ಜುಲೈನಲ್ಲಿ ಫೆಲೆಸ್ತೀನಿನ ಪತ್ರಕರ್ತರ ಮೇಲೆ ಇಸ್ರೇಲ್ ನಿಂದ 108 ಬಾರಿ ದಾಳಿ: ವರದಿ
ರಮಲ್ಲಾ: ಜುಲೈ ತಿಂಗಳಲ್ಲಿ ಫೆಲೆಸ್ತೀನಿನ ಪತ್ರಕರ್ತರು ಮತ್ತು ಮಾಧ್ಯಮ ಪ್ರತಿನಿಧಿಗಳ ಮೇಲೆ ಇಸ್ರೇಲ್ ಪಡೆಗಳು 108 ದಾಳಿ ನಡೆಸಿವೆ ಎಂದು ಫೆಲೆಸ್ತೀನಿನ ಪತ್ರಕರ್ತರ ಸಿಂಡಿಕೇಟ್‌ನ ಲಿಬರ್ಟೀಸ್ ಸಮಿತಿ ತಿಳಿಸಿದೆ. ಈ ಕುರಿತು ಫೆಲೆಸ್ತೀನಿನ ಸುದ್ದಿ ಸಂಸ್ಥೆ ವಾಫ ಉಲ್ಲೇಖಿಸಿ aljazeera ವರದಿ ಮಾಡಿದೆ.
ಪತ್ರಕರ್ತರನ್ನು ಬಂಧಿಸುವುದು, ಥಳಿಸುವುದು, ವಶಕ್ಕೆ ಪಡೆಯುವುದು ಮತ್ತು ಘಟನೆಗಳನ್ನು ವರದಿ ಮಾಡದಂತೆ ತಡೆಯುವುದು ಸೇರಿದಂತೆ ಹಲವು ರೀತಿಯ ಉಲ್ಲಂಘನೆಗಳು ನಡೆದಿವೆ. ವಸಾಹತುಗಾರರಿಂದ ದಾಳಿ, ಪತ್ರಕರ್ತರ ಮನೆಗಳು ಮತ್ತು ಪತ್ರಿಕಾ ಸಂಸ್ಥೆಗಳ ಮೇಲೆ ದಾಳಿ ಹಾಗೂ ಅವರ ಉಪಕರಣಗಳನ್ನು ವಶಪಡಿಸಿಕೊಳ್ಳುವುದು ಅಥವಾ ನಾಶಪಡಿಸುವುದೂ ನಡೆದಿದೆ ಎಂದು ಸಮಿತಿ ತಿಳಿಸಿದೆ.
ಬಂಧಿಸುವುದು ಮತ್ತು ಪತ್ರಕರ್ತರು ವರದಿ ಮಾಡದಂತೆ ತಡೆದ 58 ಪ್ರಕರಣಗಳು ದಾಖಲಾಗಿವೆ. ನಂತರ, ಬಾಂಬ್ ದಾಳಿಗಳಿಗೆ ಪತ್ರಕರ್ತರು ಒಳಗಾದ 12 ಪ್ರಕರಣಗಳು, ವಸಾಹತುಗಾರರಿಂದ ನಡೆದ 11 ದಾಳಿಗಳು ಹಾಗೂ ಪತ್ರಕರ್ತರನ್ನು ಥಳಿಸಿದ ಆರು ಪ್ರಕರಣಗಳು ದಾಖಲಾಗಿವೆ.
ಗಾಝಾದಲ್ಲಿ ನಡೆದ ಘಟನೆಗಳನ್ನು ವರದಿ ಮಾಡುವ ಸಂದರ್ಭದಲ್ಲಿ ನಾಲ್ವರು ಪತ್ರಕರ್ತರು ತೀವ್ರ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಸಿಂಡಿಕೇಟ್ ತಿಳಿಸಿದೆ.
ಪತ್ರಕರ್ತರ ಸುರಕ್ಷತೆಯನ್ನು ಖಾತರಿಪಡಿಸಬೇಕು ಹಾಗೂ ದಾಳಿಗಳು ಮತ್ತು ಇತರ ಉಲ್ಲಂಘನೆಗಳಿಗೆ ಕಾರಣರಾದವರನ್ನು ಹೊಣೆಗಾರರನ್ನಾಗಿ ಮಾಡಬೇಕು ಎಂದು ಸಿಂಡಿಕೇಟ್ ಆಗ್ರಹಿಸಿದೆ.