Ukraine ಮೇಲೆ ರಷ್ಯಾ ಮತ್ತೆ ವಾಯುದಾಳಿ: ತಾಯಿ, ಮಗು ಸಹಿತ ಕನಿಷ್ಠ 4 ಮೃತ್ಯು
File Photo : AP, PTI
ಕೀವ್, ಜು.3: ಉಕ್ರೇನ್ ನ ಆಗ್ನೇಯ ಭಾಗದಲ್ಲಿರುವ ಸುಮಿ ಪ್ರಾಂತದ ಮೇಲೆ ರಷ್ಯನ್ ಸೇನೆ ಗುರುವಾರ ರಾತ್ರೋರಾತ್ರಿ ನಡೆಸಿದ ವಾಯುದಾಳಿಯಲ್ಲಿ ಶಿಶು ಹಾಗೂ ಅದರ ತಾಯಿ ಸೇರಿದಂತೆ ಕನಿಷ್ಠ ನಾಲ್ವರು ಸಾವನ್ನಪ್ಪಿದ್ದಾರೆ ಎಂದು ಸ್ಥಳೀಯ ಗವರ್ನರ್ ಶುಕ್ರವಾರ ತಿಳಿಸಿದ್ದಾರೆ.
ಉಕ್ರೇನ್ ರಾಜಧಾನಿ ಕೀವ್ನಲ್ಲಿ ರಷ್ಯಾ ನಡೆಸಿದ ಬೃಹತ್ ಕ್ಷಿಪಣಿ ಆಕ್ರಮಣದಲ್ಲಿ ಕನಿಷ್ಠ 30 ಮಂದಿ ಮೃತಪಟ್ಟ ಮರುದಿನವೇ ಈ ದಾಳಿ ನಡೆದಿದೆ.
ಸುಮಿ ಪ್ರಾಂತದಲ್ಲಿರುವ ರೊಮ್ಮಿ ವಸತಿ ಪ್ರದೇಶದ ಮೇಲೆ ರಷ್ಯಾ ರಾತ್ರೋರಾತ್ರಿ ಡ್ರೋನ್ ದಾಳಿ ನಡೆಸಿದೆಯೆಂದು ಸುಮಿ ಪ್ರಾಂತದ ಪ್ರಾದೇಶಿಕ ಸೇನಾಧಿಕಾರಿ ಓಲೆಗ್ ಗ್ರಿಗೊರೊವ್ ಅವರು ಟೆಲಿಗ್ರಾಂನಲ್ಲಿ ಪ್ರಕಟಿಸಿದ ಸಂದೇಶದಲ್ಲಿ ತಿಳಿಸಿದ್ದಾರೆ.
ರಷ್ಯನ್ ಡ್ರೋನ್ ವಸತಿ ಕಟ್ಟಡವೊಂದಕ್ಕೆ ಅಪ್ಪಳಿಸಿದ್ದು, ಬೆಂಕಿ ಹೊತ್ತಿಕೊಂಡಿತೆಂದು ಅವರು ಹೇಳಿದ್ದಾರೆ. ಘಟನೆಯಲ್ಲಿ ವಯೋವೃದ್ಧ, ಇಬ್ಬರು ಮಹಿಳೆಯರು ಹಾಗೂ ಸಣ್ಣ ಮಗು ಸಾವನ್ನಪ್ಪಿದೆಯೆಂದು ಗ್ರಿಗೊರೊವ್ ತಿಳಿಸಿದ್ದಾರೆ.
ಈ ಮಧ್ಯೆ, ಗಡಿಪ್ರದೇಶದಲ್ಲಿರುವ ಎರಡು ರಷ್ಯನ್ ಪ್ರಾಂತಗಳ ಮೇಲೆ ಉಕ್ರೇನ್ ನಡೆಸಿದ ಕ್ಷಿಪಣಿ ದಾಳಿಯಲ್ಲಿ ಇಬ್ಬರು ರಷ್ಯನ್ ನಾಗರಿಕರು ಸಾವನ್ನಪ್ಪಿರುವುದಾಗಿ ತಿಳಿದುಬಂದಿದೆ. ಉಕ್ರೇನ್ ನ ದಾಳಿಯಲ್ಲಿ ನಾಗರಿಕ ಮೂಲಸೌಕರ್ಯಗಳಿಗೆ ಹಾನಿಯಾಗಿದ್ದು, 3 ಲಕ್ಷಕ್ಕೂ ಅಧಿಕ ಜನಸಂಖ್ಯೆಯಿರುವ ನಗರದಲ್ಲಿ ನೀರು ಮತ್ತು ವಿದ್ಯುತ್ ಕೊರತೆ ಉಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬ್ರಿಯಾನ್ಸ್ಕ್ ಪ್ರಾಂತದಲ್ಲಿ ಶುಕ್ರವಾರ ನಡೆದ ಡ್ರೋನ್ ದಾಳಿಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದು, ಇನ್ನಿಬ್ಬರು ಗಾಯಗೊಂಡಿದ್ದಾರೆ ಎಂದು ಪ್ರಾದೇಶಿಕ ಗವರ್ನರ್ ಯೆಗೊರ್ ಕೊವಾಲ್ಚುಕ್ ತಿಳಿಸಿದ್ದಾರೆ.