×
Ad

Bangladesh| ಯುವ ನಾಯಕ ಉಸ್ಮಾನ್ ಹಾದಿ ಹತ್ಯೆ ಬೆನ್ನಲ್ಲೆ ಭುಗಿಲೆದ್ದ ಹಿಂಸಾಚಾರ: ಅವಾಮಿ ಲೀಗ್ ಕಚೇರಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು

ಭಾರತೀಯ ರಾಯಭಾರಿ ಕಚೇರಿಗೂ ಕಲ್ಲು ತೂರಾಟ

Update: 2025-12-19 10:32 IST

Photo| indiatoday

ಹೊಸದಿಲ್ಲಿ: ಬಾಂಗ್ಲಾದೇಶದಲ್ಲಿ ನಡೆದ 2024ರ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಯುವ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆ ಬೆನ್ನಲ್ಲೆ ರಾತ್ರೋರಾತ್ರಿ ಬಾಂಗ್ಲಾದೇಶದ ಹಲವಾರು ನಗರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಭುಗಿಲೆದ್ದಿದೆ. ಸಾವಿರಾರು ಜನರು ಶಹಬಾಗ್‌ನಲ್ಲಿ ಒಟ್ಟುಗೂಡಿ ಅಧಿಕಾರಿಗಳು ಅವರನ್ನು ರಕ್ಷಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.

ಕಳೆದ ವಾರ ಉಸ್ಮಾನ್ ಹಾದಿ ಅವರ ಹತ್ಯೆ ಯತ್ನ ನಡೆದಿತ್ತು. ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡಿದ್ದ ಅವರು ಸಿಂಗಾಪುರ ಆಸ್ಪತ್ರೆಯಲ್ಲಿ ಗುರುವಾರ ಕೊನೆಯುಸಿರೆಳೆದಿದ್ದಾರೆ. ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿ ಫಲಕಗಳನ್ನು ಪ್ರದರ್ಶಿಸಿದರು. ಹಲವರು ಬಹಿರಂಗವಾಗಿ ಭಾರತ ವಿರೋಧಿ ಮತ್ತು ಶೇಖ್ ಹಸೀನಾ ವಿರೋಧಿ ಘೋಷಣೆಯನ್ನು ಕೂಗಿದರು.

ಪ್ರತಿಭಟನಾಕಾರರು ಡೈಲಿ ಪ್ರೋಥೋಮ್ ಅಲೋ ಮತ್ತು ಡೈಲಿ ಸ್ಟಾರ್ ಕಚೇರಿಗಳನ್ನು ಧ್ವಂಸಗೊಳಿಸಿದರು. ರಾಜ್ಶಾಹಿಯಲ್ಲಿರುವ ಅವಾಮಿ ಲೀಗ್ ಕಚೇರಿಯನ್ನು ಕೂಡ ಪ್ರತಿಭಟನಾಕಾರರು ಸುಟ್ಟುಹಾಕಿದ್ದಾರೆ. ಚಟ್ಟೋಗ್ರಾಮ್‌ನಲ್ಲಿರುವ ಭಾರತೀಯ ಸಹಾಯಕ ಹೈಕಮಿಷನ್ ಕಚೇರಿ ಮೇಲೆ ಕಲ್ಲು ತೂರಾಟ ನಡೆದಿರುವ ಬಗ್ಗೆಯೂ ವರದಿಯಾಗಿದೆ.

ಉಸ್ಮಾನ್ ಹಾದಿ, ಮಾಜಿ ಪ್ರಧಾನಿ ಶೇಖ್ ಹಸೀನಾ ಅವರ ಪದಚ್ಯುತಿಗೆ ಕಾರಣವಾದ ಬಾಂಗ್ಲಾದೇಶದ 2024ರ ವಿದ್ಯಾರ್ಥಿ ದಂಗೆಯ ಸಮಯದಲ್ಲಿ ಮುನ್ನೆಲೆಗೆ ಬಂದಿದ್ದರು. ಉಸ್ಮಾನ್ ಹಾದಿ ನಿಧನದ ನಂತರ ಬಾಂಗ್ಲಾದೇಶದ ಹಿರಿಯ ಪತ್ರಕರ್ತ, New Age ಪತ್ರಿಕೆಯ ಸಂಪಾದಕ ನೂರುಲ್ ಕಬೀರ್ ಅವರ ಮೇಲೆ ಆಕ್ರೋಶಿತ ಗುಂಪೊಂದು ಹಲ್ಲೆ ನಡೆಸಿರುವ ಬಗ್ಗೆಯೂ ವರದಿಯಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News