ದೇಶದ್ರೋಹ ಪ್ರಕರಣ | ಶೇಖ್ ಹಸೀನಾ ವಿರುದ್ಧ ಫೆ. 9ರಂದು ಬಾಂಗ್ಲಾ ಕೋರ್ಟ್ ವಿಚಾರಣೆ
Update: 2026-01-21 22:20 IST
ಶೇಖ್ ಹಸೀನಾ | Photo Credit : PTI
ಢಾಕಾ, ಜ. 21: ಬಾಂಗ್ಲಾದೇಶದ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಹಾಗೂ ಇತರ 285 ಮಂದಿಯ ವಿರುದ್ಧ ದಾಖಲಿಸಲಾದ ದೇಶದ್ರೋಹ ಪ್ರಕರಣದಲ್ಲಿ ದೋಷಾರೋಪ ಹೊರಿಸುವ ಕುರಿತ ವಿಚಾರಣೆಯನ್ನು ಬಾಂಗ್ಲಾದೇಶದ ನ್ಯಾಯಾಲಯವು ಫೆಬ್ರವರಿ 9ರಂದು ನಡೆಸಲಿದೆ.
ಶೇಖ್ ಹಸೀನಾ ಹಾಗೂ ಅವಾಮಿ ಲೀಗ್‌ನ ನೂರಾರು ಸದಸ್ಯರು ಡಿಸೆಂಬರ್ 2024ರಲ್ಲಿ ‘ಜಯ್ ಬಾಂಗ್ಲಾ ಬ್ರಿಗೇಡ್’ ಎಂಬ ಹೆಸರಿನ ಸಂಘಟನೆಯ ವಿಡಿಯೊ ಕಾನ್ಫರೆನ್ಸ್ ನಲ್ಲಿ ಪಾಲ್ಗೊಂಡಿದ್ದರು. ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರ್ಕಾರವನ್ನು ಪದಚ್ಯುತಗೊಳಿಸಲು ಸಂಚು ರೂಪಿಸಿದ್ದರು ಎಂಬ ಆರೋಪಗಳಿಗೆ ಸಂಬಂಧಿಸಿದ ಪ್ರಕರಣ ಇದಾಗಿದೆ.
ಢಾಕಾ ವಿಶೇಷ ನ್ಯಾಯಾಲಯ–9ರ ನ್ಯಾಯಾಧೀಶ ಮೊಹಮ್ಮದ್ ಅಬ್ದುಸ್ಸಲಾಮ್ ಈ ಆದೇಶ ಹೊರಡಿಸಿದ್ದಾರೆ.
ಈ ಪ್ರಕರಣದ 286 ಆರೋಪಿಗಳ ಪೈಕಿ ಉಚ್ಚಾಟಿತ ಪ್ರಧಾನಿ ಶೇಖ್ ಹಸೀನಾ ಸೇರಿದಂತೆ 259 ಮಂದಿ ತಲೆಮರೆಸಿಕೊಂಡಿದ್ದು, ಅವರ ಅನುಪಸ್ಥಿತಿಯಲ್ಲೇ ನ್ಯಾಯಾಂಗ ವಿಚಾರಣೆ ನಡೆಯುತ್ತಿದೆ.