ಪಾಕಿಸ್ತಾನದಲ್ಲಿ ನಡೆಯುತ್ತಿರುವ SCO ಸಮನ್ವಯಕಾರರ ಸಭೆಯಲ್ಲಿ ಭಾಗವಹಿಸಿದ ಭಾರತ ನಿಯೋಗ
Photo Credit : PTI
ಇಸ್ಲಾಮಾಬಾದ್, ಸೆ. 28: ಉಭಯದೇಶಗಳ ದ್ವಿಪಕ್ಷೀಯ ಬಾಂಧವ್ಯವು ಹದಗೆಟ್ಟಿರುವ ಹೊರತಾಗಿಯೂ ಪಾಕ್ ಆತಿಥ್ಯದಲ್ಲಿ ಪಾಕ್ ರಾಜಧಾನಿ ಇಸ್ಲಾಮಾಬಾದ್ ನಲ್ಲಿ ನಡೆಯುತ್ತಿರುವ ಶಾಂಘೈ ಸಹಕಾರ ಸಂಘಟನೆ (SCO)ಯ ರಾಷ್ಟ್ರೀಯ ಸಮನ್ವಯಕಾರರ ಸಭೆಯಲ್ಲಿ ಭಾರತವು ಭಾಗವಹಿಸಿದೆ. ಸೆಪ್ಟೆಂಬರ್ 28ರಿಂದ 30ರವರೆಗೆ ನಡೆಯುತ್ತಿರುವ ಸಭೆಯಲ್ಲಿ ಭಾರತದ ನಿಯೋಗ ಭಾಗವಹಿಸಿದೆ.
ಸೋಮವಾರ ಆರಂಭಗೊಂಡ ಮೂರು ದಿನಗಳ ಸಮಾವೇಶದಲ್ಲಿ ಭಾರತದ ವಿದೇಶಾಂಗ ಸಚಿವಾಲಯದ ಬಹುಪಕ್ಷೀಯ ಆರ್ಥಿಕ ಬಾಂಧವ್ಯಗಳ ವಿಭಾಗದ ಹೆಚ್ಚುವರಿ ಕಾರ್ಯದರ್ಶಿ ಹಾಗೂ SCOನಲ್ಲಿ ಭಾರತದ ರಾಷ್ಟ್ರೀಯ ಸಮನ್ವಯಕಾರರಾದ ಅಲೋಕ್ ದಿಮ್ರಿ ಅವರು ಭಾರತೀಯ ನಿಯೋಗದ ನೇತೃತ್ವ ವಹಿಸಿದ್ದಾರೆ.
ಭಾರತ, ರಶ್ಯ, ಇರಾನ್, ಕಝಕಸ್ತಾನ, ಕಿರ್ಗಿಝಿಸ್ತಾನ, ಪಾಕಿಸ್ತಾನ, ತಜೆಕಿಸ್ತಾನ, ಉಝ್ಬೆಕಿಸ್ತಾನ, ಬೆಲಾರಸ್ ಹಾಗೂ ಚೀನಾ ಶಾಂಘೈ ಸಹಕಾರ ಸಂಘಟನೆಯ ಸದಸ್ಯ ರಾಷ್ಟ್ರಗಳಾಗಿವೆ.
SCOದ 2026–27ರ ಅಧ್ಯಕ್ಷ ಸ್ಥಾನವು ಸೆಪ್ಟೆಂಬರ್ 1ರಂದು ಕಿರ್ಗಿಝ್ ಸ್ತಾನದಿಂದ ಪಾಕಿಸ್ತಾನಕ್ಕೆ ಹಸ್ತಾಂತರಿಸಲ್ಪಟ್ಟಿತ್ತು. 2027ರ ಆಗಸ್ಟ್ ನಲ್ಲಿ SCO ಶೃಂಗಸಭೆ ನಡೆಯಲಿದ್ದು, ಅದರಲ್ಲಿ ಸದಸ್ಯ ರಾಷ್ಟ್ರಗಳ ವರಿಷ್ಠರು ಪಾಲ್ಗೊಳ್ಳಲಿರುವರು. ಇದಕ್ಕೆ ಪೂರ್ವಸಿದ್ಧತೆಯಾಗಿ ಮೂರು ದಿನಗಳ ಸಮನ್ವಯಕಾರರ ಸಭೆಯನ್ನು ಆಯೋಜಿಸಲಾಗಿದೆ.