ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಡೆನ್ಮಾರ್ಕ್ ಕೃತಘ್ನತೆಯಿಂದ ವರ್ತಿಸಿದೆ: ದಾವೊಸ್ ಸಮಾವೇಶದಲ್ಲಿ ಟ್ರಂಪ್ ಆಕ್ರೋಶ
ಗ್ರೀನ್‌ಲ್ಯಾಂಡ್ ಸ್ವಾಧೀನಕ್ಕೆ ಬಲಪ್ರಯೋಗಿಸುವುದಿಲ್ಲವೆಂದು ಭರವಸೆ ನೀಡಿದ ಅಮೆರಿಕ ಅಧ್ಯಕ್ಷ
ಡೊನಾಲ್ಡ್ ಟ್ರಂಪ್ | Photo Credit : PTI \ AP
ದಾವೊಸ್, ಜ. 21: ಗ್ರೀನ್‌ಲ್ಯಾಂಡ್ ವಿಚಾರದಲ್ಲಿ ಡೆನ್ಮಾರ್ಕ್ ಅಮೆರಿಕದೊಂದಿಗೆ ಕೃತಘ್ನತೆಯಿಂದ ವರ್ತಿಸಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ ಅಸಮಾಧಾನ ವ್ಯಕ್ತಪಡಿಸಿದರು.
ಅಮೆರಿಕದ ಭದ್ರತೆಯ ದೃಷ್ಟಿಯಿಂದ ಗ್ರೀನ್‌ಲ್ಯಾಂಡ್ ಅತ್ಯಗತ್ಯವಾಗಿದ್ದರೂ, ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅದನ್ನು ಡೆನ್ಮಾರ್ಕ್‌ಗೆ ಬಿಟ್ಟುಕೊಟ್ಟು ಮೂರ್ಖತನ ಮಾಡಲಾಗಿದೆ ಎಂದು ಅವರು ವಿಷಾದಿಸಿದರು. ಗ್ರೀನ್‌ಲ್ಯಾಂಡ್ ಕುರಿತು ಅಮೆರಿಕದೊಂದಿಗೆ ಮಾತುಕತೆ ನಡೆಸುವಂತೆ ಯುರೋಪ್ ಒಕ್ಕೂಟದ ದೇಶಗಳಿಗೆ ಅವರು ಕರೆ ನೀಡಿದರು.
‘‘ಅಮೆರಿಕ, ರಷ್ಯಾ ಹಾಗೂ ಚೀನಾದ ನಡುವೆ ಇರುವ ಗ್ರೀನ್‌ಲ್ಯಾಂಡ್ ಒಂದು ಆಯಕಟ್ಟಿನ ಪ್ರದೇಶವಾಗಿದೆ. ಅತ್ಯಮೂಲ್ಯ ಖನಿಜಗಳ ಇರುವಿಕೆಯಿಂದಾಗಿ ಆ ಪ್ರದೇಶದ ಮಹತ್ವ ಇನ್ನಷ್ಟು ಹೆಚ್ಚಾಗಿದೆ. ಆದರೆ ಅಮೆರಿಕಕ್ಕೆ ಅದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಭದ್ರತೆಯ ದೃಷ್ಟಿಯಿಂದ ಅತ್ಯಂತ ಪ್ರಮುಖವಾಗಿದೆ,’’ ಎಂದರು. ಉತ್ತರ ಅಮೆರಿಕ ಖಂಡದ ಭಾಗವಾಗಿರುವ ಗ್ರೀನ್‌ಲ್ಯಾಂಡ್ ಅಮೆರಿಕದ ಗಡಿಯೂ ಹೌದು ಎಂದು ಅವರು ಗಮನಸೆಳೆದರು.
ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಅಮೆರಿಕದ ಪಡೆಗಳು ಗ್ರೀನ್‌ಲ್ಯಾಂಡ್ ಶತ್ರುಗಳ ಪಾಲಾಗದಂತೆ ತಡೆದವು. ಬಳಿಕ ಅಮೆರಿಕ ಅದನ್ನು ಡೆನ್ಮಾರ್ಕ್‌ಗೆ ಬಿಟ್ಟುಕೊಟ್ಟಿತು. ಆದರೆ ಡೆನ್ಮಾರ್ಕ್ ಅದಕ್ಕಾಗಿ ಅಮೆರಿಕದ ಬಗ್ಗೆ ಕೃತಜ್ಞತೆಯನ್ನು ಹೊಂದಿಲ್ಲ ಎಂದು ಟ್ರಂಪ್ ಕಟುವಾಗಿ ಹೇಳಿದರು.
ಗ್ರೀನ್‌ಲ್ಯಾಂಡ್ ಅಮೆರಿಕಕ್ಕೆ ಸೇರಿದ ಪ್ರದೇಶವೆಂದೇ ಟ್ರಂಪ್ ತಮ್ಮ ಭಾಷಣದಲ್ಲಿ ಪ್ರತಿಪಾದಿಸಿದರು. ಆದರೆ ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳಲು ಬಲಪ್ರಯೋಗಿಸುವುದಿಲ್ಲವೆಂದು ಇದೇ ಮೊದಲ ಬಾರಿಗೆ ಅವರು ಭರವಸೆ ನೀಡಿದರು.
ಅಮೆರಿಕ ಹಾಗೂ ಯುರೋಪ್ ಒಕ್ಕೂಟದ ನಡುವೆ ಒಡಕಿಗೆ ಕಾರಣವಾಗಿರುವ ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ಹೊರತುಪಡಿಸಿ ಮತ್ತ್ಯಾರೂ ರಕ್ಷಿಸಲು ಸಾಧ್ಯವಿಲ್ಲ ಎಂದು ಅವರು ಹೇಳಿದರು.
ತಮ್ಮ 70 ನಿಮಿಷಗಳ ಅವಧಿಯ ಭಾಷಣದಲ್ಲಿ, ‘‘ಜಗತ್ತಿನ ರಕ್ಷಣೆಗೆ ಈ ದೊಡ್ಡ ಹಿಮದ ತುಂಡು ನಮಗೆ ಬೇಕಾಗಿದೆ. ಆದರೆ ಅವರು (ಡೆನ್ಮಾರ್ಕ್) ಅದನ್ನು ನೀಡುತ್ತಿಲ್ಲ. ನೀವು ‘ಹೌದು, ಕೊಡುತ್ತೇವೆ’ ಎಂದರೆ ನಾವು ಅದನ್ನು ಶ್ಲಾಘಿಸುತ್ತೇವೆ. ಇಲ್ಲವೆಂದರೆ ನಾವದನ್ನು ನೆನಪಲ್ಲಿಟ್ಟುಕೊಳ್ಳುತ್ತೇವೆ,’’ ಎಂದು ಹೇಳಿದರು.
ಭಾರತ–ಪಾಕ್ ಕದನವಿರಾಮದಲ್ಲಿ ತಾವು ಮಧ್ಯಸ್ಥಿಕೆ ವಹಿಸಿರುವುದಾಗಿ ದಾವೊಸ್ ಸಮಾವೇಶದಲ್ಲೂ ಟ್ರಂಪ್ ಪುನರುಚ್ಚರಿಸಿದರು.
ಟ್ರಂಪ್ ಭಾಷಣದ ಕೆಲವು ಮುಖ್ಯಾಂಶಗಳು:
ಗ್ರೀನ್‌ಲ್ಯಾಂಡ್ ಅನ್ನು ಅಮೆರಿಕ ಸ್ವಾಧೀನಪಡಿಸಿಕೊಳ್ಳುವುದನ್ನು ವಿರೋಧಿಸುವ ದೇಶಗಳಿಗೆ ಶೇ.10ರಷ್ಟು ಹೆಚ್ಚುವರಿ ಸುಂಕ ವಿಧಿಸಲಾಗುವುದು.
ಯಾವ ದೇಶವೂ ಕಂಡಿರದ ರೀತಿಯಲ್ಲಿ ನನ್ನ ಆಡಳಿತದಲ್ಲಿ ಅಮೆರಿಕದ ಆರ್ಥಿಕತೆ ಬೆಳೆಯುತ್ತಲೇ ಹೋಗುತ್ತಿದೆ. ಇದಕ್ಕೆ ವಿರುದ್ಧವಾಗಿ ಯುರೋಪ್ ದೇಶಗಳ ಆರ್ಥಿಕತೆ ಜಡ್ಡುಗಟ್ಟಿದೆ.
ಗಾಝಾ ಸಂಘರ್ಷವನ್ನು ಶಾಶ್ವತವಾಗಿ ಕೊನೆಗೊಳಿಸಲು ರೂಪಿಸಿರುವ ಗಾಝಾ ಶಾಂತಿ ಮಂಡಳಿಗೆ ಸಾಂಪ್ರದಾಯಿಕ ಮಿತ್ರ ರಾಷ್ಟ್ರಗಳು ಸ್ವಾಗತಿಸಿವೆ.