಿಯೆಗೊಳಿಸುವ ಭಾರತೀಯ ಸಂಸ್ಥೆಯಾದ BLS ಜೊತೆಗೆ ರಾಯಭಾರಿ ಖಾಸಗಿ ಒಪ್ಪಂದ ಮಾಡಿಕೊಂಡಿದ್ದರು ಎಂದೂ ವರದಿಯಲ್ಲಿ ಆರೋಪಿಸಲಾಗಿದೆ.