Photo Credit : binance.com

ಅಬುಧಾಬಿ: ವಿಶ್ವದ ಸಾರ್ವಕಾಲಿಕ ಅತಿದೊಡ್ಡ ಸೈಬರ್ ದರೋಡೆ ಎಂದು ಕರೆಯುತ್ತಿರುವ ಘಟನೆಯಲ್ಲಿ, ವಿಶ್ವದ ಅತಿದೊಡ್ಡ ಡಿಜಿಟಲ್ ಆಸ್ತಿ ಟ್ರೇಡಿಂಗ್ ವೇದಿಕೆಯಾದ ಕ್ರಿಪ್ಟೋಕರೆನ್ಸಿ ಎಕ್ಸ್‌ಚೇಂಜ್ ಸಂಸ್ಥೆ `ಬೈನಾನ್ಸ್' 6 ಶತಕೋಟಿ ಡಾಲರ್(ಸುಮಾರು 53 ಸಾವಿರ ಕೋಟಿ ರೂ.) ಮೌಲ್ಯದ ಭದ್ರತಾ ಉಲ್ಲಂಘನೆಗೆ ಒಳಗಾಗಿದೆ.

ಬಿಕ್ಕಟ್ಟನ್ನು ನಿಯಂತ್ರಿಸುವ ಕ್ರಮವಾಗಿ ಬೈನಾನ್ಸ್ ತನ್ನ ಪ್ಲಾಟ್‍ಫಾರ್ಮ್‍ನ ಎಲ್ಲಾ ವಹಿವಾಟುಗಳನ್ನು ಅಮಾನತುಗೊಳಿಸಿದ್ದು, ತುರ್ತು ಆಸ್ತಿಗಳನ್ನು ಫ್ರೀಜ್(ಸ್ಥಂಭನಗೊಳಿಸಲು) ಮಾಡಲು ಸಂಯೋಜನೆ ನಡೆಸುತ್ತಿದೆ. ಆರಂಭಿಕ ವಿಶ್ಲೇಷಣಾ ವರದಿಗಳ ಪ್ರಕಾರ, ಈ ಭದ್ರತಾ ಉಲ್ಲಂಘನೆಯ ಹಿಂದೆ ಉತ್ತರ ಕೊರಿಯಾದ ಹ್ಯಾಕರ್‌ಗಳಿರುವ ಶಂಕೆ ವ್ಯಕ್ತವಾಗಿದೆ.

ಗುರುವಾರ ಮಧ್ಯಾಹ್ನ ಬಳಕೆದಾರರ ವ್ಯಾಲೆಟ್‍ಗಳಿಂದ 5.7 ಶತಕೋಟಿ ಡಾಲರ್‌ಗಿಂತ ಹೆಚ್ಚು ಹಣ `ಮಾಯ' ಆಗಿರುವುದನ್ನು ಗಮನಿಸಲಾಗಿದೆ ಎಂದು ವರದಿಗಳು ತಿಳಿಸಿದ್ದು ಇದು ಸಾರ್ವಕಾಲಿಕ ಅತಿದೊಡ್ಡ ಸೈಬರ್ ದರೋಡೆ ಎಂದು ವಿಶ್ಲೇಷಕರು ಹೇಳಿದ್ದಾರೆ. ಪ್ರಾಥಮಿಕ ಆಂತರಿಕ ತನಿಖೆಯು ಆಂತರಿಕ ಭದ್ರತಾ ಗಡಿಗಳ ಉಲ್ಲಂಘನೆಯನ್ನು ಬಹಿರಂಗಪಡಿಸಿದೆ. ಗುರುವಾರ ತಡರಾತ್ರಿ, ಇಂಜಿನಿಯರ್ ಒಬ್ಬರ ಲ್ಯಾಪ್‍ಟಾಪ್‍ಗೆ ಕನ್ನ ಹಾಕಲಾಗಿದೆ. ಇದು ದಾಳಿಕೋರನಿಗೆ ಸರ್ವಿಸ್ ಕಂಟೇನರ್ ಪ್ರವೇಶಿಸಲು ಮತ್ತು ಅನಧಿಕೃತ ಹಿಂತೆಗೆದುಕೊಳ್ಳುವಿಕೆಯ (ವಿದ್‍ಡ್ರಾವಲ್) ವಹಿವಾಟುಗಳನ್ನು ಸಲ್ಲಿಸಲು ಅನುವು ಮಾಡಿಕೊಟ್ಟಿತು. ಸರ್ವಿಸ್ ಕಂಟೇನರ್ ಒಳಗಡೆ ಪ್ರವೇಶ ಪಡೆದ ನಂತರ, ಬಿಟ್‍ಕಾಯಿನ್ ಮತ್ತು ಎಥೆರಿಯಮ್ ಸೇರಿದಂತೆ ಹಲವು ಬ್ಲಾಕ್‍ಚೈನ್ ಇಕೋಸಿಸ್ಟಮ್‍ಗಳಲ್ಲಿ ಅಕ್ರಮ `ವರ್ಗಾವಣೆಗಳನ್ನು' ಪ್ರಾರಂಭಿಸಲಾಯಿತು.

ದಾಳಿಕೋರನು 10 ವಿಭಿನ್ನ ಬ್ಲಾಕ್‍ಚೈನ್‍ಗಳಲ್ಲಿದ್ದ ಬೈನಾನ್ಸ್ ವ್ಯಾಲೆಟ್‍ಗಳಿಂದ ಸುಮಾರು 53 ಸಾವಿರ ಕೋಟಿ ಹಣವನ್ನು ಹೊರಗೆಳೆಯುವಲ್ಲಿ ಯಶಸ್ವಿಯಾಗಿದ್ದಾನೆ. ಈ ಕಾರ್ಯಾಚರಣೆಯ ಬಹುಪಾಲು ಭಾಗವನ್ನು ಕೇವಲ 20 ನಿಮಿಷಗಳಲ್ಲಿ ಪೂರ್ಣಗೊಳಿಸಲಾಗಿದೆ. ಹ್ಯಾಕ್ ಆಗಿರುವುದು ತಿಳಿಯುತ್ತಿದ್ದಂತೆಯೇ ಸಂಸ್ಥೆಯು ತಕ್ಷಣವೇ ಕ್ರಮ ಕೈಗೊಂಡು ಸುಮಾರು 3 ಶತಕೋಟಿ ಡಾಲರ್ ಮೌಲ್ಯದ ಕ್ರಿಪ್ಟೊ ವಸ್ತುಗಳನ್ನು `ಫ್ರೀಝ್‌' ಮಾಡಲು ಯಶಸ್ವಿಯಾಗಿದೆ.

ಗ್ರಾಹಕರ ವಹಿವಾಟುಗಳನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸುವುದಾಗಿ ಬೈನಾನ್ಸ್ ಅಧಿಕೃತವಾಗಿ ಘೋಷಿಸಿದೆ. ಗ್ರಾಹಕರ ಯಾವುದೇ ನಷ್ಟವನ್ನು ಕಂಪೆನಿಯ ನಿಧಿಗಳು ಮತ್ತು ತುರ್ತು ಆಸ್ತಿ ನಿಧಿಯನ್ನು ಬಳಸಿಕೊಂಡು ನೇರವಾಗಿ ಭರಿಸಲಾಗುವುದು ಎಂದು ಅದು ಹೇಳಿದೆ. ಬೈನಾನ್ಸ್ ಸಹ-ಸಂಸ್ಥಾಪಕಿ ಯಿ ಹೆ ಈ ಬದ್ಧತೆಯನ್ನು ಪುನರುಚ್ಚರಿಸಿದ್ದು, ಎಕ್ಸ್‌ ಚೇಂಜ್ `ಎಲ್ಲಾ ಹ್ಯಾಕಿಂಗ್ ನಷ್ಟಗಳನ್ನು' ಭರಿಸಲಿದೆ ಎಂದು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor