×
Ad

ಇಂಡೋನೇಷ್ಯಾ | ಬಂಡುಕೋರರಿಂದ ಅಮೆರಿಕನ್ ಪೈಲಟ್ ಹತ್ಯೆ, ವಿಮಾನಕ್ಕೆ ಬೆಂಕಿ

Update: 2026-07-02 22:28 IST

Photo: X/@BambangPras6

ಜಕಾರ್ತ, ಜು.2: ಇಂಡೋನೇಷ್ಯಾದ ಅತ್ಯಂತ ಪೂರ್ವದಲ್ಲಿರುವ ಪ್ರಕ್ಷುಬ್ಧ ಪಪುವಾ ಪ್ರದೇಶದ ಬಂಡುಕೋರರು ಗುರುವಾರ ಅಮೆರಿಕನ್ ಪೈಲಟ್ ಒಬ್ಬರನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಮತ್ತು ನಾಗರಿಕ ವಿಮಾನವೊಂದಕ್ಕೆ ಬೆಂಕಿ ಹಚ್ಚಿದ್ದಾರೆ. ಇದು ಅಮೆರಿಕ ಮತ್ತು ಇಂಡೋನೇಷ್ಯಾ ಸರಕಾರಗಳಿಗೆ ನೀಡಿದ `ಸಂದೇಶ' ಎಂದು ಸ್ಥಳೀಯ ಪ್ರತ್ಯೇಕತಾವಾದಿ ಗುಂಪಿನ ವಕ್ತಾರರು ಬಣ್ಣಿಸಿದ್ದಾರೆ.

ಸಂಪನ್ಮೂಲ ಭರಿತ ಪಪುವಾದ ಪಶ್ಚಿಮಾರ್ಧದಲ್ಲಿ ಇಂಡೋನೇಷ್ಯಾದಿಂದ ಸ್ವಾತಂತ್ರ್ಯ ಪಡೆಯಲು ದೀರ್ಘಕಾಲದಿಂದ ಸಣ್ಣ ಮಟ್ಟದ ಹೋರಾಟ ನಡೆಯುತ್ತಿದೆ.

ಹೈಲ್ಯಾಂಡ್ ಪಪುವಾ ಪ್ರಾಂತ್ಯದ ಯಾಹುಕಿಮೊ ಪ್ರದೇಶದ ಬಲಿಂಗ್ಗಾಮಾ ಜಿಲ್ಲೆಯಲ್ಲಿ ವಿಮಾನ ಇಳಿದ ನಂತರ, ತಮ್ಮ ಸೈನಿಕರು ಅಮೆರಿಕನ್ ಪೈಲಟ್ ನಿಕೋಲಸ್ ಎಫ್. ಗೊಸ್ಸೆಲಿನ್ ಅವರನ್ನು ಗುಂಡಿಕ್ಕಿ ಹತ್ಯೆ ಮಾಡಿದರು ಮತ್ತು ಅವರ ವಿಮಾನಕ್ಕೆ ಬೆಂಕಿ ಹಚ್ಚಿದರು. ಈ ವಿಮಾನವು ಪದೇ ಪದೇ ಇಂಡೋನೇಷ್ಯಾದ ಮಿಲಿಟರಿ ಸಿಬ್ಬಂದಿಯನ್ನು ಕರೆತರುತ್ತಿತ್ತು ಮತ್ತು ನಮ್ಮ ಎಚ್ಚರಿಕೆಯನ್ನು ಉಲ್ಲಂಘಿಸುತ್ತಿತ್ತು' ಎಂದು ವೆಸ್ಟ್ ಪಪುವಾ ನ್ಯಾಷನಲ್ ಲಿಬರೇಶನ್ ಆರ್ಮಿ (ಟಿಪಿಎನ್‍ಪಿಬಿ) ಎಂಬ ಸಶಸ್ತ್ರ ಪ್ರತ್ಯೇಕತಾವಾದಿ ಗುಂಪಿನ ವಕ್ತಾರ ಸೆಬ್ಬಿ ಸಾಂಬೊಮ್ ಹೇಳಿಕೆ ನೀಡಿದ್ದಾರೆ.

ಇಂಡೋನೇಷ್ಯಾ ಸರಕಾರವು ನಾಗರಿಕ ವಿಮಾನಗಳನ್ನು ಬಂಡುಕೋರರ ನಿಯಂತ್ರಣದಲ್ಲಿರುವ ಪಪುವಾದ `ರೆಡ್ ಜೋನ್' ಗಳಿಗೆ ಪ್ರವೇಶಿಸಲು ಅನುಮತಿಸುವುದನ್ನು ಮುಂದುವರಿಸಿದರೆ, ಬಂಡುಕೋರರು ಇಂತಹ ದಾಳಿಗಳನ್ನು ನಡೆಸುತ್ತಲೇ ಇರುತ್ತಾರೆ ಎಂದು ಅವರು ಎಚ್ಚರಿಸಿದ್ದಾರೆ.

ಯಾಹುಕಿಮೊದ ಸ್ಥಳೀಯ ವಿಮಾನ ನಿಲ್ದಾಣದಲ್ಲಿ ಅಮೆರಿಕನ್ ಪೈಲಟ್ ಮತ್ತು ಏಳು ಪ್ರಯಾಣಿಕರಿದ್ದ ವಿಮಾನವೊಂದು ಸುಟ್ಟು ಕರಕಲಾಗಿರುವುದು ಪತ್ತೆಯಾಗಿದೆ. ವಿಮಾನದಲ್ಲಿದ್ದ ಎಲ್ಲಾ ಪ್ರಯಾಣಿಕರು ಪಪುವಾ ಮೂಲದವರಾಗಿದ್ದರು ಎಂದು ಪಪುವಾದಲ್ಲಿನ ಇಂಡೋನೇಷ್ಯಾದ ಜಂಟಿ ಪೊಲೀಸ್-ಮಿಲಿಟರಿ ಕಾರ್ಯಾಚರಣೆಯ ವಕ್ತಾರ ಯೂಸುಫ್ ಸುತೇಜೊ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News