Photo Credit : NDTV 

ಕಠ್ಮಂಡು, ಸೆ. 29: ನೇಪಾಳದ 23,345 ಅಡಿ ಎತ್ತರದ ಹಿಮ್ ಲುಂಗ್ ಪರ್ವತಶೃಂಗದ ತಳಭಾಗದಲ್ಲಿ ರವಿವಾರ ಮುಂಜಾನೆ ಸಂಭವಿಸಿದ ಭೀಕರ ಹಿಮಪಾತದ ಬಳಿಕ ನಾಪತ್ತೆಯಾದ 12 ಮಂದಿಯ ಶೋಧ ಕಾರ್ಯಾಚರಣೆಯನ್ನು ಪ್ರತಿಕೂಲ ಹವಾಮಾನದ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ. ಹಿಮಪಾತದಲ್ಲಿ ನಾಲ್ವರು ಮೃತಪಟ್ಟಿದ್ದು, 12 ಮಂದಿ ನಾಪತ್ತೆಯಾಗಿದ್ದಾರೆ.

ಹಿಮಪಾತ ಸಂಭವಿಸಿದ ಸ್ಥಳದಲ್ಲಿ ನಾಲ್ವರು ಮೃತದೇಹಗಳು ದೊರೆತಿದ್ದು, ಉಳಿದ 12 ಮಂದಿಗಾಗಿ ಶೋಧ ಕಾರ್ಯಾಚರಣೆ ನಡೆಸಲಾಗಿತ್ತು. ಆದರೆ ಭಾರೀ ಹಿಮಪಾತ ಹಾಗೂ ಪ್ರತಿಕೂಲ ಹವಾಮಾನ ಪರಿಸ್ಥಿತಿಯಿಂದಾಗಿ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಕೈಬಿಡಲಾಗಿದೆ.

ಹಿಮಪಾತದ ಬಳಿಕ ನಾಪತ್ತೆಯಾದ ಎಲ್ಲಾ 12 ಮಂದಿ ನೇಪಾಳಿ ಕಾರ್ಮಿಕರಾಗಿದ್ದು, ಇವರೆಲ್ಲಾ ಚೀನಾದ ಗಡಿಯಲ್ಲಿರುವ ಹಿಮ್ ಲುಂಗ್ ನಲ್ಲಿ ಪರ್ವತಾರೋಹಣಕ್ಕೆ ಬೇಕಾದ ಏರ್ಪಾಡುಗಳನ್ನು ಮಾಡಲು ನಿಯೋಜನೆಗೊಂಡಿದ್ದರು. ನಾಪತ್ತೆಯಾದ ಈ ಕಾರ್ಮಿಕರನ್ನು ಜೀವಂತವಾಗಿ ಪತ್ತೆ ಹಚ್ಚುವ ಭರವಸೆ ತೀರಾ ಕಡಿಮೆ ಎಂದು ರಕ್ಷಣಾ ತಂಡದ ನಾಯಕ ಮಿಂಗ್ಮಾ ಜಿ. ಶೆರ್ಪಾ ಅವರು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor