FBI 10 ಟಾಪ್ ಮೋಸ್ಟ್ ವಾಂಟೆಡ್ ಅಪರಾಧಿಗಳ ಪಟ್ಟಿಗೆ ಗ್ಯಾಂಗ್ ಸ್ಟರ್ ಗೋಲ್ಡಿ ಬ್ರಾರ್ ಸೇರ್ಪಡೆ
ಗೋಲ್ಡಿ ಬ್ರಾರ್ (Photo: TOI)
ವಾಷಿಂಗ್ಟನ್: ಗ್ಯಾಂಗ್ ಸ್ಟರ್ ಸತೀಂದರ್ ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್ ನನ್ನು ಅಮೆರಿಕದ ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (FBI) ತನ್ನ ಹತ್ತು ಮೋಸ್ಟ್ ವಾಂಟೆಡ್ ಅಪರಾಧಿಗಳ ಪಟ್ಟಿಗೆ ಸೇರ್ಪಡೆ ಮಾಡಿದೆ.
ಅಲ್ಲದೆ, ಗೋಲ್ಡಿ ಬ್ರಾರ್ ಕುರಿತು ವಿಶ್ವಾಸಾರ್ಹ ಸುಳಿವು ನೀಡುವವರಿಗೆ 10 ಲಕ್ಷ ಅಮೆರಿಕನ್ ಡಾಲರ್ (ಸುಮಾರು 8.3 ಕೋಟಿ ರೂ.) ಬಹುಮಾನ ನೀಡುವುದಾಗಿಯೂ ಅದು ಘೋಷಿಸಿದೆ.
“ದಕ್ಷಿಣ ಕ್ಯಾಲಿಫೋರ್ನಿಯಾ, ಅಮೆರಿಕ ಹಾಗೂ ಕೆನಡಾದಾದ್ಯಂತ ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಕೊಂಡಿದೆ ಎಂದು ಹೇಳಲಾಗಿರುವ ಲಾರೆನ್ಸ್ ಬಿಷ್ಣೋಯಿಯ ಸಂಘಟಿತ ಅಪರಾಧದ ಗುಂಪಿನಲ್ಲಿ ಸತೀಂದರ್ ಜೀತ್ ಸಿಂಗ್ ಭಾಗಿಯಾಗಿದ್ದಾನೆ ಎಂದು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ (FBI) ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಹೇಳಿಕೆಯ ಪ್ರಕಾರ, ಸತೀಂದರ್ ಜೀತ್ ಸಿಂಗ್ ಅಲಿಯಾಸ್ ಗೋಲ್ಡಿ ಬ್ರಾರ್, ಲಾರೆನ್ಸ್ ಬಿಷ್ಣೋಯಿ ಸಂಘಟಿತ ಅಪರಾಧ ಗುಂಪಿನೊಂದಿಗೆ ಸಂಪರ್ಕ ಹೊಂದಿದ್ದಾನೆ. ಹೀಗಾಗಿ, ಆತನನ್ನು ಮೋಸ್ಟ್ ವಾಂಟೆಡ್ ಪಟ್ಟಿಗೆ ಸೇರ್ಪಡೆ ಮಾಡಲಾಗಿದೆ ಎಂದು ಹೇಳಲಾಗಿದೆ.
ಈ ಸಂಘಟಿತ ಅಪರಾಧ ಗುಂಪು ಅಮೆರಿಕದ ವಿವಿಧ ಭಾಗಗಳಲ್ಲಿ, ದಕ್ಷಿಣ ಕ್ಯಾಲಿಫೋರ್ನಿಯಾ ಹಾಗೂ ಕೆನಡಾದಲ್ಲಿಯೂ ಹಲವು ಹಿಂಸಾತ್ಮಕ ಕೃತ್ಯಗಳಲ್ಲಿ ತೊಡಗಿಸಿಕೊಂಡಿದೆ ಎಂದು ಪ್ರಕಟಣೆಯಲ್ಲಿ ಆರೋಪಿಸಲಾಗಿದೆ.
ಗೋಲ್ಡಿ ಬ್ರಾರ್ ರಾಜಕೀಯ ಮತ್ತು ಧಾರ್ಮಿಕ ವ್ಯಕ್ತಿಗಳ ಹತ್ಯೆ, ಗುಂಡಿನ ದಾಳಿಗಳು, ಹತ್ಯೆ, ಅಪಹರಣ, ಸುಲಿಗೆ, ಹಲ್ಲೆ, ಮಾದಕ ದ್ರವ್ಯ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆಯಲ್ಲಿ ಭಾಗಿಯಾಗಿದ್ದಾನೆ. ಆತ ಶಸ್ತ್ರಸಜ್ಜಿತ ಅಪಾಯಕಾರಿ ವ್ಯಕ್ತಿಯಾಗಿದ್ದು, ಪರಾರಿಯಾಗುವ ಸಾಧ್ಯತೆ ಇದೆ ಎಂದು ಫೆಡರಲ್ ಬ್ಯೂರೊ ಆಫ್ ಇನ್ವೆಸ್ಟಿಗೇಷನ್ ಹೇಳಿದೆ.
ಗೋಲ್ಡಿ ಬ್ರಾರ್ ಪ್ರಸ್ತುತ ಅಮೆರಿಕದಲ್ಲಿದ್ದು, ಉತ್ತರ ಅಮೆರಿಕಾದಾದ್ಯಂತ ಈ ಅಪರಾಧ ಜಾಲದ ಕಾರ್ಯಾಚರಣೆಗಳನ್ನು ನಿರ್ವಹಿಸುತ್ತಿದ್ದಾನೆ ಎಂದು ಅದು ಆರೋಪಿಸಿದೆ.