ಬ್ರಿಟನ್ ವಾಯುನೆಲೆ ಬಳಿ ಬಂಧಿತರಾದ ಐವರು ಆರೋಪಿಗಳಿಗೆ ಜಾಮೀನು
Photo Credit : AP
ಲಂಡನ್, ಸೆ. 29: ಅಮೆರಿಕದ ಸೇನೆ ಬಳಸುತ್ತಿರುವ ಬ್ರಿಟನ್ ನ RAF Fairford ವಾಯುನೆಲೆಯ ಬಳಿ ಭಯೋತ್ಪಾದನೆ ಹಾಗೂ ಸ್ಫೋಟಕಗಳ ಕಾಯ್ದೆಯಡಿ ರವಿವಾರ ಬಂಧಿಸಲ್ಪಟ್ಟಿದ್ದ ಐವರು ಬ್ರಿಟಿಶ್ ಪ್ರಜೆಗಳನ್ನು ಸೋಮವಾರ ಜಾಮೀನಿನಲ್ಲಿ ಬಿಡುಗಡೆಗೊಳಿಸಲಾಗಿದೆ. ಆದರೆ ಅವರ ವಿರುದ್ಧದ ತನಿಖೆ ಮುಂದುವರಿಯಲಿದೆ ಎಂದು ಬ್ರಿಟನ್ ನ ಭಯೋತ್ಪಾದನಾ ನಿಗ್ರಹ ಪೊಲೀಸ್ ಪಡೆಯ ವರಿಷ್ಠ ಲಾರೆನ್ಸ್ ಟೇಲರ್ ತಿಳಿಸಿದ್ದಾರೆ.
ಫೇರ್ಫೋರ್ಡ್ನಲ್ಲಿರುವ RAF ವಾಯುನೆಲೆಯ ಬಳಿ ಮೂರು ವ್ಯಾನ್ ಗಳಲ್ಲಿ ಸಂಶಯಾಸ್ಪದವಾಗಿ ತಿರುಗಾಡುತ್ತಿದ್ದ ಐದು ಮಂದಿ ಆರೋಪಿಗಳನ್ನು ಬ್ರಿಟನ್ ಪೊಲೀಸರು ರವಿವಾರ ಬಂಧಿಸಿದ್ದರು. ಅವರ ವಿರುದ್ಧ ಭಯೋತ್ಪಾದಕ ಕೃತ್ಯಕ್ಕೆ ಸಿದ್ಧತೆ ನಡೆಸಿದ ಹಾಗೂ ಸ್ಫೋಟಕಗಳಿಗೆ ಸಂಬಂಧಿಸಿದ ಆರೋಪಗಳಡಿ ತನಿಖೆ ನಡೆಯುತ್ತಿದೆ.
ಈ ಪ್ರಕರಣದಲ್ಲಿ ಇರಾನ್ ಸೇರಿದಂತೆ ಯಾವುದೇ ಬಾಹ್ಯ ದೇಶದ ಕೈವಾಡವಿರುವ ಸಾಧ್ಯತೆಯನ್ನು ಬ್ರಿಟಿಶ್ ತನಿಖಾಧಿಕಾರಿಗಳು ಇನ್ನೂ ದೃಢಪಡಿಸಿಲ್ಲ. ಆದರೆ ಶಂಕಿತ ಆರೋಪಿಗಳಿಗೆ ಇರಾನ್, ರಶ್ಯ ಅಥವಾ ಇತರ ದೇಶಗಳ ಸಶಸ್ತ್ರ ಗುಂಪುಗಳ ಜೊತೆ ನಂಟಿದೆಯೇ ಎಂಬ ಬಗ್ಗೆ ತನಿಖೆ ಮುಂದುವರಿಸಿದ್ದಾರೆ. ವಿದೇಶಿ ಶಕ್ತಿಗಳ ಪರವಾಗಿ ಕೆಲಸ ಮಾಡುತ್ತಿರುವ ವ್ಯಕ್ತಿಗಳು ಅಥವಾ ಸಂಘಟನೆಗಳ ಕೈವಾಡವಿರುವ ಸಾಧ್ಯತೆಯ ಕುರಿತಾಗಿಯೂ ತನಿಖೆ ನಡೆಸಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.
ಈ ಮಧ್ಯೆ ಇರಾನ್ ನ ರಾಯಭಾರಿ ಕಚೇರಿ ಹೇಳಿಕೆಯೊಂದನ್ನು ನೀಡಿ, ಬ್ರಿಟನ್ ನಲ್ಲಿ ‘ಇರಾನೋಫೋಬಿಯಾ’ವನ್ನು ಹರಡಲು ಯತ್ನಿಸಲಾಗುತ್ತಿದೆ ಎಂದು ಆರೋಪಿಸಿದೆ. ಇದರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಹಕ್ಕು ತನಗಿರುವುದಾಗಿ ಹೇಳಿದೆ.
►ಜಾಮೀನು ಬಿಡುಗಡೆಗೆ ಟ್ರಂಪ್ ಕಿಡಿ
ಪ್ರಕರಣದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೇಳಿಕೆಯೊಂದನ್ನು ನೀಡಿ, ಈ ಘಟನೆಯ ಹಿಂದೆ ಇರಾನ್ ನ ಕೈವಾಡವಿರುವ ಸಾಧ್ಯತೆಯಿದೆ ಎಂದು ಆರೋಪಿಸಿದ್ದಾರೆ. ‘ಆರೋಪಿಗಳ ಬಗ್ಗೆ ನಮಗೆ ಎಲ್ಲವೂ ತಿಳಿದಿದೆ. ನಾವಾಗಿದ್ದರೆ ಅವರನ್ನು ಬಿಡುಗಡೆಗೊಳಿಸುತ್ತಿರಲಿಲ್ಲ’ ಎಂದವರು ಹೇಳಿದ್ದಾರೆ. ಅಮೆರಿಕದ ವಿದೇಶಾಂಗ ಸಚಿವ ಮಾರ್ಕೊ ರುಬಿಯೊ ಅವರು ಕೂಡಾ, ಈ ಆರೋಪಿಗಳನ್ನು ತನಿಖೆ ನಡೆಯುತ್ತಿರುವಾಗಲೇ ಜಾಮೀನಿನಲ್ಲಿ ಬಿಡುಗಡೆಗೊಳಿಸಿರುವುದರಿಂದ ಹಲವಾರು ಮಂದಿ ಆತಂಕಗೊಂಡಿದ್ದಾರೆ ಎಂದು ಹೇಳಿದ್ದಾರೆ.
ಆದರೂ ಬ್ರಿಟನ್ ನ ಫೇರ್ಫೋರ್ಡ್ ವಾಯುನೆಲೆಯ ಬಳಿ ಯಾವುದೇ ಸ್ಫೋಟಕ ವಸ್ತು ಪತ್ತೆಯಾಗಿರುವುದನ್ನು ಅಧಿಕಾರಿಗಳು ದೃಢಪಡಿಸಿಲ್ಲ. ಪ್ರಕರಣಕ್ಕೆ ಸಂಬಂಧಿಸಿ ಸಮಗ್ರ ತನಿಖೆ ಮುಂದುವರಿದಿದೆ.
ಈ ಮಧ್ಯೆ ಘಟನೆಗೆ ಸಂಬಂಧಿಸಿ ಬ್ರಿಟನ್ ಪ್ರಧಾನಿ ಆ್ಯಂಡಿ ಬರ್ನ್ಹ್ಯಾಮ್ ನೇತೃತ್ವದಲ್ಲಿ ನಡೆದ ತುರ್ತು ಸಭೆಯಲ್ಲಿ ಪರಿಸ್ಥಿತಿಯ ಪರಾಮರ್ಶೆ ನಡೆಸಲಾಯಿತು.