×
Ad

ಸಿಂಧೂ ನದಿ ನೀರು ನಿರಾಕರಿಸಿದರೆ ಪಾಕಿಸ್ತಾನ ಯುದ್ಧಕ್ಕೆ ಇಳಿಯಲಿದೆ : ಬಿಲಾವಲ್ ಭುಟ್ಟೋ

Update: 2025-06-23 19:58 IST

Photo |  Reuters

ಇಸ್ಲಾಮಾಬಾದ್: ಸಿಂಧೂ ಜಲ ಒಪ್ಪಂದದಂತೆ ನ್ಯಾಯಯುತವಾಗಿ ನಮಗೆ ಕೊಡಬೇಕಾದ ಸಿಂಧೂ ನದಿ ನೀರಿನ ಪಾಲನ್ನು ಕೊಡಲು ಭಾರತ ನಿರಾಕರಿಸಿದರೆ ಪಾಕಿಸ್ತಾನ ಯುದ್ಧಕ್ಕೆ ಇಳಿಯಲಿದೆ ಎಂದು ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಝರ್ದಾರಿ ಹೇಳಿದ್ದಾರೆ.

ಎಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ 26 ಜನರು ಮೃತಪಟ್ಟ ನಂತರ ಭಾರತ 1960ರ ಒಪ್ಪಂದವನ್ನು ಸ್ಥಗಿತಗೊಳಿಸಿತ್ತು. ಕಳೆದ ವಾರ ಗೃಹ ಸಚಿವ ಅಮಿತ್ ಶಾ ಈ ಐತಿಹಾಸಿಕ ಒಪ್ಪಂದವನ್ನು ಎಂದಿಗೂ ಪುನಃಸ್ಥಾಪಿಸುವುದಿಲ್ಲ ಎಂದು ಹೇಳಿದ್ದರು.

ಸಂಸತ್ತಿನಲ್ಲಿ ಮಾಡಿದ ಭಾಷಣದಲ್ಲಿ ಬಿಲಾವಲ್ ಭುಟ್ಟೋ, ಒಪ್ಪಂದವನ್ನು ಸ್ಥಗಿತಗೊಳಿಸುವ ಭಾರತದ ನಿರ್ಧಾರವನ್ನು ವಿರೋಧಿಸಿದ್ದಾರೆ ಮತ್ತು ಪಾಕಿಸ್ತಾನದ ಪಾಲಿನ ನೀರನ್ನು ಪಡೆದೇ ತೀರುವುದಾಗಿ ಹೇಳಿದ್ದಾರೆ.

ಭಾರತಕ್ಕೆ ಎರಡು ಆಯ್ಕೆಗಳಿವೆ. ನೀರನ್ನು ನ್ಯಾಯಯುತವಾಗಿ ಹಂಚಿಕೊಳ್ಳಬೇಕು, ಇಲ್ಲವಾದರೆ ನಾವು ಆರು ನದಿಗಳಿಂದ ನೀರನ್ನು ಪಡೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

ಸಿಂಧೂ ಒಪ್ಪಂದ ಕೊನೆಗೊಂಡಿದೆ ಅಥವಾ ಸ್ಥಗಿತಗೊಂಡಿದೆ ಎಂಬ ಭಾರತದ ಹೇಳಿಕೆ ಕಾನೂನುಬಾಹಿರವಾಗಿದೆ. ಏಕೆಂದರೆ ಒಪ್ಪಂದ ಸ್ಥಗಿತಗೊಂಡಿಲ್ಲ. ಇದು ಪಾಕಿಸ್ತಾನ ಮತ್ತು ಭಾರತ ಎರಡೂ ದೇಶಗಳ ಬದ್ಧತೆಯಾಗಿದೆ. ನೀರನ್ನು ನಿಲ್ಲಿಸುವ ಬೆದರಿಕೆ ವಿಶ್ವಸಂಸ್ಥೆಯ ನಿಯಮಗಳ ಉಲ್ಲಂಘನೆಯಾಗಿದೆ ಎಂದು ಹೇಳಿದ್ದಾರೆ.

ಭಾರತ ಬೆದರಿಕೆಯನ್ನು ಮುಂದುವರಿಸಿದರೆ, ನಾವು ಮತ್ತೆ ಯುದ್ಧ ಮಾಡಬೇಕಾಗುತ್ತದೆ. ಭಾರತ ಮತ್ತು ಪಾಕಿಸ್ತಾನ ಮಾತುಕತೆಗೆ ನಿರಾಕರಿಸಿದರೆ ಮತ್ತು ಭಯೋತ್ಪಾದನೆಯ ಬಗ್ಗೆ ಯಾವುದೇ ಸಮನ್ವಯತೆ ಇಲ್ಲದಿದ್ದರೆ ಎರಡೂ ದೇಶಗಳಲ್ಲಿ ಹಿಂಸಾಚಾರ ತೀವ್ರಗೊಳ್ಳುತ್ತದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News