×
Ad

ಖಾಮಿನೈ ಹತ್ಯೆಗೆ ಪ್ರತೀಕಾರ ತೀರಿಸಿಯೇ ಸಿದ್ಧ: ಇರಾನ್ ಸೇನಾವರಿಷ್ಠ ಹಟಾಮಿ ಶಪಥ

Update: 2026-07-03 23:38 IST

Photo Credit: Wikipedia via JNS

ಟೆಹರಾನ್, ಜು.3: ಇರಾನ್ ನ ಸರ್ವೋಚ್ಚ ನಾಯಕ ಆಯತೊಲ್ಲಾ ಅಲಿ ಖಾಮಿನೈ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಇರಾನ್ ಸೇನಾವರಿಷ್ಠ ಅಮಿರ್ ಹಟಾಮಿ ಶುಕ್ರವಾರ ಶಪಥ ಮಾಡಿದ್ದಾರೆ.

ಟೆಹರಾನ್ ನ ಮೊಸಲ್ಲಾ ಸಂಕೀರ್ಣದಲ್ಲಿ ಆಯತುಲ್ಲಾ ಅಲಿ ಖಾಮಿನೈ ಹಾಗೂ ಅವರ ಕುಟುಂಬ ಸದಸ್ಯರ ಪಾರ್ಥಿವ ಶರೀರಗಳ ಅಂತ್ಯಸಂಸ್ಕಾರ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಸಂದರ್ಭದಲ್ಲಿ ಹಟಾಮಿ ಈ ಹೇಳಿಕೆ ನೀಡಿದ್ದಾರೆ.

ಖಾಮಿನೈ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವ ತನ್ನ ಶಪಥದಿಂದ ಇರಾನ್ ಹಿಂದೆ ಸರಿದಿಲ್ಲ ಎಂದು ಆ ದೇಶದ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿ ಘೋಷಿಸಿದ ಕೆಲವೇ ದಿನಗಳ ಬಳಿಕ ಹಟಾಮಿ ಈ ಹೇಳಿಕೆ ನೀಡಿದ್ದಾರೆ.

"ಹುತಾತ್ಮ ಅಯಾತುಲ್ಲಾ ಖಾಮಿನೈ ಹಾಗೂ ಇರಾನ್ ನ ಬಲಿದಾನಿಗಳ ರಕ್ತಕ್ಕೆ ಸೇಡು ತೀರಿಸಿಕೊಳ್ಳುವ ಕುರಿತ ಕಡತ ಇನ್ನೂ ತೆರೆದಿದೆ" ಎಂದು ಇರಾನ್ ನ ಸರ್ವೋಚ್ಚ ರಾಷ್ಟ್ರೀಯ ಭದ್ರತಾ ಮಂಡಳಿಯ ಹೇಳಿಕೆಯಲ್ಲಿ ತಿಳಿಸಲಾಗಿದೆ.

"ಈ ಅಪರಾಧಗಳನ್ನು ಎಸಗಿದ ದಂಡನಾಯಕರು ಹಾಗೂ ಸೂತ್ರಧಾರಿಗಳು ಸೂಕ್ತ ಸಮಯದಲ್ಲಿ ನ್ಯಾಯದ ಕೈಗಳಲ್ಲಿ ಕಾನೂನು ಕ್ರಮವನ್ನು ಎದುರಿಸಲಿದ್ದಾರೆ. ಅದಕ್ಕೆ ಹೆಚ್ಚು ದಿನಗಳು ಬೇಕಾಗದು" ಎಂದು ಹಟಾಮಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News