×
Ad

Pakistan | ಕಮರಿಗೆ ಬಸ್ ಉರುಳಿ ಕನಿಷ್ಠ 40 ಮಂದಿ ಮೃತ್ಯು

Update: 2026-07-03 23:29 IST

Photo Credit : bbc

ಕ್ವೆಟ್ಟಾ, ಜು.3: ಆಗ್ನೇಯ ಪಾಕಿಸ್ತಾನದಲ್ಲಿ ಶುಕ್ರವಾರ ಮುಂಜಾನೆ ಪ್ರಯಾಣಿಕರಿಂದ ಕಿಕ್ಕಿರಿದು ತುಂಬಿದ್ದ ಬಸ್ಸೊಂದು ಹೆದ್ದಾರಿಯಿಂದ ಜಾರಿ, ಬಂಡೆಗಲ್ಲುಗಳಿಂದ ಕೂಡಿದ ಕಮರಿಗೆ ಬಿದ್ದು ಸಂಭವಿಸಿದ ದುರಂತದಲ್ಲಿ ಕನಿಷ್ಠ 40 ಮಂದಿ ಮೃತಪಟ್ಟಿದ್ದು, ಇತರ ಎಂಟು ಮಂದಿ ಗಾಯಗೊಂಡಿದ್ದಾರೆ.

ನಿಯಂತ್ರಣ ತಪ್ಪಿದ ಬಸ್, ಬಲೂಚಿಸ್ತಾನ ಹಾಗೂ ಖೈಬರ್ ಪಖ್ತೂನ್ಖ್ವಾ ಪ್ರಾಂತಗಳ ಗಡಿ ಸಮೀಪದ ದುರ್ಗಮ ಪ್ರದೇಶವಾದ ಡಾನಾ ಸರ್ ಎಂಬಲ್ಲಿ ಕಮರಿಗೆ ಬಿದ್ದಿದೆ ಎಂದು ಬಲೂಚಿಸ್ತಾನ ಸರ್ಕಾರದ ವಕ್ತಾರ ಶಹೀದ್ ರಿಂಡ್ ತಿಳಿಸಿದ್ದಾರೆ.

ಈ ನತದೃಷ್ಟ ಬಸ್ ತನ್ನ ಪ್ರಯಾಣಿಕರನ್ನಲ್ಲದೆ, ದಾರಿಮಧ್ಯೆ ಕೆಟ್ಟು ನಿಂತಿದ್ದ ಇನ್ನೊಂದು ಬಸ್ನಲ್ಲಿದ್ದ ಪ್ರಯಾಣಿಕರನ್ನೂ ತುಂಬಿಕೊಂಡು ಪ್ರಯಾಣಿಸುತ್ತಿದ್ದಾಗ ಅಪಘಾತಕ್ಕೀಡಾಗಿದೆ. ದುರಂತದಲ್ಲಿ ಮೃತಪಟ್ಟವರನ್ನು ಗುರುತಿಸುವ ಕಾರ್ಯದಲ್ಲಿ ರಕ್ಷಣಾ ಸಿಬ್ಬಂದಿ ನಿರತರಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಬಸ್ ಅವಘಡಕ್ಕೆ ಪಾಕಿಸ್ತಾನದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಗಾಢ ವಿಷಾದ ವ್ಯಕ್ತಪಡಿಸಿದ್ದಾರೆ. ದುರಂತದಲ್ಲಿ ಸಾವನ್ನಪ್ಪಿದವರ ಕುಟುಂಬಗಳಿಗೆ ತೀವ್ರ ಸಂತಾಪ ಸೂಚಿಸಿರುವ ಅವರು, ಗಾಯಾಳುಗಳ ಶೀಘ್ರ ಚೇತರಿಕೆಗೆ ಹಾರೈಸಿದ್ದಾರೆ.

ಬಲೂಚಿಸ್ತಾನ ಮುಖ್ಯಮಂತ್ರಿ ಸರ್ಫರಾಜ್ ಭುಗ್ತಿ ಅವರು ದುರಂತದಲ್ಲಿ ಸಂಭವಿಸಿದ ಜೀವಹಾನಿಗೆ ತೀವ್ರ ಶೋಕ ವ್ಯಕ್ತಪಡಿಸಿದ್ದು, ಗಾಯಾಳುಗಳಿಗೆ ಸಾಧ್ಯವಿರುವ ಎಲ್ಲ ರೀತಿಯ ಉತ್ತಮ ವೈದ್ಯಕೀಯ ಚಿಕಿತ್ಸೆ ಒದಗಿಸುವಂತೆ ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News